ಲಾಯಿಲ: ಆರೋಗ್ಯ ಇಲಾಖೆಯಲ್ಲಿ ಕಿರಿಯ ಆರೋಗ್ಯ ಸಹಾಯಕಿಯಾಗಿ ನಿವೃತ್ತರಾಗಿದ್ದ ಲಾಯಿಲ ಪಡ್ಲಾಡಿ ಬೇಥೆಲ್ ಮನೆಯ ನಿವಾಸಿ ಜ್ಯೋತಿ ವಿಲಿಯಂ ಸೋನ್ಸ್ ( 66 ವ.) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಸೆ.29 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಆರೋಗ್ಯ ಇಲಾಖೆಯಲ್ಲಿ ಕಿರಿಯ ಆರೋಗ್ಯ ಸಹಾಯಕಿಯಾಗಿ ಕೊಡಗು ಜಿಲ್ಲೆಯ ವಿರಾಜಪೇಟೆ ಬಹುವರ್ಷಗಳ ಕಾಲ ಕರ್ತವ್ಯ ಸಲ್ಲಿಸಿದ್ದ ಅವರು ಉಜಿರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮತ್ತು ಬೆಳ್ತಂಗಡಿ ಸಮುದಾಯ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ 8 ವರ್ಷಗಳ ಹಿಂದೆ ಸ್ವಯಂ ನಿವೃತ್ತಿ ಪಡೆದಿದ್ದರು.
ಕಳೆದ ವರ್ಷ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿ ಒಂದು ಕಾಲು ಬೇರ್ಪಡಿಸಲಾಗಿತ್ತು.
ಆ ಸಂದರ್ಭ ಅವರ ಆರೋಗ್ಯ ತೀವ್ರವಾಗಿ ಕ್ಷೀಣಿಸಿ ಬಳಿಕ ಚೇತರಿಸಿಕೊಂಡಿದ್ದರು. ಮತ್ತೆ ಅವರಿಗೆ ಹೃದಯ ಸಂಬಂಧಿ ಖಾಯಿಲ ಉಲ್ಬಣಿಸಿ 5 ದಿನಗಳ ಹಿಂದೆ ಮಂಗಳೂರು ಆಸ್ಪತ್ರೆಗೆ ಸೇರಿಕೊಂಡಿದ್ದರು. ಅಲ್ಲಿ ಅವರು ನಿಧನರಾದರು.
ಸರಳ ಸಜ್ಜನಿಕೆ ಮತ್ತು ಸ್ನೇಹಮಯಿ ವ್ಯಕ್ತಿತ್ವದವರಾಗಿದ್ದ ಅವರು ಆರೋಗ್ಯ ಸಹಾಯಕಿಯಾಗಿದ್ದ ಸಂದರ್ಭದಲ್ಲಿ ಸವಣಾಲು,ಲಾಯಿಲ ಸೇರಿದಂತೆ ಅಕ್ಕ ಪಕ್ಕದ ಗ್ರಾಮಗಳಿಗೆ ದಿನದಲ್ಲಿ ಹತ್ತನ್ನೆರಡು ಕಿ.ಮೀ ನಡೆದೇ ಮನೆ ಮನೆ ಭೇಟಿ ನೀಡುತ್ತಾ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಬೆಳ್ತಂಗಡಿ ಸಿ.ಎಸ್.ಐ ದಿವ್ಯಾಶೀರ್ವಾದ ಚರ್ಚ್ನ ಸದಸ್ಯರಾಗಿದ್ದ ಅವರು ಮಹಿಳಾ ಅನ್ಯೋನ್ಯ ಕೂಟದ ಸದಸ್ಯರಾಗಿ, ಬೆಳ್ತಂಗಡಿ ತಾ. ನಿವೃತ್ತ ಸರಕಾರಿ ನೌಕರರು ಮತ್ತು ಹಿರಿಯ ನಾಗರಿಕರ ಸಂಘದ ಸದಸ್ಯರಾಗಿದ್ದರು.
ಮೃತರು ಪತಿ, ಬೆಳ್ತಂಗಡಿ ನ್ಯಾಯಾಲಯದ ನಿವೃತ ಅಮೀನ್ ವಿಲಿಯಂ ವಿಲ್ಸನ್ ಸೋನ್ಸ್, ಹೆಣ್ಣು ಮಕ್ಕಳಾದ ಜೋಸ್ಲಿ ಕ್ರಿಸ್ತಬೆಲ್ ಕೌಂಡ್ಸ್, ಜೆನಿಫರ್ ಸ್ನೇಹಾ ಮಾಬೆನ್, ಕೆ.ಎಂ.ಸಿ ಆಸ್ಪತ್ರೆಯ ಸ್ಟಾಫ್ ನರ್ಸ್ ಆಗಿರುವ ಜೋಸ್ನಾ ಸ್ವರ್ಣಲತಾ ಮತ್ತು ಧರ್ಮಗುರುಗಳಾಗಿ ಈಗಾಗಲೇ ನಿಯುಕ್ತರಾಗಿರುವ ಏಕೈಕ ಪುತ್ರ ಜೋಯೆಲ್ ಸುಹಾಸ್ ಸೋನ್ಸ್, ಹಾಗೂ ಸಹೋದರ ಸಹೋದರಿಯರು, ಮೊಮ್ಮಮ್ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರ ವಿಧಿಗಳು ಸೆ.30 ರಂದು ನಡೆದಿದ್ದು, ಮೃತರ ಮನೆಗೆ ಶಾಸಕ ಹರೀಶ್ ಪೂಂಜ ಸಹಿತ ಪ್ರಮುಖ ಗಣ್ಯರು ಭೇಟಿ ನೀಡಿ ಅಂತಿಮದರ್ಶನ ಪಡೆದರು.