ವೇಣೂರು: ಲಾಕ್ಡೌನ್ ಎಫೆಕ್ಟ್ನಿಂದ ಅರ್ಧಕ್ಕೆ ನಿಂತಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಯು ಮತ್ತೆ ವೇಗ ಪಡೆದುಕೊಂಡಿದ್ದು, ಮಳೆಗಾಲದ ಸಂಚಾರದ ಬಗ್ಗೆ ಚಿಂತಿತರಾಗಿದ್ದ ಗ್ರಾಮಸ್ಥರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.
ಬಜಿರೆ ಗ್ರಾಮದ ಮುದ್ದಾಡಿಯಿಂದ ಗುಂಡೂರಿ-ಅಂಗರಕರಿಯ ಮಾರ್ಗವಾಗಿ ಸಿದ್ದಕಟ್ಟೆ ಹಾಗೂ ಮೂಡಬಿದಿರೆಗೆ ಸಂಪರ್ಕಿಸುವ ರಸ್ತೆಗೆ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ರೂ. 4 ಕೋಟಿ ಅನುದಾನ ಲಭಿಸಿತ್ತು. ಕಳೆದ ಜ. 17ರಂದು ಶಾಸಕ ಹರೀಶ್ ಪೂಂಜ ಅವರು ಶಿಲಾನ್ಯಾಸ ನೆರವೇರಿಸಿದ್ದರು. ನವೆಂಬರ್ ತಿಂಗಳಲ್ಲಿ ಕೆಲಸ ಆರಂಭವಾಗಿ ರಸ್ತೆಯ ಮರು ನಿರ್ಮಾಣ ಕಾಮಗಾರಿಯು ಬಳಿಕ ವೇಗ ಕಳೆದುಕೊಂಡು ಮಳೆಗಾಲದಲ್ಲಿ ಜನತೆಗೆ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿತ್ತು. ಆರಂಭದಲ್ಲಿ ಅತ್ಯಂತ ವೇಗವಾಗಿ ಕಾಮಗಾರಿಯನ್ನು ಪ್ರಾರಂಭಿಸಿದ್ದ ನಗರೋತ್ತಾನ ಸಂಸ್ಥೆಯ ಗುತ್ತಿಗೆದಾರರು ಬಳಿಕ ಜನವರಿ ತಿಂಗಳಲ್ಲಿ ಒಂದು ತಿಂಗಳುಗಳ ಕಾಲ ಕಾಮಗಾರಿಯ ಕೆಲಸವನ್ನು ಸ್ಥಗಿತಗೊಳಿಸಿದ್ದರು. ಮತ್ತೆ ಫೆಬ್ರವರಿ ತಿಂಗಳಲ್ಲಿ ಕಾಮಗಾರಿ ವೇಗ ಪಡೆಯುತ್ತಿದ್ದಂತೆ ಲಾಕ್ಡೌನ್ನಿಂದ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿತು.
ವೇಣೂರಿನಿಂದ ಸಿದ್ದಕಟ್ಟೆ ಮಾರ್ಗವಾಗಿ ಬಂಟ್ವಾಳವನ್ನು ಸಂಪರ್ಕಿಸುವ ಪ್ರಮುಖ ಜಿ.ಪಂ. ರಸ್ತೆ ಇದು. ಕಿತ್ತು ಹೋಗಿದ್ದ ಡಾಮರನ್ನು ಸಂಪೂರ್ಣ ಅಗೆದು ಅಗಲೀಕರಣ ಮಾಡಿ ಅತ್ಯಂತ ವಿಶಾಲವಾಗಿ ಹೊಸದಾಗಿಯೇ ರಸ್ತೆ ನಿರ್ಮಾಣ ಮಾಡಲಾಗಿದ್ದು, ದಶಕಗಳಿಂದ ಅಭಿವೃದ್ಧಿ ಕಾಣದ ರಸ್ತೆಯ ಚಿತ್ರಣ ಸಂಪೂರ್ಣ ಬದಲಾಗಿದೆ. ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದುಹೋಗಲು ಅನುಕೂಲವಾಗುವಂತೆ ಇದೀಗ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಯನ್ನು ನಿರ್ಮಿಸಲಾಗಿದೆ.