ಬೆಳ್ತಂಗಡಿ ಸಂತೆಕಟ್ಟೆಯೊಳಗಿನ ವ್ಯಾಪಾರಿಗಳು ನಿಯಮ ಪಾಲಿಸಿ

  • ಎಲ್ಲಾ ಅಂಗಡಿಗಳಿಗೆ ನಗರ ಪಂಚಾಯತ್ ಮುಖ್ಯಾಧಿಕಾರಿ ಹಾಗೂ ಎಸ್.ಐ ಸೂಚನೆ

ಬೆಳ್ತಂಗಡಿ: ಪಟ್ಟಣದ ಸಂತೆಕಟ್ಟೆಯೊಳಗೆ ವ್ಯಾಪಾರಿಗಳು ನಗರ ಪಂಚಾಯತ್ ನಿಯಮಗಳನ್ನು ಉಲ್ಲಂಘಿಸಿ ವ್ಯಾಪಾರ ಮಾಡುತ್ತಿದ್ದು, ಅಂತವರಿಗೆ ವ್ಯಾಪಾರ ಮಾಡಲು ಅವಕಾಶ ನೀಡುವುದಿಲ್ಲ, ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಬೆಳ್ತಂಗಡಿ ನ.ಪಂ ಮುಖ್ಯಾಧಿಕಾರಿ ಸುಧಾಕರ್ ಹಾಗೂ ಬೆಳ್ತಂಗಡಿ ಠಾಣೆಯ ಎಸ್.ಐ ನಂದಕುಮಾರ್ ಅವರು ಸಂತೆಕಟ್ಟೆಯ ಎಲ್ಲಾ ಅಂಗಡಿಗಳಿಗೆ ಎ.17ರಂದು ತೆರಳಿ ಸೂಚನೆ ನೀಡಿದರು.

ಸಂತೆಕಟ್ಟೆಯೊಳಗೆ ತರಕಾರಿ, ಒಣಮೀನು, ಹಸಿಮೀನು ಹಾಗೂ ದಿನಸಿ ವ್ಯಾಪಾರಿಗಳು ರಸ್ತೆಯ ಅಂಚಿನವರೆಗೆ ತರಕಾರಿ, ಮೀನು, ದಿನಸಿ ಸಾಮಾನುಗಳನ್ನು ಇಟ್ಟು, ಖರೀದಿಗೆ ಬರುವವರಿಗೆ ಸಾಮಾಜಿಕ ಅಂತರ ಕಾಪಾಡಲು ಸಮಸ್ಯೆಯಾಗುತ್ತಿರುವ ದೂರುಗಳ ಹಿನ್ನಲೆಯಲ್ಲಿ ಅಧಿಕಾರಿಗಳಿಬ್ಬರು ಪ್ರತಿ ಅಂಗಡಿಗಳಿಗೆ ತೆರಳಿ ವ್ಯಾಪಾರಿಗಳಿಗೆ ಸೂಚನೆ ನೀಡಿದರು.

ಸಂತೆಕಟ್ಟೆಯೊಳಗೆ ನಿಗದಿಪಡಿಸಿದ ಸ್ಥಳದಲ್ಲೇ ವ್ಯಾಪಾರ ಮಾಡಬೇಕು. ಅದರಿಂದ ಒಂದಿಂಚು ಹೊರಗೆ ಬರಬಾರದು. ತರಕಾರಿ, ಹಸಿಮೀನು, ದಿನಸಿ ಸಾಮಾಗ್ರಿಗಳನ್ನು ರಸ್ತೆಯಂಚಿನವರೆಗೆ ಇಡುವುದರಿಂದ ಇದರ ಖರೀದಿಗೆ ಬರುವವರಿಗೆ ಸಾಮಾಜಿಕ ಅಂತರ ಕಾಯಲು ಸಮಸ್ಯೆಯಾಗುತ್ತದೆ. ಪ್ರತಿಯೊಬ್ಬರು ಅಂಗಡಿಯ ಎದುರು ಸಾಮಾಜಿಕ ಅಂತರ ಕಾಪಾಡಲು ಬಿಳಿ ಬಣ್ಣದಲ್ಲಿ ಗೆರೆಗಳನ್ನು ಹಾಕಬೇಕು. ಅಂಗಡಿಯವರು ತಮ್ಮ ಅಂಗಡಿಗಳಲ್ಲಿ ಸೋಪು ನೀರನ್ನು ಇಟ್ಟುಕೊಂಡು ಆಗಾಗ ಕೈ ತೊಳೆದುಕೊಳ್ಳಬೇಕು ಎಂದು ವ್ಯಾಪಾರಿಗಳಿಗೆ ಸೂಚನೆ ನೀಡಿದರು.

ನಗರ ಪಂಚಾಯತ್ ಮಾಡಿದ ನಿಯಮಗಳನ್ನು ಉಲ್ಲಂಘಿಸಿದವರಿಗೆ ಲಾಕ್‍ಡೌನ್ ಮುಗಿಯುವವರೆಗೆ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಸ್.ಐ ನಂದಕುಮಾರ್ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಇಂಜಿನಿಯರ್ ಮಹಾವೀರ ಆರಿಗ, ಸಿಬ್ಬಂದಿ ಲಕ್ಷ್ಮೀನಾರಾಯಣ, ಪೊಲೀಸ್ ಸಿಬಂದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.