ಎಸ್.ಡಿ.ಎಂ. ಪಿ.ಜಿ. ಸೆಂಟರ್‌ನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ‘ಪರಿಣಿತ ಜಾಗತಿಕ ಮಾದರಿಯೊಂದಿಗೆ ಶೈಕ್ಷಣಿಕ ಪರಿವರ್ತನೆ ಅಗತ್ಯ

ಉಜಿರೆ: ಭಾರತೀಯ ಶಿಕ್ಷಣವು ವಿದ್ಯಾರ್ಥಿಗಳನ್ನು ವಿವಿಧ ಕ್ಷೇತ್ರಗಳ ಸರ್ವತೋಮುಖ ಬೆಳವಣಿಗೆಗೆ ಬೇಕಾಗುವ ಪರಿಣಿತರನ್ನಾಗಿ ಪರಿವರ್ತಿಸುವಂಥ ಶ್ರೇಷ್ಠ ಜಾಗತಿಕ ಮಾದರಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ನಿಟ್ಟೆ ಡೀಮ್ಡ್ ಯುನಿವರ್ಸಿಟಿಯ ಪ್ರೊ ವೈಸ್ ಚಾನ್ಸಲರ್ ಡಾ.ಎಂ.ಮೂಡಿತ್ತಾಯ ಅವರು ಅಭಿಪ್ರಾಯಪಟ್ಟರು.
ಅವರು ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ವಾಣಿಜ್ಯ ಶಾಸ್ತ್ರ ವಿಭಾಗವು ಫೆ.೧೮ ರಂದು ‘ವಾಣಿಜ್ಯ ಮತ್ತು ನಿರ್ವಹಣಾ ಕ್ಷೇತ್ರದ ಪ್ರಚಲಿತ ಸ್ಥಿತಿಗತಿ’ ಕುರಿತು ಆಯೋಜಿಸಿದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಪ್ರಧಾನ ಆಶಯಗಳನ್ನು ಪ್ರಸ್ತುತಪಡಿಸಿ ಮಾತನಾಡಿದರು.

ಮೆಕಾಲೆ ಶಿಕ್ಷಣ ಪದ್ದತಿಯ ಸಾಂಪ್ರದಾಯಿಕ ಚೌಕಟ್ಟುಗಳಿಂದ ಹೊರಬಂದು ಇಡೀ ಶೈಕ್ಷಣಿಕ ವ್ಯವಸ್ಥೆಯನ್ನು ಸಮಗ್ರವಾಗಿ ಬದಲಾಯಿಸಬೇಕಾಗಿದೆ. ತರಗತಿಗಳ ಪಠ್ಯಗಳನ್ನು ಹೊರಗಿನ ಪ್ರಪಂಚದ ಆಗು-ಹೋಗುಗಳೊಂದಿಗೆ ವಿಶ್ಲೇಷಿಸಿ ವಿದ್ಯಾರ್ಥಿಗಳನ್ನು ಪರಿಣತರನ್ನಾಗಿ ಪರಿವರ್ತಿಸಬೇಕು. ವಿದ್ಯಾರ್ಥಿಗಳನ್ನು ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಕಲಾತ್ಮಕ ಮತ್ತು ಸಾಮಾಜಿಕ ವಲಯಗಳಲ್ಲಿ ಭಿನ್ನ ಸಾಧನೆಗೈಯ್ಯುವ ಸಂಪನ್ಮೂಲ ವ್ಯಕ್ತಿಗಳನ್ನಾಗಿ ರೂಪಿಸುವುದಕ್ಕೆ ಜಗತ್ತಿನ ವಿವಿಧೆಡೆ ಲಭ್ಯವಿರುವ ಶ್ರೇಷ್ಠ ಶೈಕ್ಷಣಿಕ ಮಾದರಿಗಳನ್ನು ಅನುಸರಿಸಬೇಕು ಎಂದು ಹೇಳಿದರು.

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್.ಡಿ.ಎಂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಸ್.ಸತೀಶ್ಚಂದ್ರ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ಗಣಪಯ್ಯ ಬಿ, ಸಹಾಯಕ ಪ್ರಾಧ್ಯಾಪಕ ಚಿದಾನಂದ ಎಚ್.ಆರ್. ಉಪಸ್ಥಿತರಿದ್ದರು.
ವಾಣಿಜ್ಯಶಾಸ್ತ್ರ ವಿಭಾಗದ ಸಂಯೋಜಕ ಮುಖ್ಯಸ್ಥರಾದ ಡಾ.ಪಿ.ಎನ್.ಉದಯಚಂದ್ರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸಮನ್ವಿತ, ಶರಣ್ಯ ಕಾರ್ಯಕ್ರಮ ನಿರೂಪಿಸಿದರು. ಡಾ.ಪ್ರಿಯಕುಮಾರಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.