ಆಹಾರ ಸಾಮಾಗ್ರಿಗಳಿಗೆ ಅಧಿಕ ದರ ವಸೂಲಿ ಸೂಕ್ತ ಕ್ರಮಕ್ಕೆ ಗ್ರಾ.ಪಂಗಳಿಗೆ ಸಚಿವರ ಸೂಚನೆ

ಬೆಳ್ತಂಗಡಿ: ದಿನಸಿ ಸಾಮಾಗ್ರಿ, ತರಕಾರಿ, ಹಣ್ಣು ಹಂಪಲುಗಳ ದರ ನಿಯಂತ್ರಣಕ್ಕೆ ಗ್ರಾಮ ಪಂಚಾಯತುಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸೂಚನೆ ನೀಡಿದ್ದಾರೆ.

ಅವರು ಎ.28ರಂದು ದ.ಕ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಬೆಳ್ತಂಗಡಿ ತಾಲೂಕಿನ ಆಯ್ದ 10 ಗ್ರಾಮ ಪಂಚಾಯತುಗಳ ಅಧ್ಯಕ್ಷ ಹಾಗೂ ಪಿಡಿಒಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದರು. ಕೆಲವು ಅಂಗಡಿಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚು ದರ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಗ್ರಾ.ಪಂಗಳ ಪಿಡಿಒ ತಮ್ಮ ವ್ಯಾಪ್ತಿಯ ಅಂಗಡಿಗಳಲ್ಲಿ ದರ ಪಟ್ಟಿಯನ್ನು ಪರಿಶೀಲಿಸಬೇಕು ಎಂದರು.

ಆಶಾ ಕಾರ್ಯಕರ್ತರು ಪ್ರತಿ ಮನೆಗಳಿಗೆ ತೆರಳಿ ಸಮೀಕ್ಷೆ ನಡೆಸಬೇಕು. ಇದಕ್ಕೆ ಪಂಚಾಯತು ಕಾರ್ಯಪಡೆ, ಆರೋಗ್ಯ ಇಲಾಖೆಯವರು ಸಹಕಾರ ನೀಡಬೇಕು. ಅಧ್ಯಕ್ಷರು, ಸದಸ್ಯರು ಒಂದು ತಂಡವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಆರಂಭಿಸಬೇಕು. ಕುಡಿಯುವ ನೀರು, ಸಣ್ಣ, ಸಣ್ಣ ಸಿವಿಲ್ ಕಾಮಗಾರಿಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಬಸವ ವಸತಿ ಯೋಜನೆಯಲ್ಲಿ ಮನೆ ಕಟ್ಟುವ ಕಾಮಗಾರಿ ಮಾಡಬಹುದು. ಕೊರೊನಾ ನಿರ್ವಹಣೆಗಾಗಿ ಪ್ರತಿ ಪಂಚಾಯತಕ್ಕೆ ರೂ.20 ಸಾವಿರ ನೀಡಲಾಗಿದ್ದು, ಇದರಲ್ಲಿ ವಿವಿಧ ಜಾಗೃತಿ ಮೂಡಿಸುವ ಕಾರ್ಯ ನಡೆಸುವಂತೆ ಸಲಹೆ ನೀಡಿದರು.

ಪ್ರಥಮ ಹಂತದಲ್ಲಿ ತಾಲೂಕಿನ ಲಾೈಲ, ಕುವೆಟ್ಟು, ಮಾಲಾಡಿ, ಮಡಂತ್ಯಾರು, ಉಜಿರೆ, ಕಲ್ಮಂಜ, ಮುಂಡಾಜೆ, ಧರ್ಮಸ್ಥಳ, ನಡ, ಅಂಡಿಂಜೆ ಗ್ರಾ.ಪಂಗಳಿಗೆ ನೇರ ವಿಡಿಯೋ ಕಾನ್ಫೆರೆನ್ಸ್‍ನಲ್ಲಿ ಮಾತನಾಡಲು ಬೆಳ್ತಂಗಡಿ ಮಿನಿ ವಿಧಾನ ಸೌಧದಲ್ಲಿ ಅವಕಾಶ ಮಾಡಲಾಯಿತು. ಪಂಚಾಯತದ ಅಧ್ಯಕ್ಷರು, ಪಿಡಿಒಗಳು ಭಾಗವಹಿಸಿದ್ದರು. ತಾಲೂಕು ಪಂಚಾಯತು ಕಾರ್ಯನಿರ್ವಹಣಾಧಿಕಾರಿ ಕೆ.ಇ ಜಯರಾಮ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.