ಸದನದಲ್ಲಿ ಶಾಸಕರು; ಸೌತಡ್ಕ ದೇವಸ್ಥಾನದ ಹರಕೆ ಘಂಟೆ ಮಾರಾಟದಲ್ಲಿ 1 ಕೋಟಿ ರೂ. ಅವ್ಯವಹಾರ ಆರೋಪ

ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಹರಕೆ ಘಂಟೆಗಳ ಮಾರಾಟದಲ್ಲಿ 1 ಕೋಟಿ ರೂ.ಗಳಿಗೂ ಅಧಿಕ ಅವ್ಯವಹಾರ ನಡೆದಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರಾಜ್ಯ ವಿಧಾನ ಮಂಡಲದ ಅಧಿವೇಶನದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಅಧಿವೇಶನದಲ್ಲಿ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಉತ್ತರದ ಮೇಲೆ ಮಾತನಾಡಿದ ಶಾಸಕರು, ಸಚಿವರು ನೀಡಿದ ಉತ್ತರದಲ್ಲಿ ಮತ್ತು ನನಗೆ ಸಿಕ್ಕಿದ ಪಟ್ಟಿಯಲ್ಲಿ ದಿನಾಂಕದಲ್ಲಿ ಇರುವ ವ್ಯತ್ಯಾಸ ಬಗ್ಗೆ ಅಂಕಿಅಂಶ ಸಮೇತ ಮಾತನಾಡಿದರು.

ಸಚಿವರು ಓದಿರುವ ಉತ್ತರದಲ್ಲಿ 21.01.2014, 20.11.2015, ಮತ್ತು 7.01.2019 ಹರಾಜು ಪ್ರಕ್ರೀಯೆ ಎಂದಿದೆ.  ನನಗೆ ಕೊಟ್ಟದ್ದರಲ್ಲಿ 03.01.2020, 28.01.2020, 04.02.2020 ಮತ್ತು 14.02.2020 ರಂದು ಇ-ಟೆಂಡರ್ ಮೂಲಕ ಹರಾಜು ಮಾಡಿದ್ದೇವೆ ಎಂದಿದೆ. ಒಂದು ಕಡೆ 5 ಲಕ್ಷಕ್ಕಿಂತ ಕಡಿಮೆ ಇದ್ದರೆ ಇ- ಟೆಂಡರ್ ಮಾಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದರೆ, 03.01.2020 ರಂದು 10 ಲಕ್ಷ ರೂ. ಮುಂಗಡವಾಗಿ ಪಾವತಿಸಿದ್ದಾರೆ ಎಂದು ಕೊಟ್ಟಿದ್ದಾರೆ ಎಂದು ಸಭಾಧ್ಯಕ್ಷರ ಗಮನಸೆಳೆಯಲು ಪ್ರಯತ್ನಿಸಿದರು.
ಚರ್ಚೆಗೂ ಮುನ್ನ ಸಭಾಧ್ಯಕ್ಷ ವಿಶ್ವೇಶ್ವರ ಹೆಗ್ಡೆ ಕಾಗೇರಿ ಅವರು, ಈ ಬಗ್ಗೆ ನಿಮಗೆ ಉತ್ತರ ನೀಡಿದ ಮುಜರಾಯಿ ಸಚಿವರು ವಿಧಾನ ಪರಿಷತ್ತಿನಲ್ಲಿ ವಿಚಾರ ಇರುವುದರಿಂದ ಅಲ್ಲಿಗೆ ಹೋಗಿದ್ದಾರೆ. ನಿಮಗೆ ಈಗಾಗಲೇ ಉತ್ತರ ಸಿಕ್ಕಿದೆಯಲ್ವೇ ಎಂದು ಹೇಳಿದಾಗ, ಈ ವಿಚಾರ ತುರ್ತುಇದೆ ಎಂದರು. ಈ ವೇಳೆ ಮಾತನಾಡಿದ ಸ್ಪೀಕರ್, ಈ ಬಗ್ಗೆ ಕಂದಾಯ ಸಚಿವರು ಉತ್ತರ ನೀಡುತ್ತಾರೆ ಎಂದರು.

ಶಾಸಕರು ವಿಸ್ತೃತವಾಗಿ ದಿನಾಂಕಗಳನ್ನು ಹೇಳಿ ವಿಚಾರ ಪ್ರಸ್ತಾಪಿಸಿದಾಗ, ಶಾಸಕರೇ..ಹೆಚ್ಚು ಚರ್ಚೆಗೆ ಅವಕಾಶವಿಲ್ಲ ಎಂದು ಸ್ಪೀಕರ್ ತಡೆದರು. ಈ ವೇಳೆ ಮಾತನಾಡಿದ ಶಾಸಕರು, ಸದ್ರಿ ಪ್ರಕರಣದಲ್ಲಿ ದೇವಳದ ಆಡಳಿತಾಧಿಕಾರಿ ಮತ್ತು ಆಡಳಿತ ಮಂಡಳಿಯವರು ಸೇರಿಕೊಂಡು ಅವ್ಯವಹಾರ ಈ ಭಾರೀ ಮೊತ್ತದ ಅವ್ಯವಹಾರ ನಡೆದಿದೆ.
ಆದ್ದರಿಂದ ತಕ್ಷಣ ಆಡಳಿತಾಧಿಕಾರಿಯನ್ನು ಅಮಾನತು ಮಾಡಬೇಕು. ಆಡಳಿತ ಮಂಡಳಿಯ ವಿರುದ್ಧವೂ ಕ್ರಮಕ್ಕಾಗಿ ಇಡೀ ಪ್ರಕರಣವನ್ನು ಕಮಿಷನರೇಟ್ ಮೂಲಕ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಘಟನೆ ಬಗ್ಗೆ ಮುಜರಾಯಿ ಸಚಿವರ ಪರವಾಗಿ ಕಂದಾಯ ಸಚಿವ ಆರ್. ಅಶೋಕ್ ಉತ್ತರಿಸಿ, ಕೊಕ್ಕಡದಲ್ಲಿ ಕಳೆದ ೫ ವರ್ಷಗಳಲ್ಲಿ ಹರಕೆ ರೂಪದಲ್ಲಿ ಬಂದ ಘಂಟೆಗಳನ್ನು ಈ ಟೆಂಡರ್ ಮೂಲಕ ಮಾರಾಟ ಮಾಡಲು ಸರಕಾರ ಅನುಮತಿ ಕೊಟ್ಟಿದೆ. ಅದಕ್ಕೆ ಮುಕ್ತ ಅವಕಾಶವನ್ನೂ ಕೊಟ್ಟಿದೆ. 2014-15 ಮತ್ತು 2019 ರಲ್ಲಿ ಒಟ್ಟು 1 ಕೋಟಿ 3 ಲಕ್ಷದ 8070 ರೂ. ಬಂದಿದೆ. ಈ ಹಣವನ್ನು ದೇವಸ್ಥಾನದ ಖಾತೆಗೇ ಜಮೆ ಮಾಡಿದೆ. ಇದನ್ನು ದೇವಸ್ಥಾನದ ಕೆಲಸಕಾರ್ಯಗಳಿಗೆ, ಅಭಿವೃದ್ದಿ ಕಾಮಗಾರಿಗಳಿಗೆ, ಅನ್ನದಾನಕ್ಕೆ, ಗೋಶಾಲೆ ನಿರ್ವಹಣೆ ಮಾಡೂದಕ್ಕೆ ಉಪಯೋಗ ಮಾಡಿದೆ. ಆದರೆ ಶಾಸಕರು ಇಲ್ಲಿ 1 ಕೋಟಿ ರೂ. ಗಳಿಗಿಂತಲೂ ಅಧಿಕ ಮೊತ್ತದ ಅವ್ಯವಹಾರ ಆಗಿದೆ ಎಂದು ವಿವರವಾಗಿ ಹೇಳಿದ್ದಾರೆ. ಯಾರೇ ತಪ್ಪು ಮಾಡಿದರೂ ಅದು ತಪ್ಪೇ, ಆದ್ದರಿಂದ ಆಡಳಿತ ಮಂಡಳಿಗೆ ಸೂಕ್ತ ನೋಟೀಸು ಕೊಟ್ಟು ವರದಿ ಪಡೆದು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.