ಬೆಳ್ತಂಗಡಿ ವಾರದ ಸಂತೆ ಎಪಿಎಂಸಿಯಲ್ಲಿಯೇ ಶಾಶ್ವತವಾಗುವುದೇ..?

ಕೊರೊನಾ ಲಾಕ್‍ಡೌನ್‍ನಿಂದ ವ್ಯಾಪಾರ ಕೊಂಚ ಇಳಿಮುಖ, ವಹಿವಾಟು ಹೆಚ್ಚಲು ಬೇಕಿದೆ ಸಮಯಾವಕಾಶ

  • ಈಶ ಪ್ರಸನ್ನ

ಬೆಳ್ತಂಗಡಿ: ಕೋವಿಡ್-19 ವೈರಸ್ ಸೋಂಕು ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಪ್ರತಿ ಸೋಮವಾರ ನಡೆಯುವ ತಾಲೂಕಿನ ವಾರದ ಸಂತೆಯನ್ನು ಕೆಲವು ವಾರಗಳ ಹಿಂದೆ ಸಂತೆಕಟ್ಟೆಯಿಂದ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರವಾಗಿರುವುದಕ್ಕೆ ಗ್ರಾಹಕರಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ, ವ್ಯಾಪಾರಸ್ಥರಲ್ಲಿ ಮಿಶ್ರ ಪ್ರತಿಕ್ರಿಯೆಗಳು ಬಂದಿದೆ.

ಕೋವಿಡ್-19 ವೈರಸ್ ಹರಡದಂತೆ ಪ್ರತಿಯೊಬ್ಬರ ಸುರಕ್ಷತೆಗಾಗಿ ವ್ಯಾಪಾರ ವಹಿವಾಟು ನಡೆಸುವಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಾದ್ದರಿಂದ ವಿಶಾಲ ಜಾಗ ಹೊಂದಿರುವ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಲಾಯಿತು. ಹಲವಾರು ವರ್ಷಗಳಿಂದ ವಾರದ ಸಂತೆ ನಡೆಯುತ್ತಿದ್ದ ಸಂತೆಕಟ್ಟೆಯ ವ್ಯಾಪ್ತಿಯಲ್ಲಿ ವಾಹನಗಳ ಸಂಚಾರಕ್ಕೆ ತೊಡಕು ಹಾಗೂ ವ್ಯಾಪಾರ ವಹಿವಾಟಿನ ಸ್ಥಳಗಳಲ್ಲಿ ಜನಜಂಗುಳಿಯಿಂದ ಇಕ್ಕಟ್ಟು ಉಂಟಾಗುವುದರ ಜತೆಗೆ ವಾಹನಗಳ ಪಾರ್ಕಿಂಗ್‍ಗೂ ಬಹಳ ಸಮಸ್ಯೆ ಉಂಟಾಗುತ್ತಿತ್ತು. ಎಪಿಎಂಸಿ ಪ್ರಾಂಗಣದಲ್ಲಿ ತರಕಾರಿ ಮಾರುಕಟ್ಟೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಒಣ ಮೀನು ಮಾರುಕಟ್ಟೆ ಪ್ರತ್ಯೇಕಿಸಲಾಗಿದೆ. ಖರೀದಿಗೆ ಬರುವ ಗ್ರಾಹಕರ ವಾಹನಗಳಿಗೂ ಯಾವುದೇ ಸಮಸ್ಯೆಯಾಗದಂತೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯ ಅನುಕೂಲವಿದೆ.

ವ್ಯಾಪಾರ ವಹಿವಾಟು ಇಳಿಮುಖ:
ಎಪಿಎಂಸಿಯಲ್ಲಿ ಮೊದಲ ವಾರದ ಸಂತೆಯಲ್ಲಿ ವ್ಯಾಪಾರ ವಹಿವಾಟು ಉತ್ತಮವಾಗಿತ್ತು. ಆದರೆ ಕಳೆದ ಎರಡು ವಾರದಿಂದ ವ್ಯಾಪಾರ ಇಳಿಮುಖವಾಗಿದ್ದು, ತಂದಿರುವ ತರಕಾರಿಗಳು ಉಳಿದು ಹಾಳಾಗುತ್ತಿದೆ. ಕೆಲವು ಕಡೆ ತರಕಾರಿ ಮಾರಾಟ ಮಾಡುವಲ್ಲಿ ನೆರಳಿನ ವ್ಯವಸ್ಥೆ ಇಲ್ಲದೆ ಬಿಸಿಲಿನ ತಾಪಕ್ಕೆ ತರಕಾರಿಗಳು ಬೇಗನೆ ಒಣಗುತ್ತದೆ.ತರಕಾರಿ ಒಣಗದಂತೆ ಇಲ್ಲಿ ಟರ್ಪಲ್ ಕಟ್ಟಲು ಆಗುತ್ತಿಲ್ಲ ಎಂದು ವ್ಯಾಪಾರಸ್ಥ ಸಲೀಂ ಸಮಸ್ಯೆ ಹೇಳಿಕೊಂಡರು. ಈ ಎರಡು ವಾರಗಳಲ್ಲಿ ಒಣ ಮೀನು ವ್ಯಾಪಾರವು ಇಳಿಮುಖವಾಗಿದೆ ಎಂದು ವ್ಯಾಪಾರಸ್ಥ ಅಬ್ಬಾಸ್, ಶಾಫಿ ಹೇಳಿದರು. ಮುಸ್ಲಿಮರ ಉಪವಾಸದ ಸಂದರ್ಭದಲ್ಲಿ ಹೆಚ್ಚು ಹಣ್ಣುಗಳು ಮಾರಾಟವಾಗುತ್ತವೆ. ಆದರೆ ಈ ಬಾರಿ ವ್ಯಾಪಾರ ತುಂಬಾ ಕಡಿಮೆಯಾಗಿದೆ ಎಂದು ಹಣ್ಣುಗಳ ಮಾರಾಟಗಾರರು ಅಭಿಪ್ರಾಯಪಟ್ಟರು.

ಎಪಿಎಂಸಿ ವ್ಯವಸ್ಥಿತವಾಗಿದೆ
ಎಪಿಎಂಸಿ ಪ್ರಾಂಗಣಕ್ಕೆ ಈಗ ತಾತ್ಕಲಿಕವಾಗಿ ವಾರದ ಸಂತೆ ಅಲ್ಲಿಗೆ ಸ್ಥಳಾಂತರವಾಗಿದ್ದು, ಶಾಶ್ವತವಾಗಿ ಅಲ್ಲಿಯೇ ವಾರದ ಸಂತೆ ನಡೆಸುವ ಬಗ್ಗೆ ತಾಲೂಕು ಆಡಳಿತದೊಂದಿಗೆ ಆ ನಂತರ ಚರ್ಚಿಸಿ ತೀರ್ಮಾನಿಸುತ್ತೇವೆ. ಇಲ್ಲಿ ವಿಶಾಲ ಜಾಗವಿರುವುದರಿಂದ ಬರುವ ಗ್ರಾಹಕರಿಗೆ ವಾಹನಗಳ ಪಾರ್ಕಿಂಗ್‍ಗೆ ಉತ್ತಮ ವ್ಯವಸ್ಥೆ ಇದೆ. ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯಲು ಅನುಕೂಲಕರವಾಗಿದೆ. ಅಲ್ಲಿ ವ್ಯಾಪಾರ ಮಾಡುವವರಿಗೆ ಏನಾದರು ತೊಂದರೆ ಆದರೆ ಅದನ್ನು ಪರಿಹರಿಸಲಾಗುವುದು. ಸಂತೆಕಟ್ಟೆ ಪ್ರದೇಶವನ್ನು ಯಾವ ಕಾರ್ಯಕ್ಕೆ ಬಳಸಲಾಗುವುದು ಎಂದು ತಾಲೂಕು ಆಡಳಿತ ಮುಂದಿನ ದಿನಗಳಲ್ಲಿ ತೀರ್ಮಾನಿಸಲಿದೆ.
ಹರೀಶ್ ಪೂಂಜ, ಶಾಸಕರು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ

ವ್ಯಾಪಾರಸ್ಥರ ಸಮಸ್ಯೆ ಪರಿಹರಿಸಲಾಗುವುದು
ಎಪಿಎಂಸಿಯಲ್ಲಿ ವ್ಯಾಪಾರಸ್ಥರಿಗೆ ತೊಂದರೆಯಾಗದಂತೆ ಫ್ಲಾಟ್‍ಫಾರಂಗಳನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು. ಕೊರೊನಾ ಹಿನ್ನೆಲೆಯಲ್ಲಿ ವಾರದ ಸಂತೆ ಅಲ್ಲಿಗೆ ತಾತ್ಕಾಲಿಕವಾಗಿ ಸ್ಥಳಾಂತರವಾಗಿದೆ. ವ್ಯಾಪಾರಸ್ಥರಿಗೆ ಏನಾದರೂ ಸಮಸ್ಯೆಗಳಿದ್ದಲ್ಲಿ ಅದನ್ನು ಪರಿಹರಿಸುತ್ತೇವೆ. ಮುಂದಿನ ವಾರವು ಎಪಿಎಂಸಿಯಲ್ಲೇ ಸಂತೆ ನಡೆಯಲಿದೆ. ಶಾಶ್ವತವಾಗಿ ಅಲ್ಲಿಯೇ ಸಂತೆ ನಡೆಸುವ ಬಗ್ಗೆ ಶಾಸಕರು, ತಾಲೂಕು ಆಡಳಿತ ತೀರ್ಮಾನಿಸಲಿದೆ.
–  ಎಂ.ಎಚ್.ಸುಧಾಕರ್, ಮುಖ್ಯಾಧಿಕಾರಿ, ನಗರ ಪಂಚಾಯತ್ ಬೆಳ್ತಂಗಡಿ

ವ್ಯಾಪಾರಸ್ಥರಿಗೆ ಮೂಲ ಸೌಕರ್ಯ ವ್ಯವಸ್ಥೆ ಕಲ್ಪಿಸಿದ್ದೇವೆ : ಎಪಿಎಂಸಿ ಅಧ್ಯಕ್ಷ ಕೇಶವ ಪಿ.ಗೌಡ
ಎಪಿಎಂಸಿ ಪ್ರಾಂಗಣದಲ್ಲಿ ತರಕಾರಿ ವ್ಯಾಪಾರಸ್ಥರಿಗೆ ಎಲ್ಲ ರೀತಿಯ ಅನುಕೂಲ ಮಾಡಲು ಸಿದ್ಧರಿದ್ದೇವೆ. ವ್ಯಾಪಾರಸ್ಥರಿಗೆ ತೊಂದರೆ ಆಗದಂತೆ ಫ್ಲಾಟ್‍ಫಾರಂ ಮಾಡಿ ಶೀಟ್ ಹಾಕುವ ವ್ಯವಸ್ಥೆ ಮಾಡಲು ಮುಂದಿನ ವಾರ ಸಭೆ ಕರೆದು ಈ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಎಪಿಎಂಸಿ ಅಧ್ಯಕ್ಷ ಕೇಶವ ಪಿ.ಗೌಡ ತಿಳಿಸಿದರು. ಸಂತೆಯ ದಿನಕ್ಕಿಂತ ಮೊದಲು ಬರುವ ವ್ಯಾಪಾರಸ್ಥರಿಗಾಗಿ ಸ್ನಾನ, ಶೌಚಕ್ಕಾಗಿ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಕುಡಿಯುವ ನೀರು ನಿರಂತರ ದೊರಕುತ್ತಿದೆ. ವಾರದ ಸಂತೆಯ ದಿನ ತಾತ್ಕಾಲಿಕವಾಗಿ ಕ್ಯಾಂಟೀನ್ ಆರಂಭಿಸಲು ಬರುವವರಿಗೆ ಅನುಕೂಲ ಮಾಡುತ್ತೇವೆ. ಅವರಿಗೆ ಒಂದು ತಿಂಗಳಿನ ಬಾಡಿಗೆ ವಿನಾಯಿತಿ ನೀಡಲಾಗುವುದು ಆದರೆ ಅಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಅವರ ಜವಾಬ್ದಾರಿಯಾಗಿದೆ. ಎಪಿಎಂಸಿಯಲ್ಲಿ ಪೊಲೀಸರಿಗೆ ಹಾಗೂ ಸಿಬ್ಬಂದಿಗೆ ಆಹಾರ ವ್ಯವಸ್ಥೆ ಮಾಡಲಾಗಿದೆ. ಲಾಕ್‍ಡೌನ್‍ನಿಂದಾಗಿ ಗ್ರಾಹಕರು ತರಕಾರಿ, ಒಣಮೀನುಗಳನ್ನು ದಾಸ್ತಾನು ಇಟ್ಟಿರುವುದರಿಂದ ಮೊದಲ ವಾರಕ್ಕಿಂತ ಈ ವಾರಗಳಲ್ಲಿ ವ್ಯಾಪಾರ ಸ್ವಲ್ಪ ಕಡಿಮೆ ಆಗಿರಬಹುದು.

ಜನರಿಗೆ ಹೆಚ್ಚು ಅನುಕೂಲವಿದೆ: ಎಪಿಎಂಸಿ ಕಾರ್ಯದರ್ಶಿ ರವೀಂದ್ರ
ಕೋವಿಡ್-19 ಹಿನ್ನೆಲೆಯಲ್ಲಿ ಗ್ರಾಹಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ತಾತ್ಕಾಲಿಕವಾಗಿ ವಾರದ ಸಂತೆಯು ಎಪಿಎಂಸಿ ಆವರಣಕ್ಕೆ ಬಂದಿದ್ದು, ಸಂತೆಕಟ್ಟೆ ಪ್ರದೇಶವು ಇತರ ಅಭಿವೃದ್ಧಿ ಕಾರ್ಯಗಳಿಗೆ ಲಭಿಸಿದರೆ ಉತ್ತಮ ಎಂದು ಎಪಿಎಂಸಿ ಕಾರ್ಯದರ್ಶಿ ರವೀಂದ್ರ ಅಭಿಪ್ರಾಯಪಟ್ಟರು. ವ್ಯಾಪಾರಸ್ಥರಿಗೆ ಎಪಿಎಂಸಿ ಆವರಣದಲ್ಲಿ ತರಕಾರಿ ಹಾಗೂ ಒಣಮೀನಿಗೆ ವಿವಿಧ ಫ್ಲಾಟ್‍ಫಾರಂಗಳು ಮಾಡಲಾಗಿದೆ. ಸಂತೆಯು ಎಪಿಎಂಸಿಗೆ ಬಂದಿದ್ದರಿಂದ ಜನರಿಗೆ ಹೆಚ್ಚು ಅನುಕೂಲವಾಗುವುದರ ಜೊತೆಗೆ ಕೃಷಿ ಮಾರುಕಟ್ಟೆಗೆ ಮೀಸಲಾಗಿರುವ ಪ್ರಾಂಗಣವು ಸದುಪಯೋಗವಾಗಿದೆ. ಈಗ ಹೆಚ್ಚಿನ ತಾಲೂಕು, ನಗರ ಪ್ರದೇಶಗಳಲ್ಲಿ ವಾರದ ಸಂತೆಯು ಎಪಿಎಂಸಿಗಳಲ್ಲಿ ಆಗುತ್ತಿದೆ. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ವ್ಯಾಪಾರಸ್ಥರಿಗೆ ಕ್ಯಾಂಟೀನ್ ವ್ಯವಸ್ಥೆ ಅನುಕೂಲ ಮಾಡುವಂತಿಲ್ಲ. ಈಗ ಪಾರ್ಸೆಲ್‍ಗಳ ಮೂಲಕ ಆಹಾರ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.

ಕಾಲಕ್ರಮೇಣ ವ್ಯಾಪಾರ ವೃದ್ಧಿಸುವ ಭರವಸೆ ಇದೆ
ಸಂತೆಕಟ್ಟೆಯಿಂದ ಎಪಿಎಂಸಿ ಪ್ರಾಂಗಣಕ್ಕೆ ವಾರದ ಸಂತೆ ಸ್ಥಳಾಂತರವಾದ ಮೇಲೆ ವ್ಯಾಪಾರದಲ್ಲಿ ಹೆಚ್ಚಿನ ಪ್ರಗತಿ ಉಂಟಾಗಿಲ್ಲ. ಇಲ್ಲಿಗೆ ಬಂದು ತರಕಾರಿ ಕೊಳ್ಳುವವರ ಸಂಖ್ಯೆ ಕಡಿಮೆ, ಲಾಕ್‍ಡೌನ್‍ನಿಂದಾಗಿ ಈಗ ವಾಹನದ ವ್ಯವಸ್ಥೆ ಕಡಿಮೆ ಇರುವುದರಿಂದ ಸಂತೆಗೆ ಬರುವವರ ಸಂಖ್ಯೆಯು ವಿರಳವಾಗಿದೆ. ತಾಲೂಕಿನ ಗ್ರಾಮೀಣ ಭಾಗದ ಜನರಿಗೆ ಸಂತೆಯು ಎಪಿಎಂಸಿಗೆ ಸ್ಥಳಾಂತರವಾಗಿರುವ ಬಗ್ಗೆ ಮಾಹಿತಿ ಇಲ್ಲದಿರುವ ಸಾಧ್ಯತೆ ಇದೆ. ಸ್ಥಳಾಂತರಗೊಂಡ ಮೇಲೆ ಎಲ್ಲವು ಇಲ್ಲಿಗೆ ಬರಬೇಕು ಸಂತೆಕಟ್ಟೆಯಲ್ಲಿ ಯಾವುದೇ ರೀತಿಯ ವ್ಯಾಪಾರಕ್ಕೆ ಅವಕಾಶಕೊಡಬಾರದು. ಎಪಿಎಂಸಿ ಪ್ರಾಂಗಣಕ್ಕೆ ಸಂತೆಯು ದಿಢೀರ್ ಸ್ಥಳಾಂತರವಾದ್ದರಿಂದ ಎಲ್ಲೆಡೆ ಪ್ರಚಾರವಾಗಿ ಗ್ರಾಹಕರಿಗೆ ಇಲ್ಲಿಗೆ ಬರಲು ಅಭ್ಯಾಸವಾಗಬೇಕು.
ನಾರಾಯಣ, ತರಕಾರಿ ವ್ಯಾಪಾರಸ್ಥರು

ಹಳ್ಳಿಯ ಜನರು ಸಂತೆಗೆ ಬರಬೇಕು
ಮೊದಲ ವಾರದ ಸಂತೆಯಲ್ಲಿ ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರ ಉತ್ತಮವಾಗಿತ್ತು. ಆದರೆ ಕಳೆದ ಎರಡು ವಾರದ ಸಂತೆಯಲ್ಲಿ ವ್ಯಾಪಾರ ಇಳಿಮುಖವಾಗಿದೆ. ಲಾಕ್‍ಡೌನ್ ಪರಿಣಾಮ ಹೆಚ್ಚಿರುವುದರಿಂದ ತಾಲೂಕಿನ ಗ್ರಾಮೀಣ ಪ್ರದೇಶದ ಜನರು ಸಂತೆಗೆ ಬರುತ್ತಿಲ್ಲ. ಹಳ್ಳಿಯ ಜನರು ಸಂತೆಗೆ ಬರಲು ಆರಂಭಿಸಿದರೆ ವ್ಯಾಪಾರ ಚೇತರಿಕೆ ಕಾಣಬಹುದು. ಪಟ್ಟಣದ ಜನರು ಹೆಚ್ಚು ಖರೀದಿಸುವುದಿಲ್ಲ ಅವರಿಗೆ ಸೋಮವಾರ ಸಂತೆ ಅಲ್ಲದೇ, ಬೇರೆ ದಿನಗಳಲ್ಲಿ ಅಂಗಡಿಗಳಲ್ಲಿ ಕೊಳ್ಳುವ ಆಯ್ಕೆ ಇದೆ. ಎಪಿಎಂಸಿ ಪ್ರಾಂಗಣದಲ್ಲಿ ಮೂಲಸೌಕರ್ಯ ವ್ಯವಸ್ಥೆ ಇದೆ ಆದರೆ ಇಲ್ಲಿ ಚಹಾ, ತಿಂಡಿ, ಊಟಕ್ಕೆ ಸ್ವಲ್ಪ ಸಮಸ್ಯೆಯಾಗಿದೆ. ಲಾಕ್‍ಡೌನ್ ಸಮಯದಲ್ಲಿ ಆಹಾರವನ್ನು ಪಾರ್ಸೆಲ್ ತರುತ್ತಿದ್ದೇವೆ.
ಪುರಂದರ, ತರಕಾರಿ ವ್ಯಾಪಾರಸ್ಥರು

ನನ್ನ ಬದಲು ಮನೆಯವರು ತರಕಾರಿ ತರುವಂತಾಗಿದೆ
ವಾರದ ಸಂತೆ ಎಪಿಎಂಸಿಗೆ ಸ್ಥಳಾಂತರವಾದ ನಂತರ ಲಾಕ್‍ಡೌನ್‍ನಿಂದಾಗಿ ವಾಹನಗಳ ಸಂಚಾರವಿಲ್ಲದೆ ನನಗೆ ಅಲ್ಲಿಗೆ ಹೋಗಿ ತರಕಾರಿ ತರಲು ಕಷ್ಟವಾಗಿದೆ. ಸಂತೆಕಟ್ಟೆಯಲ್ಲಿ ಸಂತೆ ಇರುವಾಗ ಸೋಮವಾರ ದೇವಸ್ಥಾನಕ್ಕೆ ಹೋಗಿ ಬರುವ ಸಂದರ್ಭದಲ್ಲಿ ತರಕಾರಿಗಳನ್ನು ಖರೀದಿಸುತ್ತಿದ್ದೆ. ಈಗ ಸ್ವಲ್ಪ ದೂರವಾದ್ದರಿಂದ ಮನೆಯವರು ಹೋಗಿ ತರುತ್ತಿದ್ದಾರೆ. ಈ ಕೊರೊನಾ ವೈರಸ್ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಜನಜಂಗುಳಿ ಆಗದಂತೆ ಮುಂಜಾಗ್ರತೆ ವಹಿಸಿ ಎಪಿಎಂಸಿಗೆ ಸ್ಥಳಾಂತರಿಸಿದ್ದು ಒಳ್ಳೆಯದಾಯಿತು.
ಪದ್ಮಾ ಕೊರ್ನಯಾ, ಗೃಹಿಣಿ

ವಾಹನಗಳ ಒತ್ತಡ ತಪ್ಪಿದೆ
ಪಟ್ಟಣದ ಸಂತೆಕಟ್ಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಸೋಮವಾರದ ಸಂತೆಯು ಎಪಿಎಂಸಿಗೆ ಸ್ಥಳಾಂತರವಾಗಿರುವುದು ವೈಯಕ್ತಿಕವಾಗಿ ನನಗೆ ಸ್ವಲ್ಪ ಮಟ್ಟಿನ ಅನಾನುಕೂಲವಾಗಿದೆ. ಆದರೆ ಸಾರ್ವಜನಿಕರ ವಾಹನಗಳ ಸಂಚಾರ ಮತ್ತು ಪಾರ್ಕಿಂಗ್ ದೃಷ್ಟಿಯಿಂದ ಸಂತೆ ಸ್ಥಳಾಂತರವಾಗಿದ್ದು ಉತ್ತಮ. ಇದರಿಂದ ಸಂತೆಕಟ್ಟೆಯಲ್ಲಿ ವಾಹನಗಳ ಸಂಚಾರದ ಒತ್ತಡ, ಪಾರ್ಕಿಂಗ್ ಕಿರಿಕಿರಿ ತಪ್ಪಿದಂತಾಗಿದೆ. ಬಸ್, ರಿಕ್ಷಾಗಳ ಓಡಾಟ ಆರಂಭವಾದರೆ ಅಗತ್ಯ ವಸ್ತುಗಳ ಖರೀದಿಗೆ ಅಲ್ಲಿಗೆ ಹೋಗಲು ಅನುಕೂಲವಾಗಲಿದೆ.
ಪುಷ್ಪಾ ಕುತ್ಯಾರು, ಗೃಹಿಣಿ

ಎಪಿಎಂಸಿ ಮಾರುಕಟ್ಟೆ ಪ್ರಾಂಗಣ ಸದುಪಯೋಗವಾಗಿದೆ
ವಾರದ ಸಂತೆಯು ಎಪಿಎಂಸಿ ಆವರಣಕ್ಕೆ ಸ್ಥಳಾಂತರವಾಗಿದ್ದು ಒಳ್ಳೆಯದಾಯಿತು. ಅನೇಕ ವರ್ಷಗಳಿಂದ ಉಪಯೋಗವಾಗದೆ ಇದ್ದ ಎಪಿಎಂಸಿ ಪ್ರಾಂಗಣ ವಾರದ ಸಂತೆಯ ಮುಖಾಂತರ ಸದುಪಯೋಗವಾಗುತ್ತಿದೆ. ಸಂತೆಕಟ್ಟೆಯಲ್ಲಿ ಪಾರ್ಕಿಂಗ್‍ಗೆ ಸಮಸ್ಯೆಯಾಗುತ್ತಿತ್ತು. ಎಪಿಎಂಸಿಯಲ್ಲಿ ಪಾರ್ಕಿಂಗ್‍ಗೆ ಬೇಕಾದಷ್ಟು ಸ್ಥಳಾವಕಾಶವಿದೆ. ಇಲ್ಲಿ ವಿಶಾಲ ಪ್ರದೇಶವಿರುವುದರಿಂದ ಜನಜಂಗುಳಿ ಉಂಟಾಗುವುದಿಲ್ಲ.
ಶಂಕರನಾರಾಯಣ, ಮುಗುಳಿ

ಸಂತೆ ಸ್ಥಳಾಂತರವಾಗಿದ್ದು ಉತ್ತಮವಾಯಿತು
ಸೋಮವಾರದ ಸಂತೆಯು ಎಪಿಎಂಸಿ ಮಾರುಕಟ್ಟೆಗೆ ಶಾಶ್ವತವಾಗಿ ಸ್ಥಳಾಂತರವಾಗುವುದು ಬೆಳ್ತಂಗಡಿಯ ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯದು. ಸಂತೆಕಟ್ಟೆ ವ್ಯಾಪ್ತಿಯಲ್ಲಿ ಸಂತೆ ನಡೆಸುವುದರಿಂದ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿತ್ತು. ಮುಂದಿನ ದಿನಗಳಲ್ಲಿ ಹೆದ್ದಾರಿಗಾಗಿ ರಸ್ತೆ ಅಗಲೀಕರಣವಾಗುವ ಸಂದರ್ಭ ಬಂದಾಗ ಸಂತೆಕಟ್ಟೆಯಲ್ಲಿ ನಡೆಯುತ್ತಿದ್ದ ಸಂತೆಯು ಪರ್ಯಾಯ ಹಾದಿ ಕಂಡುಕೊಳ್ಳುವುದು ಅನಿವಾರ್ಯವಾಗಿತ್ತು. ಆದ್ದರಿಂದ ಈ ಸಂದರ್ಭದಲ್ಲಿ ಎಪಿಎಂಸಿಗೆ ಸಂತೆ ಸ್ಥಳಾಂತರವಾದರೆ ಕ್ರಮೇಣ ವ್ಯಾಪಾರ ವೃದ್ಧಿಸಲು ಅವಕಾಶವಾಗಲಿದೆ.
ಸಂತೋಷ್, ಉಪನ್ಯಾಸಕರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.