ಬೆಳ್ತಂಗಡಿ: ರಂಗಮನೆ ಸಾಂಸ್ಕಕೃತಿ ಪ್ರತಿಷ್ಠಾನ ಸುಳ್ಯ ಇದರ ವತಿಯಿಂದ ಯಕ್ಷಗಾನದ ಹಿರಿಯ ಅರ್ಥದಾರಿ, ವಾಗ್ಮಿ, ವಿದ್ವಾಂಸ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಯವರಿಗೆ `ವನಜ ರಂಗಮನೆ ಪ್ರಶಸ್ತ್ರಿ-2020′ ಪ್ರದಾನ ಸಮಾರಂಭ ಆ.28ರಂದು ಶಾಸ್ತ್ರಿಗಳ ಮನೆ ಪಡಂಗಡಿ ಗ್ರಾಮದ ಕನ್ನಡಿಕಟ್ಟೆಯಲ್ಲಿ ಜರುಗಿತು.
ಸುಳ್ಯ ರಂಗಮನೆ ಸಾಂಸ್ಕøತಿಕ ಕಲಾ ಕೇಂದ್ರದ ಅಧ್ಯಕ್ಷ ಜೀವನ್ರಾಂ ಸುಳ್ಯ ಅವರು ತಮ್ಮ ಮಾತೃಶ್ರೀಯವರ ಹೆಸರಿನಲ್ಲಿ ಕೊಡಮಾಡಿದ ವನಜ ರಂಗಮನೆ ಪ್ರಶ್ತಿಯನ್ನು ಗೋಪಾಲಕೃಷ್ಣ ಶಾಸ್ತ್ರಿಯವರಿಗೆ ಸಮರ್ಪಿಸಿ, ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಯಕ್ಷ ಪೋಷಕ, ಸಂಘಟಕ ಧರ್ಮಸ್ಥಳ ಜಮಾ ಉಗ್ರಾಣ ಮುತ್ಸದ್ಧಿ ಬಿ. ಭುಜಬಲಿ ಅವರು ವಹಿಸಿ, ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಗೋಪಾಲಕೃಷ್ಣ ಶಾಸ್ತ್ರಿಯವರಿಗೆ ಈ ಪ್ರಶಸ್ತಿಯನ್ನು ನೀಡಿರುವುದು ಈ ಕ್ಷೇತ್ರಕ್ಕೆ ಸಂದ ಗೌರವವಾಗಿದೆ. ಅವರ ಆದರ್ಶ ಎಲ್ಲಾ ಕಲಾವಿದರಿಗೆ ಪ್ರೇರಣೆಯಾಗಿದೆ ಎಂದು ಅವರಿಗೆ ಶುಭ ಹಾರೈಸಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ರಾಧಕೃಷ್ಣ ಕಲ್ಚಾರ್ ಅಭಿನಂದನಾ ನುಡಿಯಲ್ಲಿ ಶಾಸ್ತ್ರಿಯವರು ಶೇಣಿ, ಸಾಮಗ, ದೇರಾಜೆಯಂತಹ ಮಹಾನ್ ಕಲಾವಿದರ ಜೊತೆಯಲ್ಲೆ ಯಕ್ವಗಾನ ಕಲಾವಿದರಾಗಿ ಸಾಧನೆ ಮಾಡಿದವರು. ಇವರು ತಾಳಮದ್ದಳೆಯಲ್ಲಿ ಹೆಚ್ಚು ಪ್ರಸಿದ್ಧರಾಗಿದ್ದಾರೆ ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಜೀವನ್ರಾಂ ಸುಳ್ಯ ಅವರು ಮಾತನಾಡಿ, ನನ್ನ ಅಮ್ಮ ಅವಿದ್ಯಾವಂತರು ತಂದೆ ಯಕ್ಷಗಾನ ಕಲಾವಿದರು. ಆದರೆ ಅಮ್ಮ ಯಕ್ಷಗಾನ ಕಲಾವಿದರನ್ನು ಪ್ರೀತಿಸಿದವರು, ಪ್ರೋತ್ಸಾಹಿಸಿದವರು, ಅವರ ನೆನಪಿನಲ್ಲಿ ಪ್ರತಿ ವರ್ಷ ಯಕ್ಷಗಾನ ಕ್ಷೇತ್ರದ ವಿವಿಧ ವಿಭಾಗಗಳ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡುತ್ತಾ ಬರುತ್ತಿದದ್ದೇವೆ ಎಂದರು.
ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಯವರು ಕಲಾವಿದನೊಬ್ಬ ಇನ್ನೊಬ್ಬ ಕಲಾವಿದನನ್ನು ಸನ್ಮಾನಿಸುವುದು ಬಹಳಷ್ಟು ವಿಶೇಷ, ಜೀವನ್ರಾಂ ಸುಳ್ಯ ಅವರು ತನ್ನ ಹಿರಿಯರ ನೆನಪಿನಲ್ಲಿ ಪ್ರಶಸ್ತಿ ಕೊಡುತ್ತಿರುವುದು ಒಳ್ಳೆಯ ಸಂಪ್ರಾದಾಯ, ಇದು ಅವರಿಗೆ ತಂದೆ-ತಾಯಿ ನೀಡಿದ ಸಂಸ್ಕಾರದಿಂದ ಬಂದಿದೆ. ಕಲಾವಿದನಿಗೆ ಗೌರವ ಹಾಗೂ ಪ್ರೋತ್ಸಾಹ ಕಲಾ ಕ್ಷೇತ್ರಕ್ಕೆ ನೀಡುವ ಸೇವೆಯಾಗಿದೆ ಎಂದು ಅಭಿಪ್ರಾಯ ಪಟ್ಟರು.
ಡಾ. ಶಿವರಾಮ ಕಾರಂತ ಬಾಲವನ ಪುತ್ತೂರಿನ ವಿಶೇಷ ಕರ್ತವ್ಯಾಧಿಕಾರಿ ಡಾ. ಸುಂದರ ಕೇನಾಜೆ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಶಾಸ್ತ್ರಿಗಳ ಮನೆಯವರಾದ ಕೇಶವ ಭಟ್, ಈಶ್ವರಿ ಅವರು ಮಕ್ಕಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.