ವಿಧಾನ ಪರಿಷತ್ ಚುನಾವಣೆ: ಬಿಜೆಪಿಯಿಂದ ಬೆಳ್ತಂಗಡಿಯ ಪ್ರತಾಪಸಿಂಹ ನಾಯಕ್

ಬೆಳ್ತಂಗಡಿ: ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬೆಳ್ತಂಗಡಿಯ ಪ್ರತಾಪಸಿಂಹ ನಾಯಕ್ ಆಯ್ಕೆಯಾಗಿದ್ದಾರೆ.

ವಕೀಲರಾಗಿ, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ, ಜಿಲ್ಲಾ ಬಿಜೆಪಿ ಪ್ರಭಾರಿಯಾಗಿ ಕಾರ್ಯ ನಿರ್ವಹಿಸಿರುವ ಪ್ರತಾಪಸಿಂಹ ನಾಯಕರವರಿಗೆ ಎಂ.ಎಲ್.ಸಿ. ಸ್ಥಾನ ದೊರಕಿಸಿಕೊಡುವ ಮೂಲಕ ಅವರ ಪಕ್ಷ ಸಂಘಟನೆ, ಅನುಭವಕ್ಕೆ ಆದ್ಯತೆ ನೀಡಿದಂತಾಗಿದೆ.

ಈ ಹಿಂದೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯ ವೇಳೆ ಬಿಜೆಪಿ ಅಭ್ಯರ್ಥಿಯಾಗಿ ಪ್ರತಾಪಸಿಂಹರವರನ್ನು ಆಯ್ಕೆ ಮಾಡಬೇಕು ಎಂಬ ಆಗ್ರಹ ಕೇಳಿ ಬರುತ್ತಿತ್ತು. ಇದೀಗ ವಿಧಾನ ಪರಿಷತ್ ಗೆ ಅಚ್ಚರಿ ಎಂಬಂತೆ ಪ್ರತಾಪಸಿಂಹರವರ ಹೆಸರು ಪ್ರಕಟಗೊಂಡಿದೆ.

ಪರಿಷತ್ ಗೆ ಎಂಟ್ರಿ ಕೊಡಲಿರುವ ಬಿಜೆಪಿಯ ಮಂಗಳೂರು ‘ಸಿಂಹ’!

ಬೆಳ್ತಂಗಡಿ:ವಿಧಾನಪರಿಷತ್ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಎಂ ಟಿ ಪಿ ನಾಗರಾಜ್, ಆರ್ ಶಂಕರ್, ಸುನಿಲ್ ವಲ್ಯಾಪುರೆ ಜೊತೆ ಪ್ರತಾಪ ಸಿಂಹ ನಾಯಕ್ ಹೆಸರು ಘೋಷಣೆಯಾಗಿದೆ. ರಾಜ್ಯ ಸಭೆಯಂತೆ ವಿಧಾನ ಪರಿಷತ್ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲೂ ಬಿಜೆಪಿಯಿಂದ ಅಚ್ಚರಿಯ ಹೆಸರೊಂದು ಪ್ರಕಟವಾಗಿದೆ.ರಾಜ್ಯದ ಕಾರ್ಯಕರ್ತರಿಗೆ ಇದು ಅಚ್ಚರಿಯಾಗಿದ್ದರೂ ದಕ್ಷಿಣ ಕನ್ನಡದ ಬಿಜೆಪಿಯ ನಾಯಕರು, ಕಾರ್ಯಕರ್ತರಿಗೆ ಪ್ರತಾಪ ಸಿಂಹ ನಾಯಕ್ ರವರ ಹೆಸರು ಅಚ್ಚರಿ ತಂದಿಲ್ಲ, ಬದಲಾಗಿ ಇವರಿಗೊಂದು ಸ್ಥಾನಮಾನ ಸಿಗಲೇಬೇಕಿತ್ತು ಅನ್ನುವ ಅಭಿಪ್ರಾಯಗಳು ವ್ಯಕ್ತವಾಗ್ತಿವೆ.

ಯಾರು ಈ ಪ್ರತಾಪ ಸಿಂಹ ನಾಯಕ್..!?

ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ರಿಯಲ್ ನಾಯಕ ಪ್ರತಾಪ ಸಿಂಹ, ಬೆಳ್ತಂಗಡಿಯಲ್ಲಿ ಬಿಜೆಪಿಯನ್ನು ಕಟ್ಟಿದ ನಾಯಕನೂ ಹೌದು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಸ್ತಿನ ಸಿಪಾಯಿ. ಸಂಘಟಕ, ಸದಾ ಬಿಜೆಪಿ ಪಕ್ಷಕ್ಕಾಗಿ ದುಡಿಯುವ ಅಪ್ಪಟ ಕಾರ್ಯಕರ್ತನಾಗಿಯೂ ಸಿಂಹ ಗುರುತಿಸಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಅಧ್ಯಕ್ಷರಾಗಿಯೂ ಕೂಡ ಸಿಂಹ ದುಡಿದಿದ್ದಾರೆ.

ಹೇಗೆ ಸಿಕ್ಕಿತು ಪ್ರತಾಪ ಸಿಂಹರಿಗೆ ಟಿಕೆಟ್..!?

ಬಿಜೆಪಿಯಲ್ಲಿ ಪರಿಷತ್ ಟಿಕೆಟ್ ಗಾಗಿ ಲಾಬಿಯೂ ಜೋರಿತ್ತು. ಸಿಎಂ ಬಿ ಎಸ್ ವೈಗೆ ಪಕ್ಷಾಂತರಿಗಳ ಒತ್ತಡವೂ ಹೆಚ್ಚಿತ್ತು. ಬೇಕೇ ಬೇಕು ಟಿಕೆಟ್ ಬೇಕು ಅಂತ ಸಾರ್ವಜನಿಕವಾಗಿ ಕೂಗದಿದ್ದರೂ ಕೂಡ, ಅದೇ ರೀತಿ ಒತ್ತಡವನ್ನು ಹೇರಿದ್ದರು. ಆದರೆ ಇವರ ನಡುವೆ ಪ್ರತಾಪ ಸಿಂಹರಿಗೆ ಟಿಕೆಟ್ ಸಿಗುವುದಕ್ಕೆ ಬೆಳ್ತಂಗಡಿಯ ಸಾಮಾನ್ಯ ಕಾರ್ಯಕರ್ತರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಶಾಸಕರಾದ ಹರೀಶ್ ಪೂಂಜಾರವರ ಶ್ರಮವೂ ಬಹಳಷ್ಟಿದೆ.ಕಳೆದ ಕೆಲ ದಿನಗಳಿಂದ ಪೂಂಜಾ ಮತ್ತು ಪ್ರತಾಪ್ ಸಿಂಹ ನಾಯಕ್ ಪರಿಷತ್ ಟಿಕೆಟ್ ನ ಪ್ರಯತ್ನಗಳನ್ನು ಮಾಡುತ್ತಲೇ ಇದ್ದರು. ಆ ಪ್ರಯತ್ನಗಳಿಗೆ ಈಗ ಫಲ ಸಿಕ್ಕಿದೆ.

ರಾಜ್ಯಸಭೆಯ ಟಿಕೆಟ್ ರೇಸ್ ನಲ್ಲಿ ಹೆಸರು ಜಸ್ಟ್ ಮಿಸ್..!

ರಾಜ್ಯಸಭೆಯ ಟಿಕೆಟ್ ರೇಸ್ ನಲ್ಲಿ ಪ್ರತಾಪ್ ಸಿಂಹ ನಾಯಕ್ ಹೆಸರು ಟೇಬಲ್ ನಲ್ಲಿತ್ತು ಎನ್ನಲಾಗಿದೆ. ಅಳೆದು ತೂಗಿದ ಹೈಕಮಾಂಡ್ ಕಡೇಕ್ಷಣದಲ್ಲಿ ಪ್ರತಾಪ್ ಅವರ ಹೆಸರು ಕೈಬಿಟ್ಟಿದೆ ಎನ್ನಲಾಗಿದೆ. ಅಲ್ಲದೇ ಈ ಹಿಂದೆ ಲೋಕಸಭೆಯ ಟಿಕೆಟ್ ಪ್ರತಾಪಸಿಂಹರಿಗೆ ಸಿಗಬೇಕು ಅಂತ ಕಾರ್ಯಕರ್ತರ ಒತ್ತಾಯವಿತ್ತು.ಆದರೆ ಅಲ್ಲೂ ಕೂಡ ಪ್ರತಾಪ್ ಸಿಂಹ ನಾಯಕ್ ಗೆ ಅದೃಷ್ಟ ಕೈಗೂಡಿರಲಿಲ್ಲ.

ಟಿಕೆಟ್ ರೇಸ್ ನಲ್ಲಿ ಸದಾ ಓಡುತ್ತಿದ್ದ ಹೆಸರು ಪ್ರತಾಪ ಸಿಂಹ ನಾಯಕ್..!

ಬೆಳ್ತಂಗಡಿಯ ಶಾಸಕ ಸ್ಥಾನದ ಟಿಕೆಟ್ ರೇಸ್ ನಲ್ಲಿ ಪ್ರತಾಪ ಸಿಂಹರ ಹೆಸರು ಸದಾ ಓಡುತ್ತಿರುತ್ತಿತ್ತು. ಕಳೆದ 20 ವರ್ಷಗಳಿಂದ ಪ್ರತೀ ಎಲೆಕ್ಷನ್ ಬಂದಾಗಲೂ ಕೂಡ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಪ್ರತಾಪ ಸಿಂಹರ ಹೆಸರು ಇರುತ್ತಿತ್ತು. ಆದರೆ ಅದು ಘೋಷಣೆಯಾಗುತ್ತಿರಲಿಲ್ಲ,ಪ್ರತಿಬಾರಿ ಹೀಗಾದ್ರೂ ಕೂಡ ಪ್ರತಾಪ ಸಿಂಹ ಭಿನ್ನರಾಗ ಹಾಡಿಲ್ಲ, ಶಿಸ್ತಿನ ಕಾರ್ಯಕರ್ತನಾಗಿ ಯಾರು ಅಭ್ಯರ್ಥಿಯಾಗುತ್ತಾರೋ ಅವರೊಂದಿಗೆ ನಿಂತು ಪಕ್ಷಕ್ಕಾಗಿ ದುಡಿಯುತ್ತಿದ್ದರು.

ಸಾಯಿಕುಮಾರ್ ಹಾಡಿ ಹೊಗಳಿದ್ದ ನಾಯಕ
ಸುಮಾರು ಹತ್ತು ವರ್ಷಗಳ ಹಿಂದೆ ಬೆಳ್ತಂಗಡಿಯಲ್ಲಿ ನಡೆದ ಚುನಾವಣಾ ಪ್ರಚಾರವೊಂದರಲ್ಲಿ ನಟ ಸಾಯಿಕುಮಾರ್ ಭಾಷಣ ಮಾಡುತ್ತಿದ್ದರು, ಈ ವೇಳೆ ಅವರಿಗೆ ಬಿಜೆಪಿಯ ಅಭ್ಯರ್ಥಿಯ ಹೆಸರು ಅಷ್ಟು ಕ್ಯಾಚಿ ಅನ್ನಿಸಿರಲಿಲ್ಲ, ಬದಲಾಗಿ ಪ್ರತಾಪ ಸಿಂಹ ನಾಯಕ್ ಅವರ ಓಡಾಟ, ಚುರುಕುತನ ಗಮನ ಸೆಳೆದಿತ್ತು. ಆಗಷ್ಟೇ ಬಂದ ಸಾಯಿಕುಮಾರ್ ಪ್ರತಾಪ್ ಸಿಂಹರನ್ನು ಗಮನಿಸಿ, ವೇದಿಕೆಯಲ್ಲೇ ಲಾಂಛನದಲ್ಲಿ ನಾಲ್ಕು ಸಿಂಹಗಳಿವೆ, ಕಾಣದೇ ಇರುವ ನಾಲ್ಕನೇ ಸಿಂಹವೇ ಬೆಳ್ತಂಗಡಿಯ ಪ್ರತಾಪ ಸಿಂಹ ಅಂತನೂ ಸಿನಿಮಾ ಡೈಲಾಗ್ ಹೇಳಿ ಅಚ್ಚರಿ ಮೂಡಿಸಿದ್ದರು.

ಶಕ್ತಿ ಸೌಧದಲ್ಲಿ ಬೆಳ್ತಂಗಡಿಯ ಮೂವರಿಂದ ಶಕ್ತಿ ಪ್ರದರ್ಶನ!

ಶಕ್ತಿ ಸೌಧದಲ್ಲಿ ಬೆಳ್ತಂಗಡಿಯ ಪಾರಮ್ಯ ಹೆಚ್ಚಾಗಿದೆ. ಶಾಸಕ ಹರೀಶ್ ಪೂಂಜಾ ವಿಧಾನಸಭೆಯಲ್ಲಿ ಇದ್ರೆ, ಪ್ರತಾಪ ಸಿಂಹ ನಾಯಕ್ ವಿಧಾನಪರಿಷತ್ ನಲ್ಲಿ ಇರಲಿದ್ದಾರೆ. ಜೊತೆಗೆ ಕಾಂಗ್ರೆಸ್ ನಾಯಕ ಹರೀಶ್ ಕುಮಾರ್ ಕೂಡ ವಿಧಾನ ಪರಿಷತ್ ನ ಸದಸ್ಯನಾಗಿದ್ದಾರೆ. ಇದು ಬೆಳ್ತಂಗಡಿ ಅಭಿವೃದ್ದಿಗೆ ನೆರವಾಗಲಿ ಅನ್ನುವುದೇ ಜನರ ಅಭಿಪ್ರಾಯ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.