ಉಜಿರೆ: ಮಹಿಳೆಯರು ಇಂದು ವಿದ್ಯೆ ದೊರೆತಿದ್ದರೂ ಗುರಿಮುಟ್ಟಲು ಸಾಧ್ಯವಾಗಿಲ್ಲ. ನಮಗೆ ಆವರಿಸಿ ಮೂಢನಂಬಿಕೆಯಿಂದ ಹೊರಬರಲೇಬೇಕು. ಸಂಘಟನೆಗಳು ಇಂದು ನಮಗೆ ಆರ್ಥಿಕ ಶಕ್ತಿ, ಸಂಘಟನೆಯ ಉದ್ದೇಶ, ಕಾನೂನಿನ ಅರಿವು ನೀಡಬಹುದು. ಆದರೆ ನಿರ್ಧಾರ ತೆಗೆದುಕೊಳ್ಳಬೇಕಾದವರು ನೀವೇ ಎಂದು, ಕನ್ನಡ ಕವಯತ್ರಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಡಾ. ವೈದೇಹಿ ಅಭಿಪ್ರಾಯಪಟ್ಟರು.ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಮೈದಾನದಲ್ಲಿ ವಿಮುಕ್ತಿ ಸ್ವ ಸಹಾಯ ಸಂಘಗಳ ಟ್ರಸ್ಟ್, ಪ್ರವರ್ತಕ ಕಪುಚಿನ್ ಕೃಷಿಕ್ ಸೇವಾ ಕೇಂದ್ರ, ದಯಾಳ್ ಬಾಗ್, ವಿಮುಕ್ತಿ ಕೊಯ್ಯೂರು ಲಾಯಿಲ ಇದರ 20ನೇ ವರ್ಷದ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಹೋಲಿ ಟ್ರಿನಿಟಿ ಕಪುಚಿನ್ ಪ್ರಾಂತ್ಯಾಧಿಕಾರಿ ವ.ಫಾ.ಆಲ್ವಿನ್ ಡಾಯಸ್ ಮಾತನಾಡಿದರು.
ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್, ಮಾಜಿ ಶಾಸಕ ಕೆ ವಸಂತ ಬಂಗೇರ, ವಿಮುಕ್ತಿ ಸ್ವ-ಸಹಾಯ ಸಂಘ ಅಧ್ಯಕ್ಷೆ ಇಂದಿರಾ, ಬಣಕಲ್ ವಿಮುಕ್ತಿ ಒಕ್ಕೂಟ ಅಧ್ಯಕ್ಷೆ ಯಶೋಧಾ, ವಿಮುಕ್ತಿ ಮೈತ್ರಿ ಕೋ ಆಪರೇಟಿವ್ ಸೊಸೈಟಿ ಚಿಕ್ಕೋಡಿಯ ಹೇಮ ದೊಡಮನಿ ಉಪಸ್ಥಿತರಿದ್ದರು. ವಿಮುಕ್ತಿ ಮಹಿಳಾ ಒಕ್ಕೂಟ ಕಾರ್ಯದರ್ಶಿ ವಿನೋದಾ ವರದಿ ವಾಚಿಸಿದರು. ಕಾರ್ಯಕ್ರಮವನ್ನು ವಿಮುಕ್ತಿ ಸ್ವ ಸಹಾಯ ಸಂಘ ನಿರ್ದೇಶಕ ವಂ.ಫಾ.ವಿನೋದ್ ಮಸ್ಕರೇನಸ್ ಸ್ವಾಗತಿಸಿದರು. ಝಬೈದಾ ವಂದಿಸಿದರು. ಶಾರದಾ ಹಾಗೂ ಪ್ರೇಮಾ ಕಾರ್ಯಕ್ರಮ ನಿರೂಪಿಸಿದರು. ಒಟ್ಟು 170 ಗುಂಪುಗಳ 1000 ಕ್ಕೂ ಹೆಚ್ಚು ಮಂದಿ ಮಹಿಳೆಯರು ಭಾಗವಹಿಸಿದರು. ಇದಕ್ಕೂ ಮುನ್ನ ಉಜಿರೆ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣ ದಿಂದ ಸಭಾಂಗಣ ವರೆಗೆ ಮಹಿಳೆಯರ ಮೆರವಣಿಗೆ ನಡೆಯಿತು.