ನಾವೂರಿನ ಅಕ್ರಮ ಗಣಿಗಾರಿಕೆ; ಬಂಧಿತ ಇಬ್ಬರು ಆರೋಪಿಗಳು ಮಂಗಳೂರು ಜೈಲಿಗೆ

ಬೆಳ್ತಂಗಡಿ: ತಾಲೂಕಿನ ನಾವೂರು ಗ್ರಾಮದ ಓಡಿಕಾರು ಎಂಬಲ್ಲಿ ಹಲವಾರು ಸಮಯಗಳಿಂದ ಅಕ್ರಮವಾಗಿ ಕಪ್ಪುಕಲ್ಲು ಗಣಿಗಾರಿಕೆಗೆ ನೇತೃತ್ವ ನೀಡುತ್ತಿದ್ದ ಆರೋಪದಲ್ಲಿ ಸ್ವತಃ ತಾಲೂಕಿನ ತಹಶಿಲ್ದಾರ್ ಅವರ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸರು ಮಾ. 19 ರಂದು ದಾಳಿ ನಡೆಸಿ ಬಂಧಿಸಿದ್ದ ಲಾಯಿಲ ನಿವಾಸಿ, ಮಾಜಿ ಪತ್ರಕರ್ತ ಪ್ರತೀಕ್ ಕೋಟ್ಯಾನ್, ಅಳದಂಗಡಿ ಸನಿಹದ ಅಣ್ಣಪ್ಪ ಎಂಬಿಬ್ಬರು ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಇವರಿಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ.

ಇಬ್ಬರಿಗೂ ಮುಂದಿನ 15 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಆ ಹಿನ್ನೆಲೆಯಲ್ಲಿ ಇಬ್ಬರೂ ಆರೋಪಿಗಳನ್ನು ಇಂದು ಬೆಳ್ತಂಗಡಿ ಪೊಲೀಸರು ಮಂಗಳೂರು ಜಿಲ್ಲಾ ಉಪಕಾರಾಗೃಹಕ್ಕೆ ತಳ್ಳಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರಿಗೆ ಬೆಳ್ತಂಗಡಿಯ ನ್ಯಾಯವಾದಿ ಸೇವಿಯರ್ ಪಾಲೇಲಿ ಅವರ ಜಾಗದಲ್ಲಿ ಕೋರೆ ಇರುವುದನ್ನು ಪತ್ತೆಹಚ್ಚಿ ಅಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಪ್ರಕರಣವನ್ನು ಬಯಲಿಗೆಳೆದಿದ್ದಾರೆ.

ಕಲ್ಲಿನ ಕೋರೆ ಸ್ಥಳದಲ್ಲಿ ಭಾರೀ ಪ್ರಮಾಣದ ಜಿಲೆಟಿನ್ ಕಡ್ಡಿಗಳು, ವಯರ್‌ಗಳು, 11 ಜೀವಂತ ಮದ್ದುಗಳು, 15 ಚೀಲದಲ್ಲಿ ಜಿಲೆಟಿನ್ ಕಡ್ಡಿಗಳು, ಟ್ರಾಕ್ಟರ್, ಎರಡು ಹಿಟಾಚಿಗಳು ಸಹಿತ ಎಲ್ಲ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳೂರು ಬಾಂಬ್ ನಿಷ್ಕ್ರೀಯ ದಳದವರು ಸ್ಪೋಟಕಗಳನ್ನು ಸ್ಥಳದಲ್ಲೆ ವಿಲೇವಾರಿ ಮಾಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.