ದೇಹದಲ್ಲಿ ಕಣ್ಣು ಸೌಂದರ್ಯದ ಒಂದು ಅಂಗ. ಅದೇ ರೀತಿ ಹೊರಪ್ರಪಂಚದ ಸೌಂದರ್ಯವನ್ನು ನಮಗೆ ತೋರಿಸುವ ಬಹುಮುಖ್ಯ ಸಾಧನ. ಅತ್ಯಮೂಲ್ಯ ಪ್ರಜ್ಞೇಂದ್ರಿಯವಾದ ನೇತ್ರವನ್ನು ದಾನ ಮಾಡುವುದು ಶ್ರೇಷ್ಟ ಕಾರ್ಯ ಎಂದು ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷರಾದ ಡಾ| ಎಂ. ಕಾಶೀನಾಥ ಶೆಣೈ ತಿಳಿಸಿದರು.
ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಅಂಗವಾಗಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ವಿಶ್ವದಲ್ಲಿ ೩೭ ಮಿಲಿಯನ್ ಜನ ಅಂಧತ್ವದಿಂದ ಬಳಲುತ್ತಿದ್ದು, ಭಾರತದಲ್ಲಿ 15 ಮಿಲಿಯನ್ ಜನ ಕಣ್ಣಿನ ತೊಂದರೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಮರಣಾನಂತರ ಅತ್ಯಮೂಲ್ಯ ಕಣ್ಣುಗಳನ್ನು ಮಣ್ಣು ಮಾಡಬೇಡಿ, ದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಬೇಕೆಂದು ಆಗ್ರಹಿಸಿದರು.
ಡಾ| ಬಾಲಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಮೆಡಿಕಲ್ ಟ್ರಸ್ಟ್ ಕಾರ್ಯದರ್ಶಿ ಶಿಶುಪಾಲ ಪೂವಣಿ ಉಪಸ್ಥಿತರಿದ್ದರು. ರಾಘವೆಂದ್ರ. ಕೆ ಸ್ವಾಗತಿಸಿ, ಚಿತ್ರಾ ಕೆ.ಎಸ್ ಧನ್ಯವಾದ ಅರ್ಪಿಸಿದರು.