ವಾಸು ಸಫಲ್ಯರ ಕೊಲೆಗೈದ ಆರೋಪಿ ದಯಾನಂದನನ್ನು ಘಟನಾ ಸ್ಥಳಕ್ಕೆ ಕರೆತಂದ ಪೊಲೀಸರು: ದುಃಖ ತಪ್ತರಾದ ಮನೆಯಿಂದ ಆಕ್ರೋಶದ ನುಡಿ

ಪೊಲೀಸರಿಂದ ಕೃತ್ಯ ನಡೆದ ಬಗ್ಗೆ ಮಹಜರು ಸ್ಥಳದಿಂದ ರಕ್ತಸಿಕ್ತ ಪ್ಯಾಂಟ್- ಶರ್ಟ್ ವಶ

ಬೆಳ್ತಂಗಡಿ: ಬೆಳ್ತಂಗಡಿ ಸರಕಾರಿ ಜ್ಯೂನಿಯರ್ ಕಾಲೇಜು ರಸ್ತೆ ಬಳಿಯ ನಿವಾಸಿ ವಾಸು ಸಫಲ್ಯರವನ್ನು ತಲವಾರಿನಿಂದ ಅಮಾನುಷವಾಗಿ ಹತ್ಯೆ ನಡೆಸಿದ್ದ ಆರೋಪಿಯನ್ನು ಆ.27ರಂದು ಸಂಜೆ ಘಟನಾ ಸ್ಥಳಕ್ಕೆ ಕರೆತಂದ ಪೊಲೀಸರು ಕೃತ್ಯ ನಡೆಸಿದ ಬಗ್ಗೆ ಮಹಜರು ನಡೆಸಿದರು.
ಆ.24ರಂದು ವಾಕಿಂಗ್‌ಗೆ ಹೋಗುತ್ತಿದ್ದ ತಂದೆ ವಾಸು ಸಫಲ್ಯರನ್ನು ದಯಾನಂದ ಕಾದು ಕುಳಿತು ತಲವಾರಿನಿಂದ ಕಡಿದು ಹತ್ಯೆ ಮಾಡಿದ್ದು, ತಲೆ ಹಾಗೂ ಕುತ್ತಿಗೆಯ ಭಾಗಕ್ಕೆ ಬಲವಾದ ಏಟು ಬಿದ್ದು, ಮಂಗಳೂರಿಗೆ ಚಿಕಿತ್ಸೆಗಾಗಿ ಕರೆದೊಯ್ಯುವ ವೇಳೆ ವಾಸು ಸಫಲ್ಯರು ಮೃತಪಟ್ಟಿದ್ದರು. ಕೊಲೆಗೈದ ನಂತರ ತನ್ನ ಮೊಬೈಲ್‌ನ್ನು ಸ್ವೀಚಾಫ್ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರ ತಂಡ ಆ.೨೬ರಂದು ರಾತ್ರಿ ಮಂಗಳೂರಿನ ಸ್ಟೇಟ್ ಬ್ಯಾಂಕ್‌ನಲ್ಲಿ ಬಂಧಿಸಿದ್ದರು.

ಕೊಲೆ ಒಪ್ಪಿಕೊಂಡ ಆರೋಪಿ: ತಂದೆಯನ್ನು ಕೊಲೆಗೈದು ಮಂಗಳೂರಿಗೆ ಹೋಗಿದ್ದ ಆರೋಪಿ ದಯಾನಂದ ಅಲ್ಲಿ ನಂತೂರಿನಲ್ಲಿ ಉದ್ಯಮಿಯೋರ್ವರ ಮನೆಯಲ್ಲಿ ಚಾಲಕರಾಗಿ ಕೆಲಸಕ್ಕೆ ಸೇರಿದ್ದರು. ಆರೋಪಿಯ ಮೊಬೈಲ್‌ನ್ನು ಟ್ರಾಕ್ ಮಾಡಿದ ಪೊಲೀಸರ ತನಿಖಾ ತಂಡ ಆರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಆರೋಪಿ ಕೊಲೆಯನ್ನು ಒಪ್ಪಿಕೊಂಡಿದ್ದಾನೆ.

ಸ್ಥಳ ಮಹಜರು: ಬಂಧಿತ ಆರೋಪಿಯನ್ನು ಆ.27ರ ಸಂಜೆ 4 ಗಂಟೆಗೆ ಘಟನಾ ಸ್ಥಳಕ್ಕೆ ಕರೆತಂದು ಮಹಜರು ಮಾಡಲಾಯಿತು. ವಾಸು ಸಫಲ್ಯರನ್ನು ಕೊಲೆಗೈದ ಆರೋಪಿ ರಕ್ತಸಿಕ್ತ ಪ್ಯಾಂಟ್ ಹಾಗೂ ಶರ್ಟ್‌ನ್ನು ಹತ್ತಿರದ ಮೈದಾನದ ಗಿಡಗಳ ನಡುವೆ ಎಸೆದು, ಬ್ಯಾಗ್‌ನಲ್ಲಿ ತಂದಿದ್ದ ಬೇರೆ ಡ್ರೆಸ್‌ನ್ನು ಹಾಕಿ ಮಂಗಳೂರಿಗೆ ತೆರಳಿರುವುದು ತನಿಖೆಯ ವೇಳೆ ಗೊತ್ತಾಯಿತು. ಮಹಜರು ವೇಳೆ ಎಸೆದಿದ್ದ ಅಂಗಿ ಮತ್ತು ಪ್ಯಾಂಟ್‌ನ್ನು ಆರೋಪಿ ಪೊಲೀಸರಿಗೆ ತೋರಿಸಿದ್ದು, ಪೊಲೀಸರು ಅದನ್ನು ವಶಪಡಿಸಿಕೊಂಡರು. ಆರೋಪಿ ಎರಡು ತಿಂಗಳ ಹಿಂದಿಯೇ ತಲವಾರನ್ನು ರೆಡಿಮಾಡಿ ಮನೆಯಲ್ಲಿ ಪೆಟ್ಟಿಗೆಯೊಳಗೆ ಇಟ್ಟಿರುವುದಾಗಿ ಬಾಯಿ ಬಿಟ್ಟಿದ್ದಾನೆ. ಆರೋಪಿಯನ್ನು ಸ್ಥಳಕ್ಕೆ ಪೊಲೀಸರು ಕರೆದುಕೊಂಡು ಬಂದಾಗ ಅವರ ತಾಯಿ ಗಾಯತ್ರಿ ಮತ್ತು ಸಹೋದರಾದ ಸುದರ್ಶನ್ ತೀವ್ರ ಆಕ್ರೋಶಗೊಂಡರು. ತಂದೆಯೇ ನಿನ್ನನ್ನು ಇಷ್ಟು ಸಮಯ ಸಾಕಿದ್ದು, ಅವರನ್ನು ಕೊಲ್ಲುವ ಮನಸ್ಸು ನಿನಗೇಗೆ ಬಂತು. ಅವನ ಕೈಕಾಲು ಮುರಿದು ಹಾಕಿ ಎಂದು ದುಃಖ ತಪ್ತರಾಗಿ ನುಡಿದರು. ತಂದೆಯನ್ನು ಕೊಂದ ನಿನ್ನನ್ನು ಬಿಡಿಸಲು ನಾವು ಯಾವುದೇ ಪ್ರಯತ್ನ ಮಾಡುವುದಿಲ್ಲ, ಇನ್ನೂ ನಿನ್ನ ಮತ್ತು ನಮ್ಮ ಮಧ್ಯೆ ಯಾವುದೇ ಸಂಬಂಧ ಇಲ್ಲ, ನಿನಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಕ್ರೋಶ ಭರಿತರಾಗಿ ನುಡಿದರು. ಮಹಜರು ವೇಳೆ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಹಾಗೂ ತನಿಖಾಧಿಕಾರಿ  ಸಂದೇಶ್ ಬಿ.ಜಿ, ಹಾಗೂ ಪೊಲೀಸರು, ವಾಸು ಸಫಲ್ಯರ ಮನೆಯವರು, ಸಂಬಂಧಿಕರು, ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.