ವಸುಧೈವ ಕುಟುಂಬಕಂ ಎಂಬ ಪದಕ್ಕೆ ಇನ್ನೊಂದು ಹೆಸರು ಪೇಜಾವರ ಶ್ರೀ :ಶಾಸಕ ಹರೀಶ್ ಪೂಂಜ ಸ್ಮರಣೆ

ಬೆಳ್ತಂಗಡಿ: ಶ್ರೀಕೃಷ್ಣನಲ್ಲಿ ಐಕ್ಯವಾದ ಪೇಜಾವರ ಮಠದ ವಿಶ್ವಸಂತ ಶ್ರೀ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಧಾರ್ಮಿಕ, ಸಾಮಾಜಿಕ ರಂಗದ ಮೇರು ಪರ್ವತರಾಗಿದ್ದರು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸ್ಮರಿಸಿದ್ದಾರೆ.

ಪೂಜ್ಯ ಶ್ರೀಗಳು ಎಂಟು ದಶಕಗಳ ಸನ್ಯಾಸ ಜೀವನದಲ್ಲಿ ನೀಡಿದ ಮಾರ್ಗದರ್ಶನ, ಕೊಡುಗೆಗಳು ಹಿಂದೂಸ್ಥಾನದ ಜನಮಾನಸದಲ್ಲಿ ಅಜರಾಮರವಾಗಿ ಉಳಿಯಲಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಶೋಕ್ ಸಿಂಗಲ್ ರವರೊಂದಿಗೆ ಆಯೋಜಿಸಿದ ಕಾರ್ಯಕ್ರಮದ ರೂಪುರೇಷೆಗಳು, ರಾಜಕೀಯ ನಿರ್ಣಯಗಳು ಪ್ರಕಟವಾದ ತಕ್ಷಣ ಯಾವುದೇ ಮುಲಾಜಿಲ್ಲದೆ ನೇರ ನುಡಿಯಿಂದ ರಾಷ್ಟ್ರೀಯವಾದದ ಪರ ಸ್ವಾಮೀಜಿಯವರು ನೀಡುತ್ತಿದ್ದ ಪ್ರತಿಕ್ರಿಯೆಗಳು, ಅಸ್ಪೃಶ್ಯತೆ ನಿವಾರಣೆಗಾಗಿ ಹಿಂದೂ ಸಮಾಜದಲ್ಲಿ ನಡೆಸಿದ ಜಾಗೃತಿ, ಮಡೆಸ್ನಾನವೆಂಬ ಮೂಢನಂಬಿಕೆಯನ್ನು ಧಾರ್ಮಿಕ ಜಾಗೃತಿ ಮೂಲಕ ತೊಲಗಿಸಿದ್ದು, ರಾಷ್ಟ್ರ ಧ್ವಜದ ವಿಚಾರ ಚರ್ಚೆಗೆ ಬಂದಾಗ ಬುದ್ಧಿಜೀವಿಯೊಬ್ಬರ ಸವಾಲು ಸ್ವೀಕರಿಸಿ ಮಠದ ಆವರಣದಲ್ಲಿ ರಾಷ್ಟ್ರ ಧ್ವಜ  ಹಾರಿಸಲು ಮೌಲವಿಯವರನ್ನು ಆಹ್ವಾನ ನೀಡಿ ರಾಷ್ಟ್ರ ಪ್ರೇಮ ಮೆರೆದಿದ್ದು, ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ ಆಯೋಜಿಸಿ ಭಾವೈಕ್ಯತೆಯ ಸಂದೇಶ ರವಾನಿಸಿದ್ದು ಸ್ವಾಮೀಜಿಯವರ ಸುದೀರ್ಘ ಜೀವನದ ಮಹತ್ವದ ಮೈಲುಗಲ್ಲುಗಳಾಗಿವೆ.


ವಿಶ್ವ ಹಿಂದೂ ಪರಿಷತ್ ಮತ್ತು ಪರಿವಾರ ಸಂಘಟನೆಗಳ ಎಲ್ಲಾ ಕಾರ್ಯಕ್ರಮಗಳಲ್ಲಿ ಮಾರ್ಗದರ್ಶಕರಾಗಿ, ವಿಶ್ವ ಬಂಧುವಾಗಿ, ನಾಡಿನ ಆದರ್ಶ ಹಿರಿಯ ಯತೀವರ್ಯರಾಗಿ ಕಾರ್ಯ ನಿರ್ವಹಿಸಿದ್ದ ಶ್ರೀಗಳ ಅನುಪಸ್ಥಿತಿಯ ಶೂನ್ಯ ಮುಂದಿನ ದಿನಗಳಲ್ಲಿ ನಮ್ಮನ್ನು ಕಾಡಲಿದೆ. ಅವರು ಬದುಕಿ ಬಾಳಿದ ದಾರಿ ಹಿಂದೂ ಧರ್ಮಕ್ಕೆ, ಭಾರತ ದೇಶಕ್ಕೆ ಮುಂದಿನ ದಿನಗಳಲ್ಲಿ ಆದರ್ಶಪ್ರಾಯವಾಗಲಿದೆ ಎಂದು ಶಾಸಕ ಹರೀಶ್ ಪೂಂಜ ಪೇಜಾವರ ಶ್ರೀಗಳ ಕೊಡುಗೆಯನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.