ಕೊರೋನಾದ ಈ ಸಂಕಷ್ಟದಿಂದ ಶಾಶ್ವತವಾಗಿ ಹೊರಬರಲು ಪ್ರಧಾನಿ ಮೋದಿಯವರ ‘ಲೋಕಲ್-ವೋಕಲ್’, ಮಹಾತ್ಮ ಗಾಂಧಿಯವರ ‘ಗ್ರಾಮ ಸ್ವರಾಜ್ಯವೇ’ ದಾರಿದೀಪ

ಕೊರೋನಾ ವೈರಸ್‌ನಿಂದಾಗಿ ಜಗತ್ತೇ ಲಾಕ್‌ಡೌನಲ್ಲಿದೆ. ಗ್ರಾಮಗ್ರಾಮಗಳು ಲಾಕ್‌ಡೌನ್‌ಗೆ ಒಳಪಟ್ಟಿದೆ. ಜನಜೀವನ ಅತ್ಯಂತ ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ಜಗತ್ತು ಮಹಾತ್ಮ ಗಾಂಧಿಯವರು ಹೇಳಿದ ಮಾತನ್ನು ನೆನಪಿಸಿಕೊಳ್ಳಬೇಕು.

ಜಗತ್ತಿಗೆ ಮನುಷ್ಯರ ಅವಶ್ಯಕತೆಗಳನ್ನು ಪೂರೈಸುವ ಶಕ್ತಿಯಿದೆ, ಸಂಪನ್ಮೂಲವಿದೆ. ಆದರೆ ಜನರ ಬೇಡಿಕೆಗಳನ್ನಲ್ಲ. ಅಂದರೆ ಜಗತ್ತಿನಲ್ಲಿರುವ ಎಲ್ಲಾ ಜನರ ಜೀವನ ಸಾಗಿಸಲು ಬೇಕಾದ ಸಂಪನ್ಮೂಲ ಜಗತ್ತಿನಲ್ಲಿದೆ. ದುರಾಸೆಯನ್ನು ಪೂರೈಸುವ ಶಕ್ತಿಯಿಲ್ಲ ಎಂಬ ಅರ್ಥದಲ್ಲಿ ಹೇಳಿದ್ದರು. ಸರಳ, ಸ್ವಚ್ಚ ಜೀವನಕ್ಕೆ ಒತ್ತು ಕೊಟ್ಟಿದ್ದರು. ಅದನ್ನು ಈಡೇರಿಸಲು ಗ್ರಾಮ ಸ್ವರಾಜ್ಯಕ್ಕೆ ಒತ್ತುಕೊಟ್ಟಿದ್ದರು.

ಗ್ರಾಮಗ್ರಾಮಗಳು ಸ್ವಾವಲಂಬಿತವಾಗಿರಬೇಕು. ಅಲ್ಲಿ ಜೀವನಕ್ಕೆ ಅವಶ್ಯವಿರುವ ಎಲ್ಲಾ ಸವಲತ್ತುಗಳಿರಬೇಕು. ಉತ್ಪಾದನೆಗಳಿರಬೇಕು, ಪರಾವಲಂಬಿ ಗಳಾಗಿರಬಾರದು. ಆಡಳಿತವು ಸ್ಥಳೀಯವಾಗಿದ್ದು, ದೆಹಲಿಯಿಂದ ಹಳ್ಳಿಗಲ್ಲ. ಹಳ್ಳಿಯಿಂದ ದೆಹಲಿಗೆ ಎಂದಾಗಬೇಕು. ಗ್ರಾಮಗಳು ಆರ್ಥಿಕವಾಗಿ ಸಬಲವಾಗಿದ್ದು, ಎಲ್ಲಾ ಸಂದರ್ಭಗಳಲ್ಲಿ ತಮ್ಮನ್ನು ರಕ್ಷಿಸಿಕೊಳ್ಳುವ ಶಕ್ತಿ ಹೊಂದಿರಬೇಕು. ಗ್ರಾಮಗ್ರಾಮಗಳು ಪೂರಕವಾಗಿ ಕೆಲಸಮಾಡಬೇಕು. ಹಾಗೇ ಆದಾಗ ಭಾರತ ಬಲಿಷ್ಠವಾಗುತ್ತದೆ ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಆದರೆ ನಮ್ಮ ದೇಶ ಸ್ವತಂತ್ರವಾದ ದಿನದಿಂದ ಇಂದಿನವರೆಗೂ ಪೇಟೆ, ಪಟ್ಟಣಗಳನ್ನು ಅವಲಂಬಿಸಿದೆ. ಪೇಟೆ, ಪಟ್ಟಣದ ಅಧಿಕಾರವನ್ನು (ಅಧಿಕಾರಿಗಳನ್ನು), ಆಡಳಿತವನ್ನು (ಮಂತ್ರಿಗಳನ್ನು), ಜನರಜೀವನವನ್ನು (ಉದ್ಯಮಿಗಳನ್ನು) ಬೆಳೆಸಿದೆ. ಅದಕ್ಕೆ ಪೂರಕವಾಗಿ ಹಳ್ಳಿಗಳನ್ನು ಬಳಸಿಕೊಂಡಿದೆ. ಅವುಗಳ ಅಭಿವೃದ್ಧಿಯನ್ನು ಕಡೆಗಣಿಸಿದೆ.

ಹಳ್ಳಿಯ ಜನರ ಜೀವನವನ್ನು ಪೇಟೆ ಪಟ್ಟಣಗಳವರ ಜೀವನದ ಅವಶ್ಯಕತೆಗಳನ್ನು ಪೂರೈಸುವಂತಹ ಹಂಗಿನ, ಗುಲಾಮಗಿರಿಯ, ಜೀತದ ಜೀವನಕ್ಕೆ ಒಳಪಡಿಸಿದೆ. ಹಳ್ಳಿಯ ಜನರು ಅನಿವಾರ‍್ಯವಾಗಿ ಜೀವನದ ಅವಶ್ಯಕತೆಗಳನ್ನು ಪೂರೈಸಲು, ಅಧಿಕಾರಕ್ಕಾಗಿ, ಐಷಾರಾಮಿ ಜೀವನಕ್ಕಾಗಿ ಪೇಟೆಗೆ ವಲಸೆ ಹೋಗುವಂತೆ ಮಾಡಿದೆ. ಮೂಲಭೂತ ಸೌಕರ್ಯವಿಲ್ಲದೆ ಹಳ್ಳಿಗಳು ಸೊರಗುವಂತೆ ಮಾಡಿದೆ. ವಸ್ತುಷಃ ನಾಶಮಾಡಿದೆ ಎಂದು ಹೇಳಿದರೆ ತಪ್ಪಾಗಲಾರದು. ಆದರೂ ಕೊರೋನಾ ಭೀತಿಯಲ್ಲಿ ಇಂದು ಸಂಕಷ್ಟವನ್ನು ಇಡೀ ದೇಶವೇ ಎದುರಿಸುತ್ತಿರುವ ಸಂದರ್ಭದಲ್ಲಿ ಭಾರತವನ್ನು ಕಾಪಾಡಿದ್ದು ಭಾರತದ ಹಳ್ಳಿಹಳ್ಳಿಗಳೇ ಎಂದೇ ಹೇಳಬೇಕು.

ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿಯವರು ಗ್ರಾಮಗಳ ಸ್ವಾವಲಂಬನೆಗೆ ಒತ್ತುಕೊಟ್ಟಿರುವುದು. (ತಡವಾಗಿ ಆದರೂ) ‘ಲೋಕಲ್-ವೋಕಲ್’ ಅಂದರೆ ಸ್ಥಳೀಯಕ್ಕೆ ಆದ್ಯತೆ ಎಂದಿರುವುದು ಗಮನಾರ್ಹ ಮತ್ತು ಭಾರತದ ಯಶಸ್ಸಿನ ದಿಕ್ಕಿನಲ್ಲಿ ಉತ್ತಮ ಬೆಳವಣಿಗೆ ಎಂದು ಹೇಳಬೇಕು. ಆ ದಿಕ್ಕಿನಲ್ಲಿ ಇಂದು ಗ್ರಾಮಗ್ರಾಮಗಳಲ್ಲಿ ಮನೆಮನೆಗೆ ಶಿಕ್ಷಣ ವ್ಯವಸ್ಥೆ, ಗ್ರಾಮೀಣ ಉದ್ಯೋಗಕ್ಕೆ ಆದ್ಯತೆ. ಗ್ರಾಮಗ್ರಾಮಗಳಲ್ಲಿ ಬೆಳೆಯುವ, ಉತ್ಪಾದಿಸುವ ವಸ್ತುಗಳಿಗೆ ಮಾರುಕಟ್ಟೆ ಮತ್ತು ವಿತರಣೆ ವ್ಯವಸ್ಥೆಗೆ ಕೇಂದ್ರ ಸರಕಾರ ಕೈಹಾಕಿದೆ. ಕೃಷಿಕರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವವರಿಗೆ ಆರ್ಥಿಕ ಬೆಂಬಲ ಘೋಷಿಸಿದೆ. ಅದನ್ನು ಎಲ್ಲರೂ ಸ್ವಾಗತಿಸಬೇಕಾಗಿದೆ. ಆ ಮೂಲಕ ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯದ ಆಶಯವನ್ನು ಈಡೇರಿಸಿ, ಮೋದಿಯವರು ಹೇಳುವ ಭವ್ಯಭಾರತವನ್ನು ಕಟ್ಟಬೇಕಾಗಿದೆ. ಕಳೆದ 35 ವರ್ಷಗಳಿಂದ ಸುಳ್ಯ, ಬೆಳ್ತಂಗಡಿ, ಪುತ್ತೂರು ತಾಲೂಕುಗಳಲ್ಲಿ ‘ಲೋಕಲ್‌ನ್ನು ವೋಕಲ್ ’ ಆಗಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಸುದ್ದಿ ಮಾಧ್ಯಮ (ಸುದ್ದಿ ಬಿಡುಗಡೆ ಪತ್ರಿಕೆ, ಸುದ್ದಿ ವೆಬ್‌ಸೈಟ್, ಯೂಟ್ಯೂಬ್ ಚಾನೆಲ್,) ಮತ್ತು ಸುದ್ದಿ ಮಾಹಿತಿ ಟ್ರಸ್ಟ್ ಇನ್ನು ಮುಂದೆಯೂ ಗ್ರಾಮೀಣ ಪ್ರದೇಶದಲ್ಲಿ ನಡೆಯಲಿರುವ ಎಲ್ಲಾ ಅಂತಹ ಚಟುವಟಿಕೆಗಳಿಗೆ ಸಂಪೂರ್ಣ ಬೆಂಬಲ ನೀಡಲಿದೆ ಮತ್ತು ತೊಡಗಿಸಿಕೊಳ್ಳಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.