ಸಾಹಿತ್ಯದ ಬಯಲ ಬೆಟ್ಟ ಡಾ.ನಾ. ಮೊಗಸಾಲೆ ಕೃತಿ ಬಿಡುಗಡೆ

ಬೆಳ್ತಂಗಡಿ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರಕಟಗೊಂಡ ಕಾಂತಾವರ ಕನ್ನಡ ಸಂಘದ ಅಧ್ಯಕ್ಷರಾದ ಡಾ. ನಾ. ಮೊಗಸಾಲೆಯವರ ವ್ಯಕ್ತಿ-ಸಾಧನೆಗಳ ಪರಿಚಯದ ಸಾಹಿತ್ಯದ ಬಯಲ ಬೆಟ್ಟ ಡಾ. ನಾ. ಮೊಗಸಾಲೆ ಪುಸ್ತಕವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಶುಕ್ರವಾರ ಬಿಡುಗಡೆಗೊಂಡಿತು.

ಈ ಕೃತಿಯನ್ನು ಖ್ಯಾತ ವಿಮರ್ಶಕರೂ ಬರಹಗಾರರೂ ಆದ ಡಾ. ಬಿ. ಜನಾರ್ದನ ಭಟ್‌ರವರು ಬರೆದಿದ್ದರು. ಕನ್ನಡ ಸ್ವಾರಸ್ವತ ಲೋಕದಲ್ಲಿ ವಿಶಿಷ್ಟ ಸಾಧನೆ ಮಾಡಿದ ನಾ. ಮೊಗಸಾಲೆಯವರು ಸಂಘಟಕರೂ, ಬರಹಗಾರರೂ ಆಗಿದ್ದಾರೆ. ಮೊಗಸಾಲೆಯವರ ಪರಿಚಯ ಕೃತಿಯನ್ನು ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸುತ್ತಿರುವುದು ಸಂತಸದ ವಿಚಾರ. ಇವರಿಂದ ಸಾಹಿತ್ಯ ಸೇವೆ ನಿರಂತರವಾಗಿ ನಡೆಯಲಿ ಎಂದು ಕೃತಿಯನ್ನು ಅನಾವರಣಗೊಳಿಸಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ಹೇಮಾವತಿ ವೀ ಹೆಗ್ಗಡೆಯವರು ಡಾ. ನಾ. ಮೊಗಸಾಲೆ ದಂಪತಿಯವರಿಗೆ ಸ್ಮರಣಿಕೆಯನ್ನಿತ್ತು ಗೌರವಿಸಿದರು. ಕಾಂತಾವರ ಕನ್ನಡ ಸಂಘದ ಮೂಲಕ ನಾಡಿಗೆ ನಮಸ್ಕಾರ ಎಂದು ಈಗಾಗಲೇ ೨೯೯ ಸರಣಿ ಪುಸ್ತಕಗಳನ್ನು ಪ್ರಕಟಿಸಿ ನಾಡಿಗೆ ಸಮರ್ಪಿಸಿರುವ ಡಾ. ನಾ. ಮೊಗಸಾಲೆಯವರ ವ್ಯಕ್ತಿತ್ವ ಸಾಧನೆಗಳ ಬಗ್ಗೆ ಪರಿಚಯ ಪುಸ್ತಕ ಪ್ರಕಟವಾಗುತ್ತಿರುವುದು ಬಹಳ ವಿಶೇಷ. ಈ ಮೂಲಕ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಡಾ. ನಾ. ಮೊಗಸಾಲೆಯವರಿಗೆ ವಿಶೇಷ ಗೌರವವನ್ನು ಸಲ್ಲಿಸುವುದರ ಮೂಲಕ ವಿಶಿಷ್ಟ ಕಾರ್ಯವನ್ನು ಮಾಡಿ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಬಿ. ಯಶೋವರ್ಮರವರು ಪ್ರಾಸ್ತವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಲೇಖಕರಾದ ಡಾ. ಬಿ. ಜನಾರ್ದನ ಭಟ್, ಪ್ರೇಮಾ ಮೊಗಸಾಲೆ, ಸುಧಾ ಜೆ. ಭಟ್, ಉಜಿರೆ ಶ್ರೀ ಧ.ಮಂ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಬಿ. ಪಿ. ಸಂಪತ್ ಕುಮಾರ್, ಡಾ. ವಿಘ್ನರಾಜ್ ಧರ್ಮಸ್ಥಳ ಮತ್ತು ಕಾರ್ಯಕ್ರಮದ ಸಂಯೋಜಕರಾದ ಡಾ. ಎಂ.ಪಿ. ಶ್ರೀನಾಥ್ ಉಪಸ್ಥಿತರಿದ್ದರು. ಬೆಳ್ತಂಗಡಿ ತಾಲೂಕಿನ ಕ.ಸಾ.ಪ.ದ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.