ಕೋವಿಡ್-19ರ ಲಕ್ಷಣ ಕಂಡು ಬಂದರೆ ಫೀವರ್ ಕ್ಲಿನಿಕ್‍ಗಳಲ್ಲಿಯೇ ಪರೀಕ್ಷಿಸಿ : ಜಿಲ್ಲಾಧಿಕಾರಿ

  • ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಮನವಿ

ಮಂಗಳೂರು : ಕೋವಿಡ್-19ರ ಲಕ್ಷಣಗಳಾದ ಜ್ವರ, ಕೆಮ್ಮು, ಗಂಟಲು ನೋವು ಅಥವಾ ಉಸಿರಾಟದ ತೊಂದರೆ ಕಂಡು ಬಂದರೆ ಫೀವರ್ ಕ್ಲಿನಿಕ್‍ಗಳಲ್ಲಿ ಮಾತ್ರ ಪರೀಕ್ಷಿಸಿಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರು ಜನರಲ್ಲಿ ಮನವಿ ಮಾಡಿದ್ದಾರೆ.

ಈ ಫೀವರ್ ಕ್ಲಿನಿಕ್‍ಗಳು ಜಿಲ್ಲೆಯ ಎಲ್ಲ ಮೆಡಿಕಲ್ ಕಾಲೇಜುಗಳು, ತಾಲೂಕು ಆಸ್ಪತ್ರೆಗಳಲ್ಲಿ ಹಾಗೂ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಇದೆ. ಕೋವಿಡ್ ಲಕ್ಷಣ ಕಂಡು ಬಂದರೆ ಆದಷ್ಟೂ ಕೂಡಲೇ ವೈದ್ಯಾಧಿಕಾರಿಗಳ ಗಮನಕ್ಕೆ ತನ್ನಿ. ಎಷ್ಟು ಬೇಗನೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಿರೋ ಅಷ್ಟು ಬೇಗನೆ ಚಿಕಿತ್ಸೆ ನೀಡಿ ಗುಣಪಡಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

ಯಾರೇ ಆಗಲಿ, ವಿದೇಶ ಪ್ರಯಾಣ ಮಾಡಿದ್ದಲ್ಲಿ ಅಥವಾ ತಮಗೆ ಜ್ವರ, ಕೆಮ್ಮು, ಉಸಿರಾಟದ ತೊಂದರೆ ಇದ್ದಲ್ಲಿ ನೇರವಾಗಿ ಹತ್ತಿರದ ಫೀವರ್ ಕ್ಲಿನಿಕ್‍ನ್ನು ಮಾತ್ರ ಸಂಪರ್ಕಿಸಬೇಕು. ಅದು ಬಿಟ್ಟು ಮನೆಮದ್ದು, ಜ್ವರ ಬಂದರೆ ತಿಳಿಸದೇ ಇರುವುದು ಅಥವಾ ಸ್ಥಳೀಯವಾಗಿ ಚಿಕಿತ್ಸೆ ಪಡೆಯದೆ ಸಮೀಪದ ಫೀವರ್ ಕ್ಲಿನಿಕ್‍ಗಳನ್ನು ಸಂಪರ್ಕಿಸಲು ಅವರು ಮನವಿ ಮಾಡಿದ್ದಾರೆ.

ಕೋವಿಡ್ -19 ನಿಯಂತ್ರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಫೆಬ್ರವರಿಯಿಂದಲೇ ನಿರಂತರವಾಗಿ ಶ್ರಮಿಸುತ್ತಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ವಿದೇಶ ಪ್ರಯಾಣದಿಂದ ಬಂದಿರುವ ಪ್ರತಿಯೊಬ್ಬರ ಮನೆಗೆ ತೆರಳಿ ಮಾಹಿತಿಯನ್ನು ಕಲೆ ಹಾಕಿ ಗೃಹ ನಿಗಾವಣೆಯಲ್ಲಿರುವವರನ್ನು ಸಂಪರ್ಕಿಸಿ, ಅವರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ವಿದೇಶದಿಂದ ಜಿಲ್ಲೆಗೆ ಆಗಮಿಸಿ ಜಿಲ್ಲಾಡಳಿತದ ಗಮನಕ್ಕೆ ಬಾರದೇ ಇರುವವರು ಕೂಡ ಮಾಹಿತಿ ನೀಡಲು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಮನವಿ ಮಾಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.