ಗಂಗೀರೆಡ್ಡಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಲೋಕಾಯುಕ್ತ ಕೋರ್ಟ್; ಬೆಳ್ತಂಗಡಿಯಲ್ಲಿ ವೃತ್ತ ನಿರೀಕ್ಷಕರಾಗಿದ್ದ ಗಂಗೀರೆಡ್ಡಿ
ಬೆಳ್ತಂಗಡಿ: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿ ಕರಾವಳಿ ಕಾವಲು ಪಡೆಯ ಇನ್ಸ್ಪೆಕ್ಟರ್ ಗಂಗಿರೆಡ್ಡಿಯವರಿಗೆ ಮಂಗಳೂರು ಲೋಕಾಯುಕ್ತ ನ್ಯಾಯಾಲಯ ನಾಲ್ಕು ವರ್ಷ ಸಾದಾ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ ದಂಡ ವಿಧಿಸಿ ಆ.27ರಂದು ಆದೇಶಿಸಿದೆ. ಶಿಕ್ಷೆಯ ಪ್ರಮಾಣ ಘೋಷಿಸಿದ ತಕ್ಷಣ ನ್ಯಾಯಾಧೀಶರು ಗಂಗೀರೆಡ್ಡಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಗಂಗೀರೆಡ್ಡಿರವರು ದಿನಾಂಕ 27-08-2009 ರಂದು ಬೆಳ್ತಂಗಡಿಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ ಸಂದರ್ಭದಲ್ಲಿ ತಮ್ಮ ಸೇವಾ ಅವಧಿಯಲ್ಲಿ ನಿಗದಿತ ಆದಾಯಕ್ಕಿಂತಲೂ ಮೀರಿ ಹೆಚ್ಛಿನ ಆಸ್ತಿಗಳನ್ನು ಹೊಂದಿದ್ದಾರೆಂದು ಆಗಿನ ಲೋಕಾಯುಕ್ತ ಡಿ. ವೈ.ಎಸ್.ಪಿ. ಸದಾನಂದ ವರ್ಣೇಕರ್ ಮತ್ತು ಅವರ ತಂಡ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶ ಪಡಿಸಿಕೊಂಡಿತ್ತು. ಸುಮಾರು ಹತ್ತೊಂಬತ್ತು ಲಕ್ಷದಷ್ಟು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತುತನಿಖೆಯನ್ನು ಪೂರ್ಣಗೊಳಿಸಿದ್ದ ಡಿ.ವೈ. ಎಸ್.ಪಿ. ಎಮ್. ವಿಠ್ಠಲ್ ದಾಸ್ ಪೈ ರವರು ಆರೋಪಿ ಗಂಗಿ ರೆಡ್ಡಿ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಅಭಿಯೋಜನೆಯ ಪರವಾಗಿ 22 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.
ವಿಚಾರಣೆ ನಡೆಸಿದ ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯವು ಆರೋಪಿಯ ಮೇಲಿನ ಆರೋಪ ಸಾಭೀತಾಗಿದೆ ಎಂದು ತೀರ್ಮಾನಕ್ಕೆ ಬಂದ ಹಿನ್ನಲೆಯಲ್ಲಿ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ. ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ. ಬಿ. ಜಕಾತಿರವರು ಗಂಗೀರೆಡ್ಡಿ ತಪ್ಪಿತಸ್ಥ ಎಂದು ಘೋಷಿಸಿದ್ದು ಶಿಕ್ಷೆಯ ಪ್ರಮಾಣ ಪ್ರಕಟಿಸಿದ್ದಾರೆ. 111 ಪುಟಗಳ ಸುದೀರ್ಘ ಆದೇಶ ನೀಡಿರುವ ನ್ಯಾಯಾಧೀಶರು ಭ್ರಷ್ಟಾಚಾರ ನಿಗ್ರಹ ಖಾಯಿದೆಯ ಕಲಂ 13 (1) (ಇ) ರ ಅಡಿ ಯಲ್ಲಿ ಆರೋಪಿ ಗಂಗಿ ರೆಡ್ಡಿ ಅಪರಾಧ ಎಸಗಿದ್ದಾರೆಂದು ಸಾಭೀತು ಆಗಿದೆ ಎಂದು ಘೋಷಿಸಿದ್ದಾರೆ.ಮಂಗಳೂರು ಲೋಕಾಯುಕ್ತ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಕೆ.ಎಸ್.ಎನ್. ರಾಜೇಶ್ ವಾದಿಸಿದ್ದರು. ಗಂಗೀರೆಡ್ಡಿರವರು ಈ ಹಿಂದೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎಸ್.ಐ.ಯಾಗಿ ಮತ್ತು ವೃತ್ತ ನಿರೀಕ್ಷಕರಾಗಿ ಕಾರ್ಯ ನಿರ್ವಹಿಸಿದ್ದರು.