ಬದನಾಜೆ: ಕರ್ನಾಟಕ ಗಮಕ ಕಲಾ ಪರಿಷತ್ತು ನಡೆಸುವ ಗಮಕ ಪರೀಕ್ಷೆಗಳನ್ನು ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ ಸರಕಾರಿ ಪ್ರೌಢಶಾಲೆ ಬದನಾಜೆಯಲ್ಲಿ ನಡೆಸಿತು. ಕಳೆದ ಆ.27 ರಂದು ವಿದ್ಯಾರ್ಥಿಗಳಿಗೆ ಪ್ರಥಮ ಪರೀಕ್ಷೆ ನಡೆಸಲಾಯಿತು. ಏಪ್ರಿಲ್ನಲ್ಲಿ ನಡೆಯಬೇಕಿದ್ದ ಪರೀಕ್ಷೆಯನ್ನು ಕೊರೊನಾದಿಂದ ಮುಂದೂಡಲಾಗಿತ್ತು. ಪರೀಕ್ಷೆಯಲ್ಲಿ ಪರೀಕ್ಷಕರಾಗಿ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾದ ಮಧೂರು ಮೋಹನ ಕಲ್ಲೂರಾಯರು ಆಗಮಿಸಿದ್ದರು.
ಕೊರೋನಾದ ಸಂಕಷ್ಟದ ದಿನಗಳಲ್ಲಿ ಸರಕಾರದ ನಿಯಮಾನುಸಾರ ಪರೀಕ್ಷಾ ಮುಂಜಾಗ್ರತೆಗಳನ್ನು ತೆಗೆದುಕೊಂಡು ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸುಮಾರು ಹದಿನೈದು ವಿದ್ಯಾರ್ಥಿಗಳು ಗಮಕ ಪ್ರಥಮ ಪರೀಕ್ಷೆಯನ್ನು ಎದುರಿಸಿದರು. ಗಮಕದ ಹಿರಿಯ ವಿದ್ಯಾರ್ಥಿಗಳಾದ ಇಬ್ಬರು ಶಿಕ್ಷಕರು ಮತ್ತು ನಿವೃತ್ತ ಮುಖ್ಯ ಶಿಕ್ಷಕರಾದ ಸವಿತಾ ಎಮ್ ಗಮಕ ಕಾಜಾಣದ ಮೌಖಿಕ ಪರೀಕ್ಷೆಯನ್ನು ಎದುರಿಸಿದರು. ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟದ ಬಗ್ಗೆ ಜಿಲ್ಲಾಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿದರು. ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ತಿನ ಕಾರ್ಯದರ್ಶಿಗಳಾದ ರಾಮಕೃಷ್ಣ ಎಸ್.ಕೆ. ಪರೀಕ್ಷೆಯನ್ನು ಸಂಯೋಜಿಸಿ ಉಪಸ್ಥಿತರಿದ್ದರು.