ಮಡಂತ್ಯಾರು: ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುಂಜಾಲಕಟ್ಟೆ ನಿವಾಸಿ, ಮಡಂತ್ಯಾರು ಗ್ರಾ.ಪಂ ಮಾಜಿ ಸದಸ್ಯ, ದಿನೇಶ್ ಆಚಾರ್(53.ವ) ರವರು ನ.13ರಂದು ರಾತ್ರಿ ಮೃತರಾಗಿದ್ದಾರೆ.
ಕಾರ್ಯನಿಮಿತ್ತ ನ.7 ರಂದು ಬೈಕ್ನಲ್ಲಿ ಮಂಗಳೂರಿಗೆ ಹೋಗಿದ್ದ ದಿನೇಶ್ ಆಚಾರ್ ಹಾಗೂ ಹಿಂಬದಿ ಸವಾರ ಮಡಂತ್ಯಾರು ಗ್ರಾ.ಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಅಬ್ದುಲ್ ರಹಿಮಾನ್ ಪಡ್ಪು ಅವರು ಹಿಂದಿರುಗಿ ಬರುತ್ತಿರುವ ವೇಳೆ ಪಡೀಲು ಎಂಬಲ್ಲಿ ಪಿಕ್ಅಪ್ ವಾಹನ ಡಿಕ್ಕಿಹೊಡೆದು ಅಪಘಾತ ಸಂಭವಿಸಿದ್ದು, ದಿನೇಶ್ ಅವರ ತಲೆಗೆ ತೀವ್ರ ಸ್ವರೂಪದ ಗಾಯವಾಗಿತ್ತು. ಅಬ್ದುಲ್ ರಹಿಮಾನ್ ಪಡ್ಪು ಅವರಿಗೂ ಕೈಗೆ ಸಣ್ಣ ಪುಟ್ಟ ಗಾಯಗಳಾಗಿತ್ತು. ಗಾಯಾಳು ದಿನೇಶ್ ಅವರನ್ನು ಈ ಸಂದರ್ಭ ಪಡೀಲಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ನ.13ರಂದು ರಾತ್ರಿ1.30ಕ್ಕೆ ಕೊನೆಯುಸಿರೆಳೆದಿದ್ದಾರೆ.
ಮೃತರ ತಂದೆ ಬಾಬು ಆಚಾರ್ಯ ರವರು ಕೆಲ ವರ್ಷಗಳ ಹಿಂದೆಯೇ ಮೃತಪಟ್ಟಿದ್ದು, ಇದೀಗ ಮೃತರು ತಾಯಿ ಸರೋಜಿನಿ ಆಚಾರ್ಯ, ಪತ್ನಿ ವಿದ್ಯಾ, ಓರ್ವ ಪುತ್ರಿ ಅರ್ಚನಾ, ಸಹೋದರರಾದ ಜಯರಾಮ ಆಚಾರ್, ರಮೇಶ್ ಆಚಾರ್, ಲಕ್ಷ್ಮೀ ನಾರಾಯಣ ಆಚಾರ್, ಕೃಷ್ಣ ಗೋಪಾಲ ಆಚಾರ್, ಓರ್ವ ಸಹೋದರಿ ಗೀತಾ ಆಚಾರ್ ಹಾಗೂ ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.