ಡೆಂಗ್ಯು ಮತ್ತಿತರ ರೋಗ ಬಾರದಂತೆ ತಾಲೂಕಿನಾದ್ಯಂತ ಸ್ವಚ್ಚ ಮನೆ ಆಂದೋಲನ

Advt_NewsUnder_1
Advt_NewsUnder_1
Advt_NewsUnder_1

2500 ಸ್ವಚ್ಛ ಮನೆಗಳನ್ನು ಆಯ್ಕೆ ಮಾಡಿ ಬಹುಮಾನ: ಶಾಸಕ ಹರೀಶ್ ಪೂಂಜ ಘೋಷಣೆ

ಸ್ವಚ್ಛತೆಯ ಕೊರತೆಯ ಪರಿಣಾಮವಾಗಿ ಡೆಂಗ್ಯು ಸೇರಿದಂತೆ ಹಲವಾರು ರೋಗ ಗಳು ಬರುತ್ತಿದ್ದು , ಜನರಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸುವುದಕ್ಕಾಗಿ ತಾಲೂಕಿನಾದ್ಯಂತ ಸ್ವಚ್ಛಮನೆ ಆಂದೋಲನ ನಡೆಸಲು ಶಾಸಕ ಹರೀಶ್ ಪೂಂಜ ಆರೋಗ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ .

ತಾಲೂಕಿನಲ್ಲಿರುವ 248 ಆಶಾ ಕಾರ್ಯಕರ್ತೆಯರು ಒಬ್ಬೊಬ್ಬರು ತಲಾ 10 ಅತ್ಯುತ್ತಮವಾಗಿ ಇಡಿಯ ಪರಿಸರವನ್ನು ಸ್ವಚ್ಛವಾಗಿರಿಸಿ ಕೊಂಡಿರುವ ಮನೆಗಳನ್ನು ಆಯ್ಕೆ ಮಾಡಿ ಕೊಡಬೇಕು. ಆ 2500 ಮನೆಗಳಿಗೆ ಸ್ವಚ್ಛ ಮನೆ ಪ್ರಶಸ್ತಿಯನ್ನು ನೀಡುತ್ತೇವೆ ಎಂದು ಹರೀಶ್ ಪೂಂಜರವರು ಘೋಷಿಸಿದರು.

ಪ್ರಶಸ್ತಿ ಘೋಷಣೆಯ ಶಾಸಕರ ಈ ನಿರ್ಧಾರಕ್ಕೆ ಕಾರಣವಾದುದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಅಮ್ಮಿಯವರು. ಕೊರೊನಾದ ವಿರುದ್ಧ ಬೆಳ್ತಂಗಡಿಯವರು ಸ್ವಯಂಪ್ರೇರಣೆಯಿಂದ ಹೇಗೆ ಹೋರಾಟ ತಂತ್ರ ರೂಪಿಸಬಹುದು ಎಂಬ ಬಗ್ಗೆ ಚರ್ಚಿಸಲು ಶಾಸಕರು ಜುಲೈ 8 ರಂದು ತಾ.ಪಂ.ಸಭಾಂಗಣದಲ್ಲಿ ಸಭೆ ಕರೆದಿದ್ದರು.

ಕೊರೋನಾ ವಿಚಾರ ಚರ್ಚೆ ಮುಗಿಯುತ್ತಿದ್ದಂತೆ ಎದ್ದು ನಿಂತ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಅಮ್ಮಿಯವರು ” ತಾಲೂಕಿನಲ್ಲಿ ಡೆಂಗ್ಯು ಪ್ರಕರಣ ಗಳು ಸಾಕಷ್ಟಿವೆ. 38 ಮಂದಿ ಅಧಿಕೃತವಾಗಿ ಡೆಂಗ್ಯು ಪೀಡಿತರು ನಮ್ಮಲ್ಲಿದ್ದಾರೆ. 4 ಮಂದಿ ಈ ಬಾರಿ ಡೆಂಗ್ಯುನಿಂದ ಸಾವಿಗೀಡಾಗಿದ್ದಾರೆ. 2016-17 ರ ಸಾಲಿನಲ್ಲಿ ನಮ್ಮ ತಾಲೂಕಲ್ಲಿ ಡೆಂಗ್ಯು ಪ್ರಕರಣಗಳು ಭಾರೀ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದವು. ಅದಕ್ಕಾಗಿ ನಾವು 2017-18 ರ ಸಾಲಿನಲ್ಲಿ ಸ್ವಚ್ಛ ಮನೆ ಅಭಿಯಾನ ನಡೆಸಿ ಜನರಿಗೆ ಸ್ವಚ್ಛತೆಯ ಜಾಗೃತಿ ಮೂಡಿಸಿದ್ದೆವು. ತನ್ನ ಮನೆ ಮತ್ತು ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುವವರಿಗೆ ಪ್ರಶಸ್ತಿ ನೀಡಿದ್ದೆವು. ಪರಣಾಮವಾಗಿ ಆ ವರ್ಷ ನಮ್ಮ ತಾಲೂಕಲ್ಲಿ ಡೆಂಗ್ಯೂ ಪ್ರಕರಣಗಳೇ ವರದಿಯಾಗಿರಲಿಲ್ಲ. ಆದರೆ ಮರುವರ್ಷದಿಂದ ಜನರು ನಿರ್ಲಕ್ಷ್ಯ ವಹಿಸಿದ್ದರಿಂದ ಪುನಹ ಡೆಂಗ್ಯು ಕಾಣಿಸಿಕೊಂಡಿತು. ಈ ವರ್ಷ ಮತ್ತೆ ಕಾಣಿಸಿಕೊಂಡು ಸಾವುಗಳೂ ಕೂಡ ಸಂಭವಿಸಿವೆ ” ಎಂದು ಹೇಳಿದರು.

ಇದಕ್ಕೆ ಸ್ಪಂದಿಸಿದ ಶಾಸಕರು ” ಆ ಸ್ವಚ್ಛತೆಯ ಅಭಿಯಾನವನ್ನು ಈ ಬಾರಿಯೂ ಮಾಡಿ. ಸ್ವಚ್ಛ ಮನೆ ಗುರುತಿಸುವ ಪ್ರಕ್ರಿಯೆಯನ್ನು ಯಾರ ಮೂಲಕ ಮಾಡುತ್ತೀರಿ ? ” ಎಂದು ಕೇಳಿದರು. ” ಆಶಾ ಕಾರ್ಯಕರ್ತೆಯರ ಮೂಲಕ ” ಎಂದು ಅಮ್ಮಿಯವರು ಹೇಳಿದರು. ” ಆಶಾ ಕಾರ್ಯಕರ್ತೆಯರಿಗೆ ಇದನ್ನೆಲ್ಲ ಮಾಡಲು ಸಮಯವಿರುತ್ತದೆಯೇ ? ” ಶಾಸಕರು ಕೇಳಿದಾಗ ” ಈಗಾಗಲೇ ಆಶಾ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ಕೊಟ್ಟು ಆರೋಗ್ಯ ಜಾಗೃತಿ ಮತ್ತು ಸಮೀಕ್ಷೆ ನಡೆಸುತ್ತಿದ್ದಾರೆ. ಅದರೊಂದಿಗೇ ಇದನ್ನೂ ಸೇರಿಸಿಕೊಂಡರಾಯಿತು ” ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು ಹಾಗೂ ಪಿ.ಡಿ.ಒ.ಗಳು ಹೇಳಿದರು.

” ಮೊದಲು ಸ್ವಚ್ಛತೆಗೆ ಸಂಬಂಧಿಸಿದ ಒಂದು ನೋಟೀಸನ್ನು ತಾಲೂಕಿನ ಪ್ರತೀ ಮನೆಗೆ ಪಂಚಾಯತ್ ಮತ್ತು ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಆಶಾ ಕಾರ್ಯಕರ್ತೆಯರು ಮುಟ್ಟಿಸಿ ಅವೇರ್ ನೆಸ್ ಮೂಡಿಸಬೇಕು. . ನಂತರ ಒಂದು ತಿಂಗಳಲ್ಲಿ ಮನೆಗಳಿಗೆ ಹೋಗಿ ಸರ್ವೆ ನಡೆಸಬೇಕು. ಪ್ರತಿಯೊಬ್ಬ ಆಶಾ ಕಾರ್ಯಕರ್ತೆ ಯರು ಅವರವರ ವ್ಯಾಪ್ತಿಯಲ್ಲಿ ತಲಾ 10 ಮನೆಗಳನ್ನು ಸ್ವಚ್ಛ ಮನೆ ಪ್ರಶಸ್ತಿಗೆ ಆಯ್ಕೆ ಮಾಡಬೇಕು. ತಾಲೂಕಿನಲ್ಲಿರುವ 248 ಆಶಾ ಕಾರ್ಯಕರ್ತೆರು ಗುರುತಿಸುವ 2500 ಮನೆಗಳಿಗೆ ಒಳ್ಳೆಯ ಪ್ರಶಸ್ತಿಯನ್ನು ಕೊಡೋಣ. ಆ ದಿಸೆಯಲ್ಲಿಯೂ ಬೆಳ್ತಂಗಡಿ ಮಾದರಿಯಾಗಲಿ ” ಎಂದು ಶಾಸಕರು ಘೋಷಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.