ವಿದೇಶದಿಂದ ಬಂದವರು ಮನೆ ಗೋಡೆ ಮೇಲೆ ಭಿತ್ತಿಪತ್ರ ಅಕ್ಕದ ಪಕ್ಕದ ಮನೆಗಳಿಗೂ ನೋಟೀಸು ಜಾರಿ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ಕೊರೊನಾ ಭೀತಿ ಎದುರಾದ ಬಳಿಕ ಒಟ್ಟು 205 ಮಂದಿ ವಿದೇಶಗಳಿಂದ ಊರಿಗೆ ಬಂದಿದ್ದು ಅವರೆಲ್ಲರ ಮೇಲೆ ಇಲಾಖೆ ತೀವ್ರ ನಿಗಾ ಇರಿಸಿಕೊಂಡಿದೆ. ಈ ಎಲ್ಲರನ್ನೂ ಪರೀಕ್ಷೆಗೊಳಪಡಿಸಲಾಗಿದ್ದು ಇದರಲ್ಲಿ 3 ಮಂದಿ ಮಾತ್ರ ವಿಶೇಷ ನಿಗಾದಲ್ಲಿದ್ದಾರೆ. ಆದರೂ ಇವರು ಯಾವುದೇ ಕಾರಣಕ್ಕೂ ಮನೆ ಬಿಟ್ಟು ಹೊರಬಾರದಂತೆ ಮತ್ತು ಸಾರ್ವಜನಿಕರ ಜೊತೆ ಬೆರೆಯದಂತೆ ಈಗಾಗಲೇ ಅವರಿಗೆ ಕಟ್ಟುನಿಟ್ಟಿನ ಆಜ್ಞೆ ಮಾಡಲಾಗಿದ್ದು, ಅವರ ಮನೆಯಗೆ ಭಿತ್ತಿ ಪತ್ರ ಅಂಟಿಸಲಾಗಿದೆ. ಜೊತೆಗೆ ಇವರು ಮನೆಯಿಂದ ಹೊರಬರುವುದನ್ನು ತಡೆಯಲು ಪೂರಕವಾಗಿ ಇವರ ಅಕ್ಕ ಪಕ್ಕದ ಮನೆಯವರಿಗೂ ಪೊಲೀಸ್ ಇಲಾಖೆ ಮೂಲಕ ಕಂದಾಯ ಇಲಾಖೆ ನೋಟೀಸು ಜಾರಿ ಮಾಡಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.ಬೆಳ್ತಂಗಡಿ ಐಬಿ ಯಲ್ಲಿ ಮಾಧ್ಯಮಕ್ಕೆ ಅವರು ಮಾಹಿತಿ ನೀಡುತ್ತಿದ್ದರು.

ಈ ಎಲ್ಲರ ಮನೆಗೆ ಈಗಾಗಲೇ ಆಶಾ ಕಾರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆಗೆ ಪೊಲೀಸ್ ಸಿಬ್ಬಂದಿ ಭೇಟಿ ಮಾಡಿ ಸೂಚನೆ ನೀಡಿದ್ದೇವೆ. ಅದನ್ನು ಮೀರಿದರೆ ಅಂತವರ ವಿರುದ್ಧ ಐಪಿಸಿ ಸೆಕ್ಷನ್ 188 ನಡಿ ಕೇಸು ದಾಖಲಿಸಿಕೊಳ್ಳಲಾಗುವುದು ಎಂದರು.

 

ಎಪ್ರಿಲ್ ಮೊದಲ ವಾರದಲ್ಲಿ ರೇಷನ್ ವಿತರಣೆ:
ಮುಂದಿನ ಎಪ್ರಿಲ್ ತಿಂಗಳ ಮೊದಲ ವಾರದಲ್ಲಿ ಸರಕಾರ ಘೋಷಣೆ ಮಾಡಿದಂತೆ ತಾಲೂಕಿನಲ್ಲಿರುವ 45 ಸಾವಿರ ಬಿಪಿಎಲ್ ಕುಟುಂಬಗಳಿಗೆ ರೇಷನ್ ವಿತರಣೆ ನಡೆಯಲಿದೆ. ಈ ವೇಳೆ ಇದ್ದ ತಂಬ್ ವ್ಯವಸ್ಥೆಯನ್ನು ಈಗಾಗಲೇ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದ್ದು, ಒಟಿಪಿ ಆಧಾರಿತ ಕ್ರಮ ಜಾರಿಯಲ್ಲಿದೆ. ಅದನ್ನೂ ತಾತ್ಕಾಲಿಕವಾಗಿ ಹಿಂಪಡೆಯುವಂತೆ ಬರೆದುಕೊಂಡಿದ್ದೇವೆ ಎಂದರು.

 

ಉದ್ಧೇಶಿದ ಕರ್ಫ್ಯೂ ನಿಯಮ ಉಲ್ಲಂಘಿಸಬೇಡಿ:
ಈಗಾಗಲೇ ಜನತಾ ಕರ್ಫ್ಯೂಗೆ ಜನ ವ್ಯಾಪಕ ಬೆಂಬಲ ನೀಡಿದ್ದಾರೆ. ಈ ರೀತಿ ನಿಮ್ಮಗಳ ಆರೋಗ್ಯ ಕಾಳಜಿಯಿಂದ ಕೈಗೊಂಡಿರುವ ನಿಮ್ಮ ನಡೆಗೆ ಶಾಸಕನಾಗಿ ಅಭಿನಂದನೆ ಹೇಳುತ್ತೇನೆ. ಅಗತ್ಯ ಸಾಮಾಗ್ರಿ ಖರೀದಿಗೆ ಮಧ್ಯಾಹ್ನದವರಗೆ ಅವಕಾಶವಿದ್ದು ಈ ಸಂದರ್ಭ ಆಹಾರ ಸಾಮಾಗ್ರಿಗಳ ಖರೀದಿಗೆ ನಿತ್ಯ ಪೇಟೆಗೆ ಬಂದು ಸಾರ್ವಜನಿಕವಾಗಿ ಬೆರೆತು ಈ ಕರ್ಫ್ಯೂನ ನಿಜವಾದ ಉದ್ದೇಶಕ್ಕೆ ಯಾರೂ ಧಕ್ಕೆ ತರಬಾರದು ಎಂದು ಶಾಸಕರು ವಿನಂತಿಸಿಕೊಂಡರು.

 

ಕೊಡು-ಕೊಳ್ಳುವಿಕೆ ಪದ್ಧತಿ ಅನುಸರಿಸಿ:
ಇಂತಹಾ ಸಂದಿಗ್ಧ ವಾತಾವರಣದಲ್ಲಿ ಯಾರೂ ಕೂಡ ಹೆಚ್ಚುವರಿ ಸಾಮಾಗ್ರಿಗಳನ್ನು ಕೊಂಡೋಗಿ ಪೇರಿಸಿಟ್ಟುಕೊಳ್ಳಬೇಡಿ. ಸಾಧ್ಯವಾದಷ್ಟು ಎಲ್ಲರಿಗೂ ದೊರೆಯುವಂತೆ ಉದಾರತೆ ತೋರಿ. ಹೆಚ್ಚಾಗಿ ಹಿಂದಿನ ಕಾಲದಲ್ಲಿ ಇದ್ದಂತೆ ಇರುವವರು ಇಲ್ಲದವರಿಗೆ ತಮ್ಮ ಅಕ್ಕ ಪಕ್ಕದಲ್ಲಿ, ಹಿಂದಿನ ಕಾಲದಲ್ಲಿ ಇದ್ದಂತೆ ದಿನಬಳಕೆ ವಸ್ತುಗಳನ್ನು ಕೊಡು- ಕೊಳ್ಳುವಿಕೆ ಮೂಲಕ ಸಹಾಯ ಮಾಡಿಕೊಳ್ಳಿ. ಸುಮ್ಮನೆ ಪಟ್ಟಣಕ್ಕೆ ಬಂದು ವಸ್ತುಗಳಿಗಾಗಿ ಮುಗಿ ಬೀಳಬೇಡಿ. ಅನಿವಾರ್ಯ ಸಂದರ್ಭಗಳಲ್ಲಿ ಸಾಕಷ್ಟು ಅಂತರ ಕಾಯ್ದುಕೊಂಡು ಜಾಗರೂಕತೆ ವಹಿಸಿ ಎಂದರು.

 

ಆರೋಗ್ಯ, ಪೊಲೀಸ್, ಮಾಧ್ಯಮದವರಿಗಾಗಿ ಪ್ರಾರ್ಥಿಸೋಣ

ಈ ರೋಗ ನಿಯಂತ್ರದ ಮಹಾ ಕಾರ್ಯದಲ್ಲಿ ರಾತ್ರಿ ಹಗಲೆನ್ನದೆ ಶ್ರಮಿಸುತ್ತಿರುವ ಆರೋಗ್ಯ ಇಲಾಖೆಯ ವೈದ್ಯರುಗಳಿಗೆ ಮತ್ತು ಸಿಬ್ಬಂದಿಗಳ ಆರೋಗ್ಯಕ್ಕಾಗಿ ಇಡೀ ಕ್ಷೇತ್ರದ ಜನತೆ ಪ್ರಾರ್ಥನೆ ಸಲ್ಲಿಸೋಣ. ಅವರ ಕೆಲಸ ಈ ಸಂದರ್ಭದಲ್ಲಿ ಬೆಲೆ ಕಟ್ಟಲಾಗದ್ದು. ಅದಲ್ಲದೆ ಅವರ ಜೊತೆಗೆ ಜನಜಾಗೃತಿ ಮೂಡಿಸುತ್ತಿರುವ ಪೊಲೀಸ್ ಇಲಾಖೆಗೆ, ಜನರಿಗೆ ನಿಖರವಾದ ಮಾಹಿತಿ ನೀಡಿ ಹೆಚ್ಚು ಹೆಚ್ಚು ಜನರನ್ನು ಕೊರೊನಾ ಬಗ್ಗೆ ಶಿಕ್ಷಿತರನ್ನಾಗಿ ಮಾಡುತ್ತಿರುವ ಮಾಧ್ಯಮದ ಸೇವೆ ಕೂಡ ಅತ್ಯುತ್ತಮವಾಗಿದೆ. ಅವರಿಗೂ ಜನ ಪ್ರಾರ್ಥನೆ ಸಲ್ಲಿಸಬೇಕು ಎಂದು ಕರೆನೀಡಿದರು.

ಸಂಘ ಸಂಸ್ಥೆಗಳೂ ಸಹಕರಿಸಿ:
ಕೆಲವು ಸಂಘ ಸಂಸ್ಥೆಗಳು ಸ್ವ ಇಚ್ಛೆಯಿಂದ ಸೇವಾ ಕಾರ್ಯಕ್ಕೆ ಹಾತೊರೆಯುತ್ತಿದ್ದು ದಯಮಾಡಿ ಇಲಾಖೆ ಅಧಿಕಾರಿಗಳು ಏನಾದರೂ ಸಹಾಯ ಕೇಳಿದರೆ ಅವರ ಜೊತೆ ಕೈ ಜೋಡಿಸಿ. ಹೊರತಾಗಿ ನೀವೇ ಏನಾದರೂ ಮಾಡುತ್ತೇವೆ ಎಂದು ಯಾವ ಸಂಘ ಸಂಸ್ಥೆಗಳು ಕೂಡ ಗುಂಪುಕಟ್ಟಿಕೊಂಡು ನೆರವು ನೀಡಲು ಮುಂದೆ ಬರಬೇಡಿ. ಗ್ರಾಮ ಮಟ್ಟದಲ್ಲಿ ಅನೇಕ ಸಂಘ ಸಂಸ್ಥೆಗಳಿದ್ದು ಎಲ್ಲರೂ ರಸ್ತೆಗಿಳಿದರೆ ನಿಮ್ಮ ನಿಯಂತ್ರಣ ಮಾಡುವುದೇ ಕಷ್ಟವಾಗಬಹುದು.ಪರಿಸ್ಥಿತಿ ಅರ್ಥ ಮಾಡಿಕೊಂಡು  ನೀವೆಲ್ಲವೂ ಮನೆಯಿಂದ ಹೊರಬಾರದೆ ಇರುವುದೇ ದೊಡ್ಡ ಸೇವೆ. ಇದು ನೀವೇ ರಸ್ತೆಗಿಳಿದು ಯಾರೊಬ್ಬರಿಗೂ ಸಹಾಯ ಮಾಡಲು ಇರುವ ಸಮಯವಲ್ಲ ಎಂದು ಸಂದೇಶ ನೀಡಿದರು.

ಹಳ್ಳಿಯಲ್ಲಿ ಮನೆಯಲ್ಲಿ ಉಳಿದುಕೊಳ್ಳುವುದೇನೂ ಸಮಸ್ಯೆಯಲ್ಲ:
ಗ್ರಾಮಾಂತರ ಭಾಗಗಳಲ್ಲಿ ವಾರ ಗಟ್ಟಲೆ ಮನೆಯಿಂದ ಹೊರಬಾರದೆ ಉಳಿದುಕೊಳ್ಳುವುದೇನೂ ಕಷ್ಟದ ಕೆಲಸವೇನೂ ಅಲ್ಲ. ಹಿಂದಿನ ಕಾಲದಲ್ಲಿ ಕೇವಲ ಗಂಜಿ ಮತ್ತು ಉಪ್ಪಿನಕಾಯಿ ಇದ್ದರೆ ಕುಳಿತುಕೊಳ್ಳುವ ಕಾಲ ಇತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ನಗರದ ಅಂಗಡಿಗಳ ಎದುರು ಮಾರ್ಕಿಂಗ್!
ನಾಳೆಯಿಂದ ಪಟ್ಟಣ ಪಂಚಾಯತ್ ವತಿಯಿಂದ ನಗರದ ಎಲ್ಲ ತುರ್ತು ಸಾಮಾಗ್ರಿಗಳ ಮಳಿಗೆಗಳ ಮುಂದೆ 4 ಅಡಿ ಅಂತರದಲ್ಲಿ ಜನ ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾರ್ಕ್ ಮಾಡಲು ಸೂಚನೆ ನೀಡಲಾಗಿದೆ. ಈ ಬಗ್ಗೆ ಮುಖ್ಯಾಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ಶಾಸಕರು ತಿಳಿಸಿದರು.

ಶಾಸಕರ ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಕಲಾಮಧು ಶೆಟ್ಟಿ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿದ್ಯಾವತಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕೆ.ಇ ಜಯರ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎಂ.ಹೆಚ್ ಸುಧಾಕರ್, ಡಾ. ತಾರಾಕೇಸರಿ, ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ, ತಹಶೀಲ್ದಾರ್ ಗಣಪತಿ ಶಾಸ್ತ್ರಿ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.