ಬಿಲ್ಲವ ಸಮಾಜದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟನೆ

ಬೆಳ್ತಂಗಡಿ : ‘ವಿದ್ಯಾರ್ಥಿ ಬದುಕು ಅವಕಾಶಗಳ ಹೆಬ್ಬಾಗಿಲು ಇದ್ದಂತೆ. ಸಾಧನೆಗೆ ಬೇಕಾದ ಪೂರಕ ವಾತಾವರಣ ನಿರ್ಮಾಣವಾಗುವ ಈ ಕಾಲಘಟ್ಟದಲ್ಲಿ ಅವಿರತವಾದ ಶ್ರಮ ಮತ್ತು ಶ್ರದ್ಧೆಯನ್ನು ಬೆಳೆಸಿಕೊಂಡು ವಿದ್ಯಾರ್ಥಿಗಳು ಸಾಧಕರಾಗಿ ಮೆರೆಯಬೇಕು’ ಎಂದು ಬೆಳ್ತಂಗಡಿ ಶ್ರೀ ಗುರುದೇವ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ, ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.

ಅವರು ಭಾನುವಾರ ಬೆಳ್ತಂಗಡಿ ಶ್ರೀ ಗುರುದೇವ ಪದವಿಪೂರ್ವ ಕಾಲೇಜಿನಲ್ಲಿ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಇದರ ಆಶ್ರಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇವರ ಸಹಕಾರದೊಂದಿಗೆ ಬೆಳ್ತಂಗಡಿ ತಾಲೂಕಿನ ಬಿಲ್ಲವ ಸಮಾಜದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ನಡೆದ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
‘5ನೇ ವರ್ಷದಲ್ಲಿ ಈ ಕಾರ್ಯಾಗಾರ ನಡೆಯುತ್ತಿದ್ದು ಈ ವರ್ಷವೂ 8 ಭಾನುವಾರ ಈ ತರಗತಿಗಳು ನಡೆಯಲಿವೆ. ಈ ತರಗತಿಗಳಿಗೆ ಹಾಜರಾಗಿ, ಆಸಕ್ತಿಯಿಂದ ಅಧ್ಯಯನದಲ್ಲಿ ತೊಡಗುವ ವಿದ್ಯಾರ್ಥಿಗಳು ಉನ್ನತಶ್ರೇಣಿಯಲ್ಲಿ ಉತ್ತೀರ್ಣರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಅತಿಥಿ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ ಮಾತನಾಡಿ, ‘ವಿದ್ಯಾರ್ಥಿಗಳು ಸಮಯದ ಮಹತ್ವವನ್ನು ಅರಿತುಕೊಂಡು ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಪೋಷಕರು ವಿದ್ಯಾರ್ಥಿಗಳ ಬಗೆಗೆ ಸದಾ ಜಾಗೃತರಾಗಿ ಅವರನ್ನು ಗಮನಿಸುತ್ತಿರಬೇಕು’ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ ಮಾತನಾಡಿ, ‘ಬಿಲ್ಲವ ಸಮಾಜ ಶೈಕ್ಷಣಿಕವಾಗಿ ಬಲಯುತವಾಗಬೇಕು ಎಂಬ ದೃಷ್ಠಿಯಿಂದ ಸಂಘದಿಂದ ಮಾಡುತ್ತಿರುವ ಈ ಕಾರ್ಯಾಗಾರದ ಪ್ರಯೋಜನವನ್ನು ಪ್ರತಿಯೊಬ್ಬ ವಿದ್ಯಾರ್ಥಿ ಪಡೆದುಕೊಳ್ಳಬೇಕು. ಆ ಮೂಲಕ ಸಮಾಜದ ಸತ್ಪ್ರಜೆಯಾಗಿ ರೂಪುಗೊಳ್ಳಬೇಕು’ ಎಂದರು.
ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಸುಕೇಶ್ ಕುಮಾರ್ ಕೆ ಹಾಗೂ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರವೀಣ್ ಬಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕ ಸುಭಾಶ್ ಜಾದವ್ ವೇದಿಕೆಯಲ್ಲಿದ್ದರು.

ಕೆಎಎಸ್ ಪರೀಕ್ಷೆ ಉತ್ತೀರ್ಣರಾಗಿ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರಾಗಿ ಆಯ್ಕೆಯಾದ ರಾಜು ನಾಯ್ಕ ಹಾಗೂ 2019ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಾದ ಜ್ಯೋತಿಕಾ ಹಾಗೂ ಪ್ರಜ್ಞಾ ಕೆ ಇವರನ್ನು ಸನ್ಮಾನಿಸಲಾಯಿತು. 10 ನೇ ವರ್ಷದ ಕೋಟಿ-ಚೆನ್ನಯ ಕ್ರೀಡಾಕೂಟದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಅಧ್ಯಾಪಕರುಗಳಾದ ಜಗನ್ನಾಥ್, ಗೋಪಾಲ್, ಜಯಂತಿ, ಯೋಗೀಶ್ ಕುಮಾರ್, ರಾಮಚಂದ್ರ ದೊಡ್ಡಮಣಿ ಭಾಗವಹಿಸಿದ್ದರು.

ಸಂಘದ ಪೂರ್ವಾಧ್ಯಕ್ಷ ಭಗೀರಥ ಜಿ, ಉಪಾಧ್ಯಕ್ಷ ಮನೋಹರ್ ಕುಮಾರ್, ಪ್ರಧಾನ ಕಾರ್ಯದರ್ಶಿ ನಾರಾಯಣ ಸುವರ್ಣ, ಕೋಶಾಧಿಕಾರಿ ಚಿದಾನಂದ ಪೂಜಾರಿ, ನಿರ್ದೇಶಕರುಗಳಾದ ಶೇಖರ್ ಕೆ ನವ್ಯ, ಯುವರಾಜ ಪೂಜಾರಿ ಎಲ್ಯೊಟ್ಟು, ಜಗದೀಶ್ ಡಿ, ಜಯಕುಮಾರ್ ನಡ, ವಿಶ್ವನಾಥ ಪೂಜಾರಿ ಕುತ್ಲೂರು, ಮಹಿಳಾ ಬಿಲ್ಲವ ವೇದಿಕೆಯ ಸದಸ್ಯರಾದ ಸುಧಾಮಣಿ ರಮಾನಂದ, ಜಯಶ್ರೀ ಉಮೇಶ್, ಶುಭ ದಯಾನಂದ, ಸುಜಾತ ಚಂದ್ರಹಾಸ, ಜಯಶ್ರೀ ಉಮೇಶ್, ಕ್ರೀಡಾ ತೀರ್ಪುಗಾರರ ಸಮಿತಿಯ ಸಂಚಾಲಕ ಯಶೋಧರ ಸುವರ್ಣ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ರಂಜಿತ್ ಹೆಚ್.ಡಿ, ಕಾರ್ಯದರ್ಶಿ ರೂಪೇಶ್ ಪೂಜಾರಿ ಧರ್ಮಸ್ಥಳ, ನಿವೃತ್ತ ಶಿಕ್ಷಕ ಲಕ್ಷ್ಮಣ ಪೂಜಾರಿ, ಮಾಜಿ ಸೈನಿಕ ದಯಾನಂದ ಬೆಳ್ತಂಗಡಿ ಇದ್ದರು.

ಸಂಘದ ನಿರ್ದೇಶಕಿ ಯಶೋಧ ಕುತ್ಲೂರು ಪ್ರಾರ್ಥಿಸಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಕೇದೆ ಸ್ವಾಗತಿಸಿದರು. ನಿರ್ದೇಶಕ ಉಮೇಶ್ ಬೆಳ್ತಂಗಡಿ ವಂದಿಸಿದರು. ಜಗದೀಶ್ ಬಳಂಜ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.