ನಾಳೆ 10ಗಂಟೆಗೆ ಪ್ರಧಾನಿ ಮೋದಿಯಿಂದ ದೇಶವನ್ನುದ್ದೇಶಿಸಿ ಭಾಷಣ

ನವದೆಹಲಿ: ಕೊರೊನಾ ವೈರಸ್ ಹರಡದಂತೆ ದೇಶದಲ್ಲಿ ವಿಧಿಸಿದ್ದ ಮೊದಲ ಹಂತದ ಲಾಕ್‍ಡೌನ್ ನಾಳೆಗೆ (ಎ.14) ಕೊನೆಯಾಗಲಿರುವುದರಿಂದ ಪ್ರಧಾನಿ ಮೋದಿ ಯಾವಾಗ ದೇಶವನ್ನುದ್ದೇಶಿಸಿ ಭಾಷಣ ಮಾಡುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು, ನಾಳೆ(ಎ.14) ಬೆಳಗ್ಗೆ 10 ಗಂಟೆಗೆ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ಟ್ವೀಟ್ ಮಾಡಿದೆ.

ಲಾಕ್‍ಡೌನ್ ಅವಧಿ ವಿಸ್ತರಣೆ ಕುರಿತು ಇದುವರೆಗೂ ಕೇಂದ್ರ ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಹೊರಬಂದಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ನಾಳಿನ ಭಾಷಣದ ಕುರಿತು ಸಹಜವಾಗಿ ದೇಶವಾಸಿಗಳಲ್ಲಿ ಕುತೂಹಲ ಮನೆ ಮಾಡಿದೆ.

ಈಗಾಗಲೇ ಒಡಿಶಾ, ಪಂಜಾಬ್ ಹಾಗೂ ಕರ್ನಾಟಕ ರಾಜ್ಯ ಸರ್ಕಾರಗಳು ಲಾಕ್‍ಡೌನ್ ಅವಧಿಯನ್ನು ಏ.30ರವರೆಗೆ ವಿಸ್ತರಿಸಿದ್ದು, ಇನ್ನುಳಿದ ರಾಜ್ಯಗಳು ಕೇಂದ್ರ ಸರ್ಕಾರದ ಆದೇಶಕ್ಕೆ ಕಾಯುತ್ತಿವೆ. ಅದರಂತೆ ಪ್ರಧಾನಿ ಮೋದಿ ಅವರ ನಾಳಿನ ಭಾಷಣದಲ್ಲಿ ಲಾಕ್‍ಡೌನ್ ಹಣೆಬರಹ ಸ್ಪಷ್ಟವಾಗಿ ಗೊತ್ತಾಗಲಿದ್ದು, ಪ್ರಧಾನಿ ಮೋದಿ ಲಾಕ್‍ಡೌನ್ ಅವಧಿಯನ್ನು ವಿಸ್ತರಿಸಲಿದ್ದಾರೆ ಎಂಬುದೇ ಬಹುತೇಕರ ಅಭಿಪ್ರಾಯವಾಗಿದೆ.

ಈಗಾಗಲೇ ತಜ್ಞರ, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ವಿಪಕ್ಷ ನಾಯಕರ ಅಭಿಪ್ರಾಯವನ್ನು ಸಂಗ್ರಹಿಸಿರುವ ಪ್ರಧಾನಿ ಮೋದಿ, ಇವುಗಳ ಆಧಾರದ ಮೇಲೆಯೇ ನಾಳೆಯಿಂದ ಮತ್ತೆ ಲಾಕ್‍ಡೌನ್ ಅವಧಿ ವಿಸ್ತರಿಸುವ ಸಾಧ್ಯತೆಯೇ ದಟ್ಟವಾಗಿದೆ.
ಪ್ರಧಾನಿ ಕಚೇರಿಯ ಟ್ವೀಟ್‍ನಿಂದ ಇಡೀ ದೇಶದ ಗಮನ ಸೆಳೆದಿದ್ದು, ದೇಶವಾಸಿಗಳಿಗೆ ನಾಳೆ ಪ್ರಧಾನಿ ಮೋದಿ ಮಹತ್ವದ ಸಂದೇಶದಲ್ಲಿ ಏನು ಹೇಳಲಿದ್ದಾರೆ ಎಂಬ ಕುತೂಹಲವಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.