ಬೆಳ್ತಂಗಡಿ:ದೇಶದ ಅಭಿವೃದ್ಧಿಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರನ್ನು ನಮ್ಮನಾಳುವ ಸರ್ಕಾರಗಳು ಕಡೆಗಣಿಸುತ್ತಿದ್ದು , ತಮ್ಮ ನೀತಿಯನ್ನು ಬದಲಾಯಿಸದಿದ್ದರೆ ಮುಂದೆ ಗಂಭೀರ ಸ್ವರೂಪದ ಹೋರಾಟ ಎದುರಿಸಬೇಕಾದೀತು ಎಂದು ಸಿಐಟಿಯು ತಾಲೂಕು ಅಧ್ಯಕ್ಷ , ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ (ಸಿಐಟಿಯು) ದ ತಾಲೂಕು ಅಧ್ಯಕ್ಷ, ನ್ಯಾಯವಾದಿ ಶಿವಕುಮಾರ್ ಎಸ್. ಎಂ ಎಚ್ಚರಿಕೆ ನೀಡಿದರು.
ಇಲ್ಲಿನ ಮಿನಿ ವಿಧಾನಸೌಧದ ಎದುರು ಮೇ.30 ರಂದು ನಡೆದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಸರ್ಕಾರ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಘೋಷಿಸಿದ ಪ್ಯಾಕೇಜ್ ಹಣವನ್ನು ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ತಕ್ಷಣ ನೀಡಬೇಕು. ಕಾರ್ಮಿಕರ ಪರವಾಗಿ ಕೆಲಸ ಮಾಡುತ್ತಿದ್ದ ಕಲ್ಯಾಣ ಮಂಡಳಿಯ ಕಾರ್ಯದರ್ಶಿ , ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಏಕಾಏಕಿ ವರ್ಗಾವಣೆ ಮಾಡುವ ಮೂಲಕ ಕಲ್ಯಾಣ ಮಂಡಳಿಯ ಸಾವಿರಾರು ಕೋಟಿ ರೂಪಾಯಿಗಳನ್ನು ಕೊಳ್ಳೆ ಹೊಡೆಯಲು ಯೋಚಿಸುತ್ತಿದೆ ಎಂದು ಆರೋಪಿಸಿದರು.
ಪ್ರಧಾನ ಕಾರ್ಯದರ್ಶಿ ವಸಂತ ನಡ ಮಾತನಾಡಿದರು.
ಈ ಸಂದರ್ಭದಲ್ಲಿ ಸಿಐಟಿಯು ಬೆಳ್ತಂಗಡಿ ತಾಲೂಕು ಉಪಾಧ್ಯಕ್ಷ ಶೇಖರ್ ಲಾಯಿಲ , ಮುಖಂಡರಾದ ಬಾಲಕೃಷ್ಣ ಮಾಲಾಡಿ , ಬೇಬಿ ಗೌಡ ಇಂದಬೆಟ್ಟು , ಯೋಗೀಶ್ ಬಂದಾರು , ಕಿರಣ್ ಮಾಚಾರು ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.
ಬೇಡಿಕೆಯ ಮನವಿ ಸಲ್ಲಿಕೆ;
* ಸರ್ಕಾರ ಘೋಷಿಸಿರುವ ಪ್ಯಾಕೇಜ್ ಹಣವನ್ನು ತಕ್ಷಣ ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ನೀಡಬೇಕು.
* ಲಾಕ್ ಡೌನ್ ಅವಧಿಯಲ್ಲಿ ಪ್ರತಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ವಾರಕ್ಕೆ 2000 ರೂಪಾಯಿಗಳಂತೆ ಮಾಸಿಕ 8000 ರೂಪಾಯಿ ನೀಡಬೇಕು.
* ಕಲ್ಯಾಣ ಮಂಡಳಿಯಲ್ಲಿರುವ ಹಣವನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ಮಾತ್ರ ಬಳಸಬೇಕು .
* ಫಲಾನುಭವಿಗಳ /ಮಕ್ಕಳ ಮದುವೆಗೆ ನೀಡುವ ಆರ್ಥಿಕ ಸಹಾಯಧನವನ್ನು ಎರಡೂ ಕುಟುಂಬಗಳಿಗೂ ನೀಡಬೇಕು.
* ಕಟ್ಟಡ ನಿರ್ಮಾಣ ಕಾರ್ಮಿಕರ ನೋಂದಾವಣೆಯನ್ನು ಸರಳಗೊಳಿಸಿ ತಕ್ಷಣ ಗುರುತು ಚೀಟಿ ನೀಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.