ಮಳೆಗಾಲಕ್ಕೆ ಮುದ್ದಾಡಿ-ಸಿದ್ದಕಟ್ಟೆ ಸಂಪರ್ಕ ಕಡಿತ ಭೀತಿ ಮುಗಿಯದ ರಸ್ತೆ ಕಾಮಗಾರಿ; ಲಾಕ್‌ಡೌನ್ ಎಫೆಕ್ಟ್

Advt_NewsUnder_1
Advt_NewsUnder_1
Advt_NewsUnder_1

ವೇಣೂರು: ಕಳೆದ ನವೆಂಬರ್ ತಿಂಗಳಲ್ಲಿ ಆರಂಭವಾಗಿದ್ದ ಮುದ್ದಾಡಿ-ಗುಂಡೂರಿ-ಪೀಕಲ ಸಂಪರ್ಕ ರಸ್ತೆಯ ಮರು ನಿರ್ಮಾಣ ಕಾಮಗಾರಿಯು ವೇಗ ಕಳೆದುಕೊಂಡು ಮಳೆಗಾಲದಲ್ಲಿ ಜನತೆಗೆ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ.

ಆರಂಭದಲ್ಲಿ ಅತ್ಯಂತ ವೇಗವಾಗಿ ಕಾಮಗಾರಿಯನ್ನು ಪ್ರಾರಂಭಿಸಿದ್ದ ನಗರೋತ್ತಾನ ಸಂಸ್ಥೆಯ ಗುತ್ತಿಗೆದಾರರು ಬಳಿಕ ಜನವರಿ ತಿಂಗಳಲ್ಲಿ ಒಂದು ತಿಂಗಳುಗಳ ಕಾಲ ಕಾಮಗಾರಿಯ ಕೆಲಸವನ್ನು ಸ್ಥಗಿತಗೊಳಿಸಿದ್ದರು.

ಧೂಳಿನ ಗೋಳು:
ಮಣ್ಣು ತುಂಬಿದ ರಸ್ತೆಗೆ ದಿನಕ್ಕೆರಡು ಬಾರಿ ಗುತ್ತಿಗೆದಾರರು ಟ್ಯಾಂಕರ್ ಮೂಲಕ ನೀರು ಹಾಯಿಸುತ್ತಿದ್ದರೂ ಅದು ಸಾಕಾಗದೆ ರಸ್ತೆ ಬದಿಯ ನೂರಾರು ಮನೆಗಳು ಬಣ್ಣ ಕಳೆದುಕೊಂಡಿತ್ತು. ನಡೆದುಕೊಂಡು ಹೋಗುವ ವಿದ್ಯಾರ್ಥಿಗಳು ಹಾಗೂ ಬೈಕ್ ಸವಾರರು ಧೂಳಿನಿಂದ ತುಂಬಾ ತೊಂದರೆ ಅನುಭವಿಸಿರುವುದು ಇದೀಗ ಇತಿಹಾಸ.
ಮತ್ತೆ ಫೆಬ್ರವರಿ ತಿಂಗಳಲ್ಲಿ ಕಾಮಗಾರಿ ವೇಗ ಪಡೆಯುತ್ತಿದ್ದಂತೆ ದೇಶದಲ್ಲಿ ಕಾಣಿಸಿಕೊಂಡ ಮಹಾಮಾರಿ ಕೊರೊನಾ ರೋಗದಿಂದ ದೇಶ ಲಾಕ್‌ಡೌನ್‌ಗೊಂಡಿದ್ದು, ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿತು. ಬಳಿಕ ಕೆಲ ದಿನಗಳ ಹಿಂದೆ ಕಾಮಗಾರಿ ಮತ್ತೆ ಪ್ರಾರಂಭಗೊಂಡಿದ್ದು, ಮೋರಿ ನಿರ್ಮಿಸಿ ಅಗೆದಿರುವ ರಸ್ತೆಗೆ ಮಣ್ಣು ಮಿಶ್ರಿತ ಜಲ್ಲಿಕಲ್ಲನ್ನು ಹಾಕಲಾಗಿದೆ. ಆದರೆ ಕೆಲಸದಾಳುಗಳ ಕೊರತೆಯಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಮಳೆಗಾಲದ ಮುನ್ನ ಕೆಲಸ ಪೂರ್ಣಗೊಳ್ಳುವ ನಿರೀಕ್ಷೆ ಹುಸಿಯಾಗಿದೆ. ಈಗಾಗಿ ಅಗೆದಿರುವ ರಸ್ತೆಯಿಂದ ಮಳೆಗಾಲದಲ್ಲಿ ಮಣ್ಣು ಕೊಚ್ಚಿ ಹೋಗಿ ವಾಹನಗಳಿಗೆ ಸಂಚರಿಸಲು ಅಸಾಧ್ಯವಾಗುವ ಪರಿಸ್ಥಿತಿ ನಿರ್ಮಾಣ ಆಗಿ ಸಂಪರ್ಕ ಕಡಿತಗೊಳ್ಳುವ ಲಕ್ಷಣ ಕಾಣಿಸುತ್ತಿವೆ.

ಚರಂಡಿ ನಿರ್ಮಾಣ ಆಗಿಲ್ಲ:
ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದುಹೋಗಲು ಅನುಕೂಲವಾಗುವಂತೆ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಯನ್ನು ನಿರ್ಮಿಸಲಾಗಿಲ್ಲ. ಈಗಾಗಿ ಮಳೆಯ ನೀರು ರಸ್ತೆಯಲ್ಲೇ ಹರಿದು ತೋಡು ನಿರ್ಮಾಣ ಆಗುವ ಎಲ್ಲಾ ಸಾಧ್ಯತೆ ಕಂಡು ಬರುತ್ತಿದೆ. ಅಲ್ಲದೆ ಕೆಲ ಮನೆ, ಅಂಗಡಿ, ಹೊಟೇಲ್‌ಗಳಿಗೆ ಚರಂಡಿ ನೀರು ನುಗ್ಗುವ ಭೀತಿಯಲ್ಲಿ ಮಾಲಿಕರು ವ್ಯಕ್ತಪಡಿಸಿದ್ದಾರೆ.

ಕಾಮಗಾರಿಗೆ ಮೆಚ್ಚುಗೆ:
ವೇಣೂರಿನಿಂದ ಸಿದ್ದಕಟ್ಟೆ ಮಾರ್ಗವಾಗಿ ಬಂಟ್ವಾಳವನ್ನು ಸಂಪರ್ಕಿಸುವ ಪ್ರಮುಖ ಜಿ.ಪಂ. ರಸ್ತೆ ಇದು. ಕಿತ್ತು ಹೋಗಿದ್ದ ಡಾಮರನ್ನು ಸಂಪೂರ್ಣ ಅಗೆದು ಅಗಲೀಕರಣ ಮಾಡಿ ಅತ್ಯಂತ ವಿಶಾಲವಾಗಿ ಹೊಸದಾಗಿಯೇ ರಸ್ತೆ ನಿರ್ಮಾಣ ಮಾಡಲಾಗಿದ್ದು, ದಶಕಗಳಿಂದ ಅಭಿವೃದ್ಧಿ ಕಾಣದ ರಸ್ತೆಯ ಚಿತ್ರಣ ಸಂಪೂರ್ಣ ಬದಲಾಗಿದೆ. ಪ್ರತೀ ಮಳೆಗಾಲದಲ್ಲಿ ಬಸ್ ಸೇರಿದಂತೆ ಹಲವು ವಾಹನಗಳು ಊತು ಹೋಗುತ್ತಿದ್ದ ದೃಶ್ಯ ಮಾಮೂಲಿ ಎಂಬಂತಾಗಿತ್ತು. ಇದೀಗ ಅನುದಾನ ಮಂಜೂರುಗೊಂಡು ಇಲ್ಲಿನ ಜನ ನಿರೀಕ್ಷಿಸದ ಮಟ್ಟದಲ್ಲಿ ಅಗಲಗೊಂಡು ರಸ್ತೆ ಅಭಿವೃದ್ಧಿಯಾಗುತ್ತಿರುವುದಕ್ಕೆ ಇಲ್ಲಿನ ಜನತೆ ತಾಲೂಕಿನ ಶಾಸಕ ಹರೀಶ್ ಪೂಂಜ ಅವರ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕಾಮಗಾರಿಯನ್ನು ಶೀಘ್ರಗತಿಯಲ್ಲಿ ಮುಗಿಸುವಂತೆಯೂ ನಾಗರಿಕರು ಆಗ್ರಹಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.