ಶಾಸಕರ ಮೂಲಕ ತಾಲೂಕಿಗೆ ವಿತರಿಸುವ ಅಗತ್ಯ ವಸ್ತುಗಳ ಕಿಟ್ಟ್ ಧರ್ಮಸ್ಥಳದ ಲ್ಲಿ ಡಾ.‌ಹೆಗ್ಗಡೆಯವರಿಂದ ಬಿಡುಗಡೆ

ಬೆಳ್ತಂಗಡಿ:  ಶಾಸಕರ ನೇತ್ರತ್ವದಲ್ಲಿ ಶ್ರಮಿಕ ಕಚೇರಿ ಮೂಲಕ ದಾನಿಗಳ ಸಹಕಾರ ಮತ್ತು ಬದುಕು ಕಟ್ಟೋಣ ಬನ್ನಿ ತಂಡದ ಸಂಯೋಜನೆ ಯೊಂದಿಗೆ ತಾಲೂಕಿನ 81 ಗ್ರಾಮಗಳ 241 ಬೂತುಮಟ್ಟದಲ್ಲಿ ಅರ್ಹ ಕುಟುಂಬಗಳಿಗೆ ವಿತರಿಸುವ ಆಹಾರ ಸಾಮಾಗ್ರಿಗಳ ಕಿಟ್ಟ್ ಅನ್ನು ಧರ್ಮಸ್ಥಳದ ಲ್ಲಿ ಕ್ಷೇತ್ರದ ಧರ್ಮಾಧಿಕಾರಿ ಡಾ.‌ಡಿ ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.
ಕಿಟ್ಟ್ ಬಿಡುಗಡೆಗೊಳಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ನಾನು ಲಾಕ್‌ಡೌನ್ ಆದ ನಂತರ ಕ್ಷೇತ್ರದ ನನ್ನ ಪಟ್ಟದ ಕುರ್ಚಿಯಲ್ಲಿ ಕುಳಿತಿಲ್ಲ, ಕ್ಷೇತ್ರದ ಮುಖ್ಯ ದ್ವಾರದಿಂದ ಹೊರಗಡೆ ಹೋಗಿಲ್ಲ, ಆದ್ದರಿಂದ ಶಾಸಕರು,ಸಂಸದರು ಅವರೆಲ್ಲ ಇಲ್ಲಿಗೇ ಬಂದು ಈ ಕಾರ್ಯವನ್ನು ನನ್ನಿಂದ ಮಾಡಿಸಿದ್ದಾರೆ. ಇದು ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರಿಂದ ಆಗುತ್ತಿರುವ ಮಹತ್ ಕಾರ್ಯ, ತಾಲೂಕಿನ ಜನತೆಗೆ 30 ಸಾವಿರ ಕಿಟ್ಟ್‌ಗಳನ್ನು ಅವರು ವಿತರಿಸುತ್ತಿರುವುದು ಸಂತೋಷ ಎಂದರು.
ಪ್ರಧಾನಿಗಳ ಕರೆಗೆ ಎಲ್ಲರೂ ಸಹಕರಿಸುತ್ತಿದ್ದಾರೆ. ಇನ್ನೂ ಕೂಡ ಸರಕಾರದ ನಿರ್ದೇಶನಗಳನ್ನು ಮೀರದೆ ಪಾಲಿಸಬೇಕು ಎಂದು ಅವರು ಈ ಸಂದರ್ಭ ಕರೆ ನೀಡಿದರು.

ಹರೀಶ್ ಪೂಂಜರದ್ದು ಜಿಲ್ಲಿಗೇ ಮಾದರಿಯಾದ ಕೆಲಸ: ನಳಿನ್ ಕುಮಾರ್ ಕಟೀಲು:
ಪ್ರಧಾನಿಗಳು ನೀಡಿದ ಕರೆಯಂತೆ ಲಾಕ್‌ಡೌನ್‌ಗೆ ಜನರ ಸಹಕಾರ ಅತೀ ಮುಖ್ಯವಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಸೈನಿಕರಂತೆ ಕೆಲಸ ಮಾಡುತ್ತಿದ್ದಾರೆ. ಅದರ ಪರಿಣಾಮವಾಗಿ ಇಂದು ರಾಜ್ಯ ಮತ್ತು ದೇಶದಲ್ಲಿ ಕೊರೊನಾ ನಿಯಂತ್ರಣದಲ್ಲಿದ್ದಾರೆ. 1 ತಿಂಗಳಲ್ಲಿ ಸರಕಾರ ಬಹಳಷ್ಟು ಯೋಜನೆಗಳನ್ನು ಮಾಡಿದೆ. ಬಿಪಿಎಲ್-ಎಪಿಎಲ್ ಕಾರ್ಡ್‌ದಾರರಿಗೆ, ಕಾರ್ಡ್ ಇಲ್ಲದೇ ಇರುವವರಿಗೆ ಪಡಿತರಗಳನ್ನು ಮನೆಗೇ ತಲುಪಿಸುವ ಕಾರ್ಯ ಮಾಡಿದ್ದಾರೆ. ಅದರ ಮಧ್ಯೆಯೂ ಹತ್ತಾರು ಮನೆಗಳು ಕಷ್ಟದಲ್ಲಿರುವುದನ್ನು ಗುರುತಿಸಿ ಪ್ರತೀ ಬೂತ್ ಮಟ್ಟದಲ್ಲಿ ಬಾಡಿಗೆ ಮನೆಯಲ್ಲಿ ಇರುವವರಿಗೆ, ವಲಸೆ ಕಾರ್ಮಿಕರಿಗೆ ಇವರೆಲ್ಲರಿಗೂ ಶಾಸಕ ಹರೀಶ್ ಪೂಂಜ ಅವರು ಇವರೆಲ್ಲರಿಗೂ ಹುಡುಕಿ ಹುಡುಕಿ ಅವರೆಲ್ಲರಿಗೂ ಕಿಟ್ಟ್‌ಗಳನ್ನು ಕೊಡುವ ಕೆಲಸ ಮಾಡುತ್ತಿದ್ದಾರೆ. ಇನ್ನೂ ಕ್ಷೇತ್ರದಲ್ಲಿ ಜನ ಬಾಕಿ ಇದ್ದಾರೆ ಎಂದು ತಿಳಿದುಕೊಂಡು ಪ್ರತೀ ಮತಗಟ್ಟೆಗೆ ಅದನ್ನು ವಿಸ್ತರಿಸಬೇಕೆಂದು 30 ಸಾವಿರ ಜನರಿಗೆ ಕಿಟ್ಟುಕೊಡುವ ಬಹಳ ದೊಡ್ಡ ಕೆಲಸ ಮಾಡಿದ್ದಾರೆ. ಜಿಲ್ಲೆಯಲ್ಲಿ ಮಾದರಿ ಕಾರ್ಯ ಬೆಳ್ತಂಗಡಿ ಕ್ಷೇತ್ರದಲ್ಲಿ ಆಗಿದೆ. ಕೊರೊನಾ ನಿಯಂತ್ರಣದಲ್ಲಿ ಬೇರೆ ರಾಷ್ಟ್ರಗಳನ್ನು ನೋಡಿದಾಗ ನಮ್ಮ ದೇಶ ಮುಂದಿದೆ ಎಂದು ಅನಿಸುತ್ತದೆ. ಇದಕ್ಕೆ ಕಾರಣ ಪ್ರಧಾನಮಂತ್ರಿಗಳು ತೆಗೆದುಕೊಂಡಿರುವ ದಿಟ್ಟತನದ ಕ್ರಮ, ಅವರ ಮೇಲಿನ ಜನರ ವಿಶ್ವಾಸವಿಟ್ಟು ಎಲ್ಲರೂ ಮನೆಯೊಳಗೆ ಕುಳಿತುಕೊಂಡು ಸಾಮಾಜಿಕ ಅಂತರದಿಂದ ಕಾಪಾಡಿರುವುದರಿಂದ ಯಶಸ್ವಿಯಾಗಿದೆ.
ಪ್ರತಿ ಮನೆ ಸರ್ವೆ ಆರಂಭ:
ಇವತ್ತಿನಿಂದ ಪ್ರತೀ ಮನೆ ಮನೆ ಸರ್ವೆ ಕಾರ್ಯ ನಡೆಸಲು ಯೋಚನೆ ಮಾಡಿದ್ದೇವೆ. ಅಂಗನವಾಡಿ-ಆಶಾ ಕಾರ್ಯಕರ್ತೆಯರನ್ನು ಜೋಡಿಸಿಕೊಂಡು ಪ್ರತೀ ಮನೆ ಸರ್ವೆ ನಡೆಸಿ ಎಲ್ಲರಲ್ಲೂ ವಿಶ್ವಾಸ ಮತ್ತು ಧೈರ್ಯ ತುಂಬುವ ಕಾರ್ಯಮಾಡಬೇಕು ಎಂದು ಜಿಲ್ಲಾ ಟೀಮ್ ಕೆಲಸ ಮಾಡುತ್ತಿದೆ.
ಆಶಾಕಾರ್ಯಕರ್ತೆಯರು, ವೈದ್ಯರು, ಪೊಲೀಸ್ ಇಲಾಖೆ, ಪೌರ ಕಾರ್ಮಿಕರು ಎಲ್ಲರೂ ಜೀವದ ಹಂಗು ತೊರೆದು ಕೆಲಸ ಮಾಡುತ್ತಾರೆ. ಅವರೆಲ್ಲರೂ ಮನೆ ಕುಟುಂಬ ಎಲ್ಲಬಿಟ್ಟು ನಮಗೋಸ್ಕರ ಕೆಲಸ ಮಾಡುತ್ತಿದ್ದಾರೆ. ಅವರ ಮೇಲೆ ಹಲ್ಲೆ ಮಾಡುವಂತಹದ್ದು ರಾಷ್ಟ್ರದ್ರೋಹದ ಕೆಲಸ, ಇನ್ನು ಮುಂದಕ್ಕೆ ಆಗಬಾರದು, ಅವರಿಗೆ ರಕ್ಷಣೆ ಕೊಡಲು ರಾಜ್ಯ ಮತ್ತು ಕೇಂದ್ರ ಸರಕಾರಗಳು ಸುಗ್ರೀವಾಜ್ಞೆ ಹೊರಡಿಸಿದೆ. ದಂಡಗಳನ್ನು ಹಾಕಿ, ಜಾಮೀನೇ ಕೊಡದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ. ಬೆಂಗಳೂರು ಪಕ್ಕದಲ್ಲಿ ನಡೆದ ಘಟನೆಯಲ್ಲಿ ಅಷ್ಟೂ ಜನರನ್ನು ಬಂಧಿಸಿ ಸ್ಪಷ್ಟ ಸಂದೇಶವನ್ನು ಜನತೆಗೆ ನೀಡಿದ್ದಾರೆ. ಇನ್ನು ಅಂತಹಾ ಘಟನೆ ಮರುಕಳಿಸುವುದಿಲ್ಲ ಎಂಬ ವಿಶ್ವಾಸವಿದೆ.
ಜನಧನ್ ಖಾತೆಗೆ ಎರಡನೇ ಹಂತದಲ್ಲಿ ಹಣ ಬರಲಿದೆ:
ಜನಧನ್ ಯೋಜನೆ ಖಾತೆಗೆ ಪ್ರಥಮ ಹಂತದಲ್ಲಿ ವಿತರಿಸಲು 10 ಕೋಟಿ ರೂ ಬಂದಿದೆ. ತಲಾ 500 ರಂತೆ ನಮ್ಮ ಜಿಲ್ಲೆಯ ಎಲ್ಲಾ ಖಾತೆದಾರರಿಗೆ ಹೋಗಿದೆ. ಈಗ ಎರಡನೇ ಹಂತದ ಹಣ 1ಸಾವಿರ ಬರ್‍ತಾಇದೆ. ಈ ವಾರದಿಂದ ಪ್ರಾರಂಭವಾಗುತ್ತದೆ.
ಕಿಸಾನ್ ಸಮ್ಮಾನ್‌ಗೆ 26 ಕೋಟಿ ರೂ. ಬಂದಿದೆ:
ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತೀ ರೈತರಿಗೆ 2 ಸಾವಿರ ಕೊಡಬೇಕೆಂಬ ನಿಟ್ಟಿನಲ್ಲಿ ನಮ್ಮ ಜಿಲ್ಲೆಗೆ 26 ಕೋಟಿ ರೂ. ನಮ್ಮ ಜಿಲ್ಲೆಗೆ ಬಂದಿದೆ. ಅದನ್ನು ಹಂಚಲಾಗುತ್ತಿದೆ. ಎರಡನೇ ಹಂತದಲ್ಲಿ ಈ ತಿಂಗಳ ಕೊನೆಗೆ ಬರಲಿದೆ ಎಂದು ಸಂಸದರು ತಿಳಿಸಿದರು.

ಶಾಸಕ ಹರೀಶ್ ಪೂಂಜ, ಬಿಜೆಪಿ ಮಂಡಲದ ಅಧ್ಯಕ್ಷ ಜಯಂತ ಕೋಟ್ಯಾನ್, ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ತಾ.ಪಂ ಸ್ಥಾಯಿ ಸಮಿತಿಯ ಅಧ್ಯಕ್ಷ ಶಶಿಧರ ಎಂ ಕಲ್ಮಂಜ, ಸದಸ್ಯರಾದ ಧನಲಕ್ಷ್ಮೀ, ಸುಧೀರ್‌ ಆರ್ ಸುವರ್ಣ, ಪ್ರಮುಖರಾದ ಸದಾನಂದ ಪೂಜಾರಿ ಉಂಗಿಲಬೈಲು, ಪ್ರಶಾಂತ ಪಾರೆಂಕಿ, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.