ಬೆಳ್ತಂಗಡಿ: ನವ ಬೆಳ್ತಂಗಡಿ ಕನಸು ಹೊತ್ತು ತಾಲೂಕಿಗೆ ರೂ.458ಕೋಟಿ ವೆಚ್ಚದ ಕಾಮಗಾರಿಯನ್ನು ತಂದು ಅನುಷ್ಟಾನ ಮಾಡುತ್ತಿರುವ ಶಾಸಕ ಹರೀಶ್ ಪೂಂಜ ರವರ ಸಾಧನೆ ಎಲ್ಲರಿಗೂ ಅನುಕರಣೀಯ, ಅವರ ಬಗ್ಗೆ ಯಾವುದೇ ದಾಖಲೆಗಳಿಲ್ಲದೆ ಸುಳ್ಳು ಆರೋಪ ಮಾಡುತ್ತಿರುವ ಮಾಜಿ ಶಾಸಕ ವಸಂತ ಬಂಗೇರರಿಗೆ ಅವರ ಶಾಸಕತ್ವದ ಅನುಭವಕ್ಕೆ ಶೋಭೆಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದರು.
ಅವರು ಆ.31ರಂದು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿ ಈ ಹಿಂದಿನ ಶಾಸಕರ ಸಾಧನೆಗಳಿಗೆ ತುಳನೆ ಮಾಡಿದಾಗ ತಾಲೂಕಿನ ಜನತೆ ನೂತನ ಶಾಸಕರಿಗೆ ಅಭಿನಂದನೆ ಸಲ್ಲಿಸಲೇ ಬೇಕಾಗಿದೆ ಎಂದರು.
ಕಾಳಜಿ ರಿಲೀಫ್ ಫಂಡ್ ಲೆಕ್ಕ ಕೇಳಿದ್ದು ತಪ್ಪಲ್ಲ, ಶಾಸಕರು ದುರುಪಯೋಗ ಮಾಡಿದ್ದಾರೆ ಎಂದು ಹೇಳಿದ್ದು ಸರಿಯಲ್ಲ. ಇದು ಸರ್ವ ಧರ್ಮ, ಜಾತಿ ಪಕ್ಷ ಹೊರತು ಪಡಿಸಿ ಸಮಿತಿ, ನೆರೆಹಾನಿಯಿಂದ ಕಷ್ಟದಲ್ಲಿರುವವರಿಗೆ ಸ್ಪಂದಿಸಲು ತಾಲೂಕು ಮಟ್ಟದಲ್ಲಿ ರಚಿಸಿದ ಸಮಿತಿ, ಸಂಘ ಸಂಸ್ಥೆಗಳು ನೀಡಿದ ಹಣ ಸರಿಯಾಗಿ ಫಲಾನುಭವಿಗಳಿಗೆ ದೊರೆಯಬೇಕೆಂದು ಸಮಿತಿಯವರ ಇಚ್ಚೆ. ಇದರ ಲೆಕ್ಕ ಪತ್ರ ಪಾರದರ್ಶಕವಾಗಿದೆ ಇದನ್ನು ತಿಳಿದುಕೊಳ್ಳದೆ ಆರೋಪ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.
ವಸಂತ ಬಂಗೇರರು ಶಾಸಕರಾಗಿದ್ದ ವೇಳೆ ಅಭಿವೃದ್ದಿ ದೃಷ್ಟಿಯಿಂದ ಕಿನ್ಯಮ್ಮ ಹಾಲ್ ನಲ್ಲಿ ಸಭೆ ನಡೆಸಿದರು. ಇದರಲ್ಲಿ ನಾವು ಭಾಗಿಯಾಗಿದ್ದೆವು. ಅಲ್ಲಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸುತ್ತಿದ್ದರು. ಅರ್ಜಿಗಳು ಎಷ್ಟು ವಿಲೇ ಮಾಡಿದ್ದೀರಿ ಇದರ ಲೆಕ್ಕವನ್ನು ಕೊಡಿ ಎಂದು ವಸಂತ ಬಂಗೇರರನ್ನು ಪ್ರಶ್ನಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.