ಖಾಸಗಿಯಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವವರಿಗೆ ತಾಲೂಕು ಕೇಂದ್ರದಲ್ಲಿ ಅವಕಾಶ ನೀಡಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರಕ್ಕೆ ತೆರಳಲು ವಿದ್ಯಾರ್ಥಿಗಳಲ್ಲಿ ಆತಂಕ

ಬೆಳ್ತಂಗಡಿ: ಕೊರೊನಾ ವೈರಸ್ ಸೋಂಕಿನ ಭೀತಿಯಿಂದಾಗಿ ವಿದ್ಯಾರ್ಥಿಗಳ ಜೀವನದಲ್ಲಿ ಮುಖ್ಯ ಘಟ್ಟವಾಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಬೇಕು- ಬೇಡ ಎಂಬ ಚರ್ಚೆ ನಡುವೆಯೂ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಸಚಿವರು ಪರೀಕ್ಷೆ ನಡೆಸಿಯೇ ಸಿದ್ಧ ಎನ್ನುತ್ತಿದೆ. ಇದರ ನಡುವೆ ಖಾಸಗಿಯಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಭವಿಷ್ಯ ರೂಪಿಸಿಕೊಳ್ಳಲು ಹೊರಟ ವಿದ್ಯಾರ್ಥಿಗಳ ಸಮಸ್ಯೆಯನ್ನು ಕೇಳುವವರು ಇಲ್ಲದಾಗಿದೆ.

ಶಾಲೆಗಳಿಗೆ ದೈನಂದಿನ ತರಗತಿಗಳಿಗೆ ತೆರಳಿ ಅಧ್ಯಯನ ನಡೆಸಿದ ವಿದ್ಯಾರ್ಥಿಗಳಿಗೆ ಸರ್ಕಾರವು ಈಗಾಗಲೇ ಹತ್ತಿರದ ಶಾಲೆಗಳಲ್ಲಿ ಪರೀಕ್ಷಾ ಕೇಂದ್ರ ತೆರೆಯಲು ಸಿದ್ಧತೆ ಹಾಗೂ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತೆರಳಲು ಬಸ್ಸಿನ ವ್ಯವಸ್ಥೆಯನ್ನೂ ಕಲ್ಪಿಸಿದೆ. ಆದರೆ ಖಾಸಗಿಯಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಆಯಾ ಜಿಲ್ಲಾ ಕೇಂದ್ರ ಗಳಿಗೆ ತೆರಳಿ ಪರೀಕ್ಷೆ ಬರೆಯುವಂತೆ ಮಾಡಿರುವುದು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ.

ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಬಂದ ವಿದ್ಯಾರ್ಥಿಗಳು ಒಂದೆಡೆ ಸೇರುವುದರಿಂದ ಸೋಂಕು ತಗುಲುವ ಭೀತಿಯು ಹೆಚ್ಚಿರುತ್ತದೆ. ಅದಕ್ಕಾಗಿ ಖಾಸಗಿಯಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪರೀಕ್ಷೆ ತೆಗೆದುಕೊಂಡಿರುವ ಶಾಲೆಗಳಲ್ಲಿಯೇ ಅಥವಾ ತಾಲೂಕು ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟರೆ ಉತ್ತಮ ಎಂಬುದು ವಿದ್ಯಾರ್ಥಿಗಳ ಅಭಿಪ್ರಾಯವಾಗಿದೆ.

ಶಾಸಕರ ಭರವಸೆ
ಖಾಸಗಿಯಾಗಿ ಪರೀಕ್ಷೆ ಕಟ್ಟುವವರು ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ಈಗಾಗಲೇ ಬಸ್ಸಿನ ವ್ಯವಸ್ಥೆಯೂ ಇದೆ. ಅಲ್ಲಿಗೆ ಹೋಗಲು ಯಾರಿಗಾದರೂ ಪರೀಕ್ಷಾರ್ಥಿಗಳಿಗೆ ವಾಹನದ ಸಮಸ್ಯೆಯಾದರೆ, ಸೂಕ್ತ ಕ್ರಮ ಕೈಗೊಳ್ಳಲು ಪ್ರಯತ್ನಿಸುತ್ತೇನೆ.
-ಹರೀಶ್ ಪೂಂಜ, ಶಾಸಕರು

ಖಾಸಗಿಯಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಕಷ್ಟ ಕೇಳುವವರಿಲ್ಲ !
ದೈನಂದಿನ ತರಗತಿಗಳಿಗೆ ತೆರಳಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ವು ಸೂಕ್ತ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸುತ್ತಿದೆ. ಆದರೆ ಖಾಸಗಿಯಾಗಿ ಪರೀಕ್ಷೆ ಗೆ ಕಟ್ಟುವ ವಿದ್ಯಾರ್ಥಿಗಳ ಕಷ್ಟಗಳನ್ನು ಕೇಳುವವರಿಲ್ಲದಾಗಿದೆ. ಆ ವಿದ್ಯಾರ್ಥಿಗಳು ಜಿಲ್ಲಾ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕು ಹಾಗೂ ಅವರಿಗೆ ಬಸ್ಸಿನ ವ್ಯವಸ್ಥೆ ಯು ಮಾಡಿಲ್ಲ. ಜಿಲ್ಲಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳ ಪೋಷಕರಲ್ಲಿಯೂ ಕೊರೊನಾ ವೈರಸ್ ಕಾರಣದಿಂದಾಗಿ ಆತಂಕ ಹೆಚ್ಚಿದೆ. ಪರೀಕ್ಷೆ ಬರೆಯುವ ಖಾಸಗಿ ವಿದ್ಯಾರ್ಥಿಗಳ ಬಗ್ಗೆ ಸರ್ಕಾರ, ಶಿಕ್ಷಣ ಸಚಿವರು ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ನಮ್ಮ ಕಳಕಳಿಯ ಮನವಿ ಎಂದು ಬೆಳ್ತಂಗಡಿ ಮಾಸ್ಟರ್‍ಸ್ ಕೋಚಿಂಗ್ ಸೆಂಟರ್ ನ ಮುಖ್ಯಸ್ಥೆ ಶ್ರೀಮತಿ ರಮ್ಯಾ ಸಂತೋಷ್ ಹೇಳಿದ್ದಾರೆ.

ಈ ಕೊರೊನಾ ವೈರಸ್ ಸೋಂಕಿನ ಆತಂಕದ ಸಂದರ್ಭದಲ್ಲಿ ಜಿಲ್ಲಾ ಕೇಂದ್ರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ಬದಲು ಹತ್ತಿರದ ಶಾಲೆ ಅಥವಾ ತಾಲೂಕು ಕೇಂದ್ರ ದಲ್ಲಿ ಪರೀಕ್ಷೆ ಬರೆಯಲು ಅನುಕೂಲ ಮಾಡಿದ್ದರೆ ಉತ್ತಮವಿತ್ತು. ನಮಗೆ ಪರೀಕ್ಷೆ ಗೆ ತೆರಳಲು ಯಾವುದೇ ಬಸ್ಸಿನ ವ್ಯವಸ್ಥೆ ಮಾಡಿರುವ ಬಗ್ಗೆ ಮಾಹಿತಿ ಇಲ್ಲ.
– ಸುಮನ್ ಚಾರ್ಮಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.