ಸ್ವಸ್ತಿಕ್ ಫ್ರೆಂಡ್ಸ್‌ಕ್ಲಬ್‌ನಿಂದ ಗೌರವ ಚಾರ್ಮಾಡಿ ಹಸನಬ್ಬರಿಗೆ ಡಾ. ಎಪಿಜೆ ಅಬ್ದುಲ್ ಕಲಾಂ ಪ್ರಶಸ್ತಿ

Advt_NewsUnder_1
Advt_NewsUnder_1
Advt_NewsUnder_1

 

ಪುಂಜಾಲಕಟ್ಟೆ: ಇಲ್ಲಿನ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ ನ. 17 ರಂದು ಬಂಗ್ಲೆ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಕೊಡಮಾಡಿದ ದೇಶದ ಮಾಜಿ ಆದರ್ಶ ರಾಷ್ಟ್ರಪತಿ ಡಾ| ಎಪಿಜೆ ಅಬ್ದುಲ್ ಕಲಾಂ ಅವರ ಹೆಸರಿನ ಪ್ರಶಸ್ತಿಯನ್ನು ಹಿರಿಯ ಸಾಮಾಜಿಕ ಕಾರ್ಯಕರ್ತ, ಆಪತ್ಬಾಂಧವ ಚಾರ್ಮಾಡಿ ಹಸನಬ್ಬ ಮುಡಿಗೇರಿಸಿಕೊಂಡಿದ್ದಾರೆ.


ರಾಜ್ಯದಲ್ಲೇ ಮೊದಲ ಬಾರಿಗೆ ಡಾ| ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ಈ ಪ್ರಶಸ್ತಿ ನೀಡಲಾಗಿದೆ. ಚಾರ್ಮಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿರುವ ಹಸನಬ್ಬ ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಚಾರ್ಮಾಡಿ ಕಣಿವೆ ರಸ್ತೆಯಲ್ಲಿ ಎಷ್ಟೇ ರಾತ್ರಿವೇಳೆಯಲ್ಲಾದರೂ ಸರಿ ಅಪಘಾತಗಳು, ರಸ್ತೆ ತಡೆಗಳು ಉಂಟಾದಾಗ ತನ್ನ ತಂಡದೊಂದಿಗೆ ತಕ್ಷಣ ಧಾವಿಸುವ ಅವರು ಜಾತಿ ಮತ ಧರ್ಮದ ಭೇದವಿಲ್ಲದೆ ಅದೆಷ್ಟೋ ಮಂದಿಯ ಪ್ರಾಣ ರಕ್ಷಣೆಯ ಕೆಲಸ ಮಾಡಿದ್ದಾರೆ. ಗಾಯಾಳುಗಳಿಗೆ ತುರ್ತು ಚಿಕಿತ್ಸೆ ಒದಗಿಸಿ ಅವರನ್ನು ಆಸ್ಪತ್ರೆಗೆ ಸೇರಿಸುವ ಕಾರ್ಯವನ್ನೂ ಮಾಡಿ ಆಪದ್ಬಾಂಧವರಾಗಿ ಗುರುತಿಸಿಕೊಂಡಿದ್ದಾರೆ.
ಚಂದ್ರಹಾಸ ಬಳಂಜ, ಪ್ರಭಾಕರ ಗೌಡ ಪೊಸೊಂದೋಡಿಯವರಿಗೆ “ಸ್ವಸ್ತಿಸಿರಿ ಸಂಭ್ರಮ” ರಾಜ್ಯಮಟ್ಟದ ಪುರಸ್ಕಾರ
ಇದರ ಜೊತೆಗೆ ಕಲಾಕ್ಷೇತ್ರದಲ್ಲಿ ಸಾಧನೆ ಮಾಡಿರುವ ಬಳಂಜದ ಯುವ ಕಲಾವಿದ ಚಂದ್ರಹಾಸ ಬಳಂಜ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮೆರೆದಿರುವ ಪ್ರಭಾಕರ ಗೌಡ ಪೊಸೊಂದೋಡಿ ಇವರಿಬ್ಬರಿಗೆ “ಸ್ವಸ್ತಿಸಿರಿ ಸಂಭ್ರಮ” ರಾಜ್ಯಮಟ್ಟದ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಬಳಂಜದ ನಾಲ್ಕೂರು ಪುಣ್ಕೆದೊಟ್ಟು ಮನೆಯ ಸುಶೀಲಾ ಮತ್ತು ಶ್ರೀಧರ ಪೂಜಾರಿ ದಂಪತಿ ಪುತ್ರರಾಗಿರುವ ಚಂದ್ರಹಾಸ ಬಳಂಜ ಅವರು, ಸ್ನಾತಕೋತ್ತರ ಪದವೀಧರರಾಗಿದ್ದು ಬರವಣಿಗೆ, ಕಲೆ, ನೃತ್ಯ, ಸಂಗೀತ ಮೊದಲಾದ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಕಲರ್ ಕನ್ನಡ ಚಾನೆಲ್‌ನಲ್ಲಿ ವೃತ್ತಿಯಲ್ಲಿದ್ದಾರೆ. ಶ್ರೀಗುರು ಮಿತ್ರ ಸಮೂಹದ ಸಕ್ರಿಯ ಕಲಾವಿದರಾಗಿದ್ದ ಅವರು ರಾಜ್ಯಮಟ್ಟದ ಯುವಜನಮೇಳಗಳಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಯುವ ಸಾಹಿತಿಯಾಗಿರುವ ಅವರ ೩ ಕೃತಿಗಳು ಈಗಾಗಲೇ ಲೋಕಾರ್ಪಣೆಗೊಂಡಿದ್ದು, ಜಿಲ್ಲಾ ಮಟ್ಟದ ಯುವ ಪ್ರಶಸ್ತಿ, ಯುವವಾಹಿನಿಯಿಂದ ಯುವ ಸಾಹಿತ್ಯ ಪ್ರಶಸ್ತಿ, ಜೇಸಿಐ ಸಾಧನಾಶ್ರೀ ಪ್ರಶಸ್ತಿ, ಬ್ರಹ್ಮಶ್ರೀ ನಾರಾಯಣ ಗುರು ಪುರಸ್ಕಾರ, ಯುವ ಸಾಂಸ್ಕೃತಿಕ ಸಾಧಕ ಪ್ರಶಸ್ತಿ ಸೇರಿದಂತೆ ಹಲವು ಸನ್ಮಾನ -ಪುರಸ್ಕಾರಗಳು ಲಭಿಸಿವೆ. ಉತ್ತಮ ಕಾರ್ಯಕ್ರಮ ಉದ್ಘೋಷಕರಾಗಿಯೂ ಅವರು ಗುರುತಿಸಲ್ಪಟ್ಟಿದ್ದಾರೆ.
ಪ್ರಭಾಕರ ಗೌಡ ಪೊಸೊಂದೋಡಿ ಅವರು ರಾಜ್ಯಮಟ್ಟದ ಕಬಡ್ಡಿ ಆಟಗಾರರಾಗಿ, ತೀರ್ಪುಗಾರರಾಗಿ, ಸಂಘಟಕರಾಗಿ ಪ್ರಸಿದ್ಧಿ ಪಡೆದಿದ್ದಾರೆ.
ತುಳುನಾಡಿನ ಸಾಂಪ್ರದಾಯಿಕ ಕ್ರೀಡ ಕಂಬಳದ ಸಂಘಟಕರಾಗಿ ಬಂಗಾಡಿ ಕೊಲ್ಲಿ ಕಂಬಳ ಸಮಿತಿ ಮೂಲಕ ಸಂಸ್ಕೃತಿಯ ಉಳಿವಿನ ಕಾರ್ಯದಲ್ಲಿ ತೊಡಗಿಸಿಕೊಂಡ ಅನುಭವಿಯಾಗಿದ್ದಾರೆ. ಅತ್ಯುತ್ತಮ ಕ್ರೀಡಾಪಟುವೂ ಆಗಿರುವ ಅವರು ತಾಲೂಕಿನ ಪ್ರತಿಷ್ಠಿಕ ಕೃಷಿ ಕುಟುಂಬವಾದ ಪೊಸೊಂದೋಡಿ ಕುಟುಂಬದಿಂದ ಬಂದವರಾಗಿದ್ದು, ಸಂಘಟಕರಾಗಿಯೂ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರಗತಿಬಂಧು ಒಕ್ಕೂಟದ ತಾ| ಕೇಂದ್ರ ಸಮಿತಿ ಅಧ್ಯಕ್ಷರಾಗಿ ತೊಡಗಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಹುಣ್ಣಿಮೆ ಹಾಡು ವಾರ್ಷಿಕ ಪ್ರಶಸ್ತಿ ಸ್ವೀಕರಿಸಿದ ಹಸನಬ್ಬ
ಇದರ ಜೊತೆಗೆ ಈ ವಾರವೇ ಚಾರ್ಮಾಡಿ ಹಸನಬ್ಬ ಅವರು ಬೆಂಗಳೂರು ಮಲ್ಲೇಶ್ವರದ ಹುಣ್ಣಿಮೆ ಹಾಡು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ “ಚಾರ್ಮಾಡಿ ಘಾಟ್ ಜೀವರಕ್ಷಕ” ಪ್ರಶಸ್ತಿ ಎಂಬ ವಿಶೇಷ ಪುರಸ್ಕಾರ ಸ್ವೀಕರಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.