ಬೆಳ್ತಂಗಡಿ ತಾಲೂಕಿನಲ್ಲಿ ಜನಜೀವನ ಸಂಪೂರ್ಣ ಸ್ತಬ್ಧ

* ಖಾಸಗಿ ವಾಹನಗಳಲ್ಲಿ ಅನಗತ್ಯ ಸಂಚರಿಸುವವರಿಗೆ ಪೊಲೀಸರ ವಾರ್ನಿಂಗ್
* ಕೊರೊನಾ ಬಗ್ಗೆ ಜಾಗೃತಿಗಾಗಿ ಧ್ವನಿವರ್ಧಕ ಸಂದೇಶ

ಬೆಳ್ತಂಗಡಿ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಮುಂಜಾಗ್ರತಾ ಕ್ರಮವಾಗಿ ಲಾಕ್‌ಡೌನ್, ನಿಷೇಧಾಜ್ಞೆ ಹಿನ್ನೆಲೆಯಲ್ಲಿ ತಾಲೂಕಿನ ವ್ಯಾಪ್ತಿಯ ಅಂಗಡಿಗಳು ಮುಚ್ಚಿದ್ದರೆ, ಖಾಸಗಿ ವಾಹನಗಳು, ಬಸ್‌ಗಳು, ಆಟೋರಿಕ್ಷಾಗಳು ಮುಂತಾದವುಗಳ ಸಂಚಾರವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಕಟ್ಟುನಿಟ್ಟಿನ ಸಂಪೂರ್ಣ ಲಾಕ್‌ಡೌನ್ ಆದೇಶವಿದ್ದರಿಂದ ಮಾ.24ರಂದು ಬೆಳಗ್ಗೆಯಿಂದಲೇ ವಿರಳವಾಗಿ ಖಾಸಗಿ ವಾಹನಗಳು ಸಂಚರಿಸುತ್ತಿದ್ದವು. ಆ ಬಳಿಕವೂ ಬೆಳ್ತಂಗಡಿ ಮುಖ್ಯರಸ್ತೆಯಲ್ಲಿ ಸಂಚರಿಸುತ್ತಿದ್ದ ಖಾಸಗಿ ವಾಹನಗಳ ಸವಾರರನ್ನು ಪೊಲೀಸರು ನಿಲ್ಲಿಸಿ ವಿಚಾರಣೆ ನಡೆಸಿ ವಾಹನಗಳನ್ನು ಬಿಡುತ್ತಿದ್ದರು.

ಧ್ವನಿವರ್ಧಕ ಸಂದೇಶ: ಕೊರೊನಾ ಬಗ್ಗೆ ಜಾಗೃತಿ ಹಾಗೂ ಜನರು ಮನೆಯಿಂದ ಹೊರ ಬರದಂತೆ ಪ್ರಮುಖ ರಸ್ತೆಗಳು ಸೇರಿ ಎಲ್ಲ ಕಡೆಗಳಲ್ಲಿಯೂ ಆರೋಗ್ಯ ಇಲಾಖೆಯು ಧ್ವನಿವರ್ಧಕಗಳ ಮೂಲಕ ದಿನದಲ್ಲಿ ಹಲವು ಬಾರಿ ಸಂದೇಶಗಳನ್ನು ಸಾರುತ್ತಿದೆ. ತಾಲೂಕಿನಲ್ಲಿ ಹೋಂ ಕ್ವಾರೈಂಟೈನ್‌ನಲ್ಲಿರುವವರ ಮೇಲೆ ಪೊಲೀಸರು, ಆಶಾ ಕಾರ್ಯಕರ್ತೆಯರು ಅವರು ಮನೆಗಳಿಂದ ಹೊರ ಬರದಂತೆ ಹೆಚ್ಚಿನ ನಿಗಾ ವಹಿಸಿದ್ದಾರೆ.

ಎಲ್ಲೆಡೆ ಬಂದ್: ತಾಲೂಕಿನ ಪ್ರಮುಖ ಕೇಂದ್ರಗಳಾದ ಧರ್ಮಸ್ಥಳ, ಉಜಿರೆ, ಗುರುವಾಯನಕೆರೆ, ಮಡಂತ್ಯಾರು, ಅಳದಂಗಡಿ ಸೇರಿದಂತೆ ಹಲವು ಪ್ರದೇಶಗಳು ಅಂಗಡಿಗಳು ಬಂದ್ ಆಗಿದ್ದವು. ಜನರ ಸಂಚಾರವು ನಿಂತಿತ್ತು.

ನಮಾಜ್ ಸ್ಥಗಿತ: ಕೊರೊನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ಮಾ.31ರವರೆಗೆ ಎಲ್ಲ ಮಸೀದಿಗಳಲ್ಲಿಯೂ ಶುಕ್ರವಾರದ ಪ್ರಾರ್ಥನೆ ಒಳಗೊಂಡು ದೈನಂದಿನ ಸಾಮೂಹಿಕ ನಮಾಜ್ ನಿರ್ವಹಣೆಯನ್ನು ಸ್ಥಗಿತಗೊಳಿಸಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರಕಾರದ ಕಾರ್ಯದರ್ಶಿ ಎ.ಬಿ.ಇಬ್ರಾಹಿಂ ಆದೇಶಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.