ಬೆಳ್ತಂಗಡಿ: ಲಾಯಿಲದಲ್ಲಿರುವ ಜ್ಯೋತಿ ಆಸ್ಪತ್ರೆಯನ್ನು ಸೀಲ್ಡೌನ್ ಮಾಡಲಾಗಿದೆ ಎಂಬ ಸಂದೇಶಗಳು ವಾಟ್ಸ್ಯಾಪ್ಗಳಲ್ಲಿ ಹರಿದಾಡುತ್ತಿರುವುದು ಕೇವಲ ವದಂತಿಯಾಗಿದೆ. ಅಂತಹ ಯಾವುದೇ ಘಟನೆಗಳು ನಡೆದಿಲ್ಲ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಸಿಸ್ಟರ್ ಸುಬಿನ್ ಅವರು ಸುದ್ದಿಗೆ ಮಾಹಿತಿ ನೀಡಿದ್ದಾರೆ.
ಜನರು ಅಪಪ್ರಚಾರಗಳಿಗೆ ಕಿವಿಗೊಡಬಾರದು, ಈ ರೀತಿ ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜ್ಯೋತಿ ಆಸ್ಪತ್ರೆಯು ಎಂದಿನಂತೆ ಜನರಿಗೆ ಆರೋಗ್ಯ ಸೌಲಭ್ಯವನ್ನು ನೀಡುತ್ತಿದೆ. ವಾಂತಿ, ಬೇಧಿ, ಹೊಟ್ಟೆನೋವು, ಗರ್ಭಿಣಿಯರ ತಪಾಸಣೆ, ಹೆರಿಗೆ ಸೇರಿ ಇನ್ನಿತರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಿಸ್ಟರ್ ಸುಬಿನ್ ತಿಳಿಸಿದ್ದಾರೆ.
ಕೊರೊನಾ ಗುಣಲಕ್ಷಣಗಳಾದ ಶೀತ, ಕೆಮ್ಮು, ಗಂಟಲು ನೋವು, ಜ್ವರ ಇರುವಂತವರನ್ನು ಬೆಳ್ತಂಗಡಿ ತಾಲೂಕು ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗುತ್ತದೆ.
ಮುಂಜಾಗ್ರತೆಯ ಕ್ರಮವಾಗಿ ಜ್ಯೋತಿ ಆಸ್ಪತ್ರೆಯ ವೈದ್ಯರು, ದಾದಿಯರು ಪರ್ಸ್ನಲ್ ಪ್ರೊಟೆಕ್ಷನ್ ಈಕ್ವಿಪ್ಮೆಂಟ್ (ಪಿಪಿಇ) ಕಿಟ್ಗಳನ್ನು ಧರಿಸಿಯೇ ರೋಗಿಗಳಿಗೆ ತಪಾಸಣೆ ಹಾಗೂ ಚಿಕಿತ್ಸೆಗಳನ್ನು ನೀಡುತ್ತಿದ್ದಾರೆ.
ಹಾಗೆಯೇ ಆಸ್ಪತ್ರೆಯ ಮುಂಭಾಗದಲ್ಲಿ ಸ್ಯಾನಿಟೈಸರ್, ಸೋಪು ಇಡಲಾಗಿದೆ. ಹೊರರೋಗಿ ಮತ್ತು ಒಳರೋಗಿ ವಿಭಾಗದಲ್ಲಿ ಕೇವಲ ಒಬ್ಬರಿಗೆ ಮಾತ್ರ ಅವಕಾಶ ನೀಡಿ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಆಸ್ಪತ್ರೆ ಆಡಳಿತಾಧಿಕಾರಿ ತಿಳಿಸಿದರು.