ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲೂ ಸಾಮಾಜಿಕ ಅಂತರದ ಪಾಠ

*ಕಡ್ಡಾಯವಾಗಿ ಒಂದು ಮೀಟರ್ ಅಂತರ ಕಾಯಲು ಪೊಲೀಸರಿಂದ ಸೂಚನೆ

ಬೆಳ್ತಂಗಡಿ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವುದಕ್ಕಾಗಿ ದೇಶಾದ್ಯಂತ 21ದಿನಗಳ ಕಫ್ರ್ಯೂ ಮಾದರಿಯ ಲಾಕ್‍ಡೌನ್, ನಿಷೇಧಾಜ್ಞೆಯ 3ನೇ ದಿನ ತಾಲೂಕಿನ ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಖರೀದಿಸುವವರಿಗೆ ಪೊಲೀಸರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದರು.

ಬೆಳ್ತಂಗಡಿ ಪಟ್ಟಣದಲ್ಲಿ ಮಾ.27ರಂದು ಅಗತ್ಯ ವಸ್ತುಗಳಾದ ದಿನಸಿ, ತರಕಾರಿ ಮಾರುಕಟ್ಟೆಗಳಲ್ಲಿ ಖರೀದಿಗೆ ಬಂದ ಸಾರ್ವಜನಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸುಣ್ಣದ ಮಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಇದನ್ನು ಜನರು ಮೀರದಂತೆ ಪೊಲೀಸರು ನಿಗಾ ವಹಿಸುತ್ತಿರುವುದು ಕಂಡು ಬಂತು.

ಮಡಂತ್ಯಾರು ನಿಶ್ಯಬ್ಧ :
ತಾಲೂಕಿನ ಪ್ರಮುಖ ವ್ಯಾಪಾರ ಕೇಂದ್ರವಾಗಿ ಜನಸಂದಣಿಯಿಂದ ಹಾಗೂ ವಿದ್ಯಾರ್ಥಿಗಳಿಂದ ಕೂಡಿರುತ್ತಿದ್ದ ಮಡಂತ್ಯಾರು ಈಗ ನಿಶ್ಯಬ್ಧವಾಗಿದೆ. ಜನರು ಅಗತ್ಯ ವಸ್ತುಗಳ ಖರೀದಿ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಇಲ್ಲಿಯೂ ಸುಣ್ಣದ ಮಾರ್ಕಿಂಗ್ ಮಾಡಿ ಸೂಚಿಸಲಾಗಿದೆ. ‘ಈಗ ಔಷಧದ ಬೇಡಿಕೆ ಹೆಚ್ಚಿದೆ ಆದರೆ ಮಡಂತ್ಯಾರಿನ ಮೆಡಿಕಲ್‍ಗಳಿಗೆ ಔಷಧಗಳ ಸರಿಯಾದ ವಿತರಣೆ ಇಲ್ಲದೇ ಕೆಲವು ಔಷಧಗಳು ಇಲ್ಲದಂತಾಗಿದೆ’ ಎಂದು ಮಹಾವೀರ ಮೆಡಿಕಲ್‍ನ ಉದಯಕುಮಾರ್ ತಿಳಿಸಿದ್ದಾರೆ.


ಬಳಂಜ ಹಾಲಿನ ಡೇರಿಗಳಲ್ಲಿ ಸಾಮಾಜಿಕ ಅಂತರ:
ಕೊರೊನಾ ವೈರಸ್ ಹರಡುವ ಭೀತಿ ಹಿನ್ನಲೆಯಲ್ಲಿ ಬಳಂಜ, ನಾಲ್ಕೂರು ಹಾಗೂ ತೆಂಕಕಾರಂದೂರು ಸೇರಿದಂತೆ ಹಲವು ಗ್ರಾಮದ ಹಾಲುಗಳ ಡೇರಿಯಲ್ಲಿ ಸರತಿ ಸಾಲಿನಲ್ಲಿ ನಿಲ್ಲುವಾಗ 1 ಮೀಟರ್ ಸಾಮಾಜಿಕ ಅಂತರವನ್ನು ಕಾಯಲು ಸುಣ್ಣದ ಮಾರ್ಕಿಂಗ್ ಮಾಡಲಾಗಿದೆ. ಬಳಂಜ ಗ್ರಾ.ಪಂ ವ್ಯಾಪ್ತಿಯ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯುವಂತೆ ಸೂಚಿಸಲಾಗಿದೆ.

ಗೇರುಕಟ್ಟೆಯಲ್ಲೂ ನಿಯಮ ಪಾಲನೆ:
ಉಪ್ಪಿನಂಗಡಿ ರಸ್ತೆಯ ಗೇರುಕಟ್ಟೆಯಲ್ಲಿಯೂ ಅಗತ್ಯ ವಸ್ತುಗಳ ಖರೀದಿ ಅಂಗಡಿಗಳಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಎಸ್.ವಿ.ಟ್ರೇಡರ್ಸ್‍ನಲ್ಲಿ ಒಂದು ಮೀಟರ್ ಅಂತರ ಕಾಯಲು ವೃತ್ತಕಾರ ಮಾರ್ಕಿಂಗ್ ಮಾಡಲಾಗಿದೆ. ಕಳಿಯ ಗ್ರಾಮದ ಗೇರುಕಟ್ಟೆ ಹಾಲು ಉತ್ಪಾದಕರ ಸಂಘದಲ್ಲಿಯೂ ಸಾಮಾಜಿಕ ಅಂತರ ಪಾಲನೆಗೆ ವ್ಯವಸ್ಥೆ ಮಾಡಲಾಗಿದೆ.


ದೇವಸ್ಥಾನದಲ್ಲಿ ಕೊರೊನಾ ಜಾಗೃತಿ ಭಿತ್ತಿಪತ್ರ:
ನಾಳ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೊರೊನಾ ಬಗ್ಗೆ ಜಾಗೃತಿಗಾಗಿ ಬ್ಯಾನರ್‍ನ್ನು ಅಳವಡಿಸಿದ್ದು, ದೇವಳದ ವತಿಯಿಂದಲೂ ಕೊರೊನಾ ಹಿನ್ನೆಲೆಯಲ್ಲಿ ಭಕ್ತರು ದೇವರ ದರ್ಶನಕ್ಕೆ ಹಾಗೂ ಸೇವೆಗೆ ಅವಕಾಶವಿಲ್ಲ ಎಂದು ಭಿತ್ತಿಪತ್ರ ಅಳವಡಿಸಿ ವಿನಂತಿಸಲಾಗಿದೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.