ಪೊಲೀಸರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದರು ಮಸೀದಿಗೆ ದಾಳಿ ಇಟ್ಟು ಬರಿಗೈಯ್ಯಲ್ಲಿ ವಾಪಾಸಾದರು

ಮದ್ದಡ್ಕ: ಇಲ್ಲಿನ ಸಬರಬೈಲು ಎಂಬಲ್ಲಿ ಕಳೆದ 8 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ವಾದಿ ಇರ್ಫಾನ್ ಅಕಾಡೆಮಿಕ್ ಸೆಂಟರ್ ಪ್ರವರ್ತಿತವಾಗಿ ನಡೆಯುತ್ತಿರುವ ಮಸ್ಜಿದ್‌ನಲ್ಲಿ ಏ. 10 ರಂದು 40 ರಷ್ಟು ಮಂದಿ ಶುಕ್ರವಾರ ಮಧ್ಯಾಹ್ನದ ಜುಮಾ ನಮಾಝ್ ಅನ್ನು ಸಾಮೂಹಿಕವಾಗಿ ನಿರ್ವಹಿಸುತ್ತಿದ್ದಾರೆ ಎಂದು ಪೊಲೀಸ್ ಇಲಾಖೆಗೆ ಸುಳ್ಳು ಮಾಹಿತಿ ನೀಡಿ ಯಾಮಾರಿಸಿದ ಬಗ್ಗೆ ತಡವಾಗಿ ತಿಳಿದುಬಂದಿದೆ.

ವ್ಯಕ್ತಿ ನೀಡಿದ ಮಾಹಿತಿ ಆಧರಿಸಿ 4 ಜೀಪುಗಳಲ್ಲಿ ಅಗತ್ಯ ಕ್ರಮಗಳಿಗೆ ಸಜ್ಜಾಗಿ ಪೊಲೀಸರು ಸ್ಥಳಕ್ಕೆ ತೆರಳಿ ಪರೀಕ್ಷಿಸಿದಾಗ, ಸಂಸ್ಥೆಯ ಚೇರ್‌ಮೆನ್ ತಮ್ಮ ಕಚೇರಿಯಲ್ಲಿದ್ದರೆ, ಇನ್ನೊಬ್ಬ ಗುರುಗಳು ಅವರ ಕಚೇರಿಯಲ್ಲಿದ್ದುದನ್ನು ಮಾತ್ರ ಕಂಡು ಪೆಚ್ಚುಮೋರೆ ಹಾಕುವಂತಾಯಿತು. ಮಸ್ಜಿದ್ ಒಳಗೆ ೪೦ ಮಂದಿ ಇದ್ದಾರೆ ಎಂಬ ಮಾಹಿತಿ ಬಂದಿದ್ದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಪೊಲೀಸರು ಮಸ್ಜಿದ್ ಬಾಗಿಲು ತೆರೆಸಿ ಪರಿಶೀಲನೆ ನಡೆಸಿದರು. ಈ ವೇಳೆ ಕರೆ ಮಾಡಿದ್ದ ವ್ಯಕ್ತಿ ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿರುವುದು ಅವರಿಗೂ ಖಚಿತಗೊಂಡಿತ್ತು.

ಎಸ್.ಪಿ ಗೆ ದೂರು:
ಘಟನೆ ಬಗ್ಗೆ ಸಂಸ್ಥೆಯ ಚೇರ್‌ಮೆನ್ ಸಯ್ಯಿದ್ ಡಾ| ಫಝಲ್ ಜಮಲುಲ್ಲೈಲಿ ತಂಙಳ್ ಅವರು ಏ. ೧೪ ರಂದು ಜಿಲ್ಲಾ ಪೊಲೀಸ್ ಎಸ್.ಪಿ ಅವರಿಗೆ ಲಿಖಿತ ದೂರು ನೀಡಿ, ಸಂಸ್ಥೆಯ ಮಾಸಿಕ ಕಾರ್ಯಕ್ರಮ ಮತ್ತು ಇತರ ಕಾರ್ಯಚಟುವಟಿಕೆಗಳ ಬಗ್ಗೆ ಈ ಹಿಂದೆಯೂ ಪೊಲೀಸ್ ಇಲಾಖೆಯ ಹಂತದಲ್ಲಿ ಅಪಪ್ರಚಾರಗಳನ್ನು ಮಾಡಲಾಗಿತ್ತು. ಇದೀಗ ಮತ್ತೆ ಅಂತಹದ್ದೇ ಅಪನಂಬಿಕೆಯ ಸುಳ್ಳು ವದಂತಿ ಹಬ್ಬಿಸಲಾಗಿದೆ. ಆದುದರಿಂದ ಇದರ ಹಿಂದಿರುವ ಶಕ್ತಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂದರ್ಭ ಧರ್ಮಗುರು ಹಂಝ ಮದನಿ, ಅನುಗ್ರಹ ಸಂಸ್ಥೆಯ ಚೇರ್‌ಮೆನ್ ತಲ್‌ಹತ್ ಎಂ.ಜಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.