ಧರ್ಮಸ್ಥಳ ಡಿಪೋದಿಂದ ಸೀಮಿತ ಕೆಎಸ್‍ಆರ್ ಟಿಸಿ ಬಸ್‍ಗಳ ಸಂಚಾರ ಆರಂಭ

ಬಸ್‍ಗಳಲ್ಲಿ ಪ್ರಯಾಣಿಕರಿಗೆ ಸೀಮಿತ ಆಸನ ವ್ಯವಸ್ಥೆ, ಡಿಪೋ ವತಿಯಿಂದ ಚಾಲಕ, ನಿರ್ವಾಹಕರಿಗೂ ವೈದ್ಯಕೀಯ ಪರೀಕ್ಷೆ!

  • ಈಶಪ್ರಸನ್ನ

ಬೆಳ್ತಂಗಡಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‍ಡೌನ್ ಹೇರಿದ್ದರಿಂದ ಕಳೆದ ಒಂದೂವರೆ ತಿಂಗಳಿನಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‍ಆರ್ ಟಿಸಿ) ಬಸ್‍ಗಳ ಸಂಚಾರವೂ ಸ್ತಬ್ಧವಾಗಿತ್ತು. ರಾಜ್ಯ ಸರ್ಕಾರವು ಮೇ 19ರಿಂದ ಲಾಕ್‍ಡೌನ್ ಸಡಿಲಿಸಿ, ಕೆಲವು ಷರತ್ತುಗಳನ್ನು ವಿಧಿಸಿ ಸರ್ಕಾರಿ ಸಾರಿಗೆ ಬಸ್‍ಗಳ ಓಡಾಟಕ್ಕೆ ಅನುಮತಿ ನೀಡಿದೆ.

ಈ ಆದೇಶದ ಅನ್ವಯ ರಾಜ್ಯದ ಪ್ರಮುಖ ಯಾತ್ರಾಸ್ಥಳ ಕೇಂದ್ರವಾದ ಧರ್ಮಸ್ಥಳದಿಂದಲೂ ವಿವಿಧ ಊರುಗಳಿಗೆ ಕೆಎಸ್‍ಆರ್‍ಟಿಸಿ ಬಸ್‍ಗಳ ಸಂಚಾರವೂ ಸೀಮಿತವಾಗಿ ಆರಂಭಗೊಂಡಿದೆ. ಧರ್ಮಸ್ಥಳದಿಂದ ಮೇ 19ರಂದು ಪ್ರಮುಖವಾಗಿ ಮಂಗಳೂರು, ಪುತ್ತೂರು, ಕುಕ್ಕೆ ಸುಬ್ರಹ್ಮಣ್ಯ, ಕಡಬಕ್ಕೆ ಕೊಕ್ಕಡ- ನೆಲ್ಯಾಡಿ- ಇಚ್ಲಂಪಾಡಿ ಮಾರ್ಗವಾಗಿ ಬಸ್‍ಗಳು ಸಂಚರಿಸಿವೆ. ಬೆಳಗ್ಗೆ ಒಂದು ಬಸ್ ಬೆಂಗಳೂರಿಗೆ ಸಂಚರಿಸಿದೆ. ಮಂಗಳೂರು, ಪುತ್ತೂರಿಗೆ ಸಂಚರಿಸುವ ಬಸ್‍ಗಳು ಗರಿಷ್ಠ 30 ಮಂದಿ ಪ್ರಯಾಣಿಕರ ಒಳಗೊಂಡು ಕೆಲವು ಸೀಮಿತ ಪ್ರದೇಶಗಳಲ್ಲಿ ಮಾತ್ರವೇ ನಿಲುಗಡೆಯಾಗಲಿವೆ.

ಬಸ್ ಪ್ರಯಾಣಿಕರಿಗೂ ನಿಯಮ :
* ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಒಮ್ಮೆಗೆ ಗರಿಷ್ಠ 30 ಮಂದಿ ಪ್ರಯಾಣಿಕರಿಗೆ ಮಾತ್ರವೇ ಅವಕಾಶವಿದೆ.
* ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
* ಮೂರು ಆಸನವಿರುವಲ್ಲಿ ಇಬ್ಬರಿಗೆ ಮಾತ್ರ ಕೂರಲು ಅವಕಾಶ, ಎರಡು ಸೀಟು ಇರುವಲ್ಲಿ ಒಬ್ಬ ಪ್ರಯಾಣಿಕ ಕುಳಿತುಕೊಳ್ಳಬೇಕು.
* ಪ್ರಯಾಣಿಕರು ಸಾಮಾಜಿಕ ಅಂತರ ಕಾಪಾಡಬೇಕು, ಸ್ಯಾನಿಟೈಸರ್ ಹಾಕಿಕೊಳ್ಳಬೇಕು.

ಚಾಲಕ, ನಿರ್ವಾಹಕರಿಗೆ ವೈದ್ಯಕೀಯ ಪರೀಕ್ಷೆ:
ಧರ್ಮಸ್ಥಳ ಕೆಎಸ್‍ಆರ್‍ಟಿಸಿ ಡಿಪೋ ಕೇಂದ್ರವಾಗಿ ಹೊರಡುವ ಬಸ್‍ಗಳಲ್ಲಿ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದಕ್ಕಾಗಿ ಧರ್ಮಸ್ಥಳ ಡಿಪೋದ ಬಸ್‍ಗಳ ಎಲ್ಲ ಚಾಲಕ, ನಿರ್ವಾಹಕರಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಡಿಪೋದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುವ ಚಾಲಕರು, ನಿರ್ವಾಹಕರು ಹಾಗೂ ಸಿಬ್ಬಂದಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಇನ್ನೂ ಕೆಲವರಿಗೆ ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿಯೂ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಚಾಲಕ, ನಿರ್ವಾಹಕರು ಅರ್ಜಿ ನಮೂನೆಯಲ್ಲಿ ಶೀತ, ನೆಗಡಿ, ಕೆಮ್ಮು, ಜ್ವರ ಲಕ್ಷಣಗಳು ಇಲ್ಲವೆಂದು ಅಫಿಡವಿಟ್ ಕೂಡ ಬರೆಸಿಕೊಂಡು ಮುಂಜಾಗ್ರತೆ ವಹಿಸಲಾಗಿದೆ ಎಂದು ಧರ್ಮಸ್ಥಳ ಡಿಪೋ ಸಂಚಾರ ನಿಯಂತ್ರಕರಾದ ಅಮರೇಶ್ ತಿಳಿಸಿದರು.

ಸ್ಥಳೀಯರಿಂದ ನಿರ್ವಹಣೆ:
ಧರ್ಮಸ್ಥಳ ಡಿಪೋದಲ್ಲಿ ಸ್ಥಳೀಯ ಮಾರ್ಗಗಳ ರೂಟ್‍ಗಳಿಗೆ ಸಂಚರಿಸುವ ಬಸ್‍ಗಳಲ್ಲಿ ಸ್ಥಳೀಯ ಊರಿನ ಚಾಲಕರು, ನಿರ್ವಾಹಕರಿದ್ದರೆ, ಉತ್ತರ ಕರ್ನಾಟಕ ಭಾಗದ ಅಂತರ್‍ಜಿಲ್ಲೆಯ ಹಾಗೂ ದೂರದ ಊರಿಗೆ ತೆರಳದೆ ಇರುವ ಚಾಲಕರು, ನಿರ್ವಾಹಕರು ಕೆಲವು ಮಂದಿ ಇದ್ದಾರೆ. ಅವರ ಮುಖಾಂತರ ಡಿಪೋದಿಂದ ವಿವಿಧ ಊರುಗಳಿಗೆ ಬಸ್‍ಗಳನ್ನು ಹೊರಡಿಸಿ ಸಂಚಾರ ಮಾಡಿಸಲಾಗುತ್ತಿದೆ ಎಂದು ಅಮರೇಶ್ ಮಾಹಿತಿ ನೀಡಿದರು.

ಸ್ಥಳೀಯ ಊರುಗಳಿಗೆ ಬಸ್ ಸಂಚಾರವಿಲ್ಲ:
ಮೇ 19ರಂದು ಧರ್ಮಸ್ಥಳದಿಂದ ಮಂಗಳೂರಿಗೆ ಬೆಳಗ್ಗೆ ಏಳು ಗಂಟೆಗೆ ಒಂದು ಬಸ್ ಸಂಚರಿಸಿದರೆ, ಧರ್ಮಸ್ಥಳದಿಂದ ಪುತ್ತೂರಿಗೆ ಬೆಳಗ್ಗೆ 8ಗಂಟೆಗೆ, 11 ಗಂಟೆಗೆ, ಮಧ್ಯಾಹ್ನ 2 ಗಂಟೆಗೆ ಹಾಗೂ ಸಂಜೆ 5ಗಂಟೆಗೆ ಸಂಚರಿಸಲಿದೆ. ಬೆಳಗ್ಗೆ 7.30ಕ್ಕೆ ಬಿ.ಸಿ.ರೋಡ್‍ಗೆ ಒಂದು ಬಸ್ ಸಂಚರಿಸಿದೆ. ಅದರಲ್ಲಿಯೂ ಹೆಚ್ಚಿನ ಪ್ರಯಾಣಿಕರು ಇರಲಿಲ್ಲ. ಬೆಳ್ತಂಗಡಿಯಿಂದ ಚಾರ್ಮಾಡಿ, ನೆರಿಯಾ ಮುಂತಾದ ಪ್ರದೇಶಗಳಿಗೆ ತೆರಳುವ ಬಸ್‍ಗಳ ಸಂಚಾರ ಇನ್ನೂ ಆರಂಭಿಸಿಲ್ಲ ಎಂದು ಬೆಳ್ತಂಗಡಿಯ ಕೆಎಸ್‍ಆರ್‍ಟಿಸಿ ಸಂಚಾರ ನಿಯಂತ್ರಕರಾದ ಗಣೇಶ್ ನಾಯಕ್ ತಿಳಿಸಿದರು.

ಸುರಕ್ಷಾ ಕ್ರಮ ವಹಿಸಲಾಗಿದೆ
ಧರ್ಮಸ್ಥಳ ಡಿಪೋದಿಂದ ಬಸ್‍ಗಳ ಸಂಚಾರವನ್ನು ಮೇ 19ರಿಂದ ಆರಂಭಿಸಲಾಗಿದೆ. ಬಸ್‍ಗಳಲ್ಲಿ ಚಾಲಕ, ನಿರ್ವಾಹಕರಿಗೆ ಡಿಪೋ ವತಿಯಿಂದ ಸ್ಯಾನಿಟೈಸರ್, ಮಾಸ್ಕ್‍ಗಳನ್ನು ನೀಡಲಾಗಿದೆ. ಒಂದು ಬಸ್‍ನಲ್ಲಿ ಗರಿಷ್ಠ 30 ಪ್ರಯಾಣಿಕರು ಮಾತ್ರ. ಆದರೆ ಪ್ರಯಾಣಿಕರ ಸಂಖ್ಯೆ ತುಂಬಾ ಕಡಿಮೆ ಇದ್ದು, ಪ್ರಯಾಣಿಕರು ನಿಯಮಗಳ ಪಾಲಿಸುವಂತೆ ನಿರ್ವಾಹಕರು ನೋಡಿಕೊಳ್ಳಬೇಕು. ಚಾಲಕರು, ನಿರ್ವಾಹಕರಿಗೆ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ಬಸ್‍ಗಳಲ್ಲಿ ಸ್ಯಾನಿಟೈಸಿಂಗ್ ಕಾರ್ಯ ಮಾಡಲಾಗುವುದು. ಯಾವ ಬಸ್‍ಗಳು ಸಂಜೆ 7 ಗಂಟೆ ನಂತರ ಸಂಚರಿಸದಂತೆ ನಿಗಾ ವಹಿಸಬೇಕಾಗಿದೆ.
ಅಮರೇಶ್, ಧರ್ಮಸ್ಥಳ ಡಿಪೋ ಸಂಚಾರ ನಿಯಂತ್ರಕರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.