ಅ.24ರಿಂದ ಅ.28: ಬೆಳ್ತಂಗಡಿಯಲ್ಲಿ ಅಂತಾರಾಷ್ಟ್ರೀಯ ಚೆಸ್ ಪಂದ್ಯಾಟ-ಎಸ್‌ಡಿಎಂ ರೋಟೋ ಲಾಯರ್ಸ್ಸ್ ಕಪ್

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳು ಉಜಿರೆ ಹಾಗೂ ಬಾರ್ ಅಸೋಸಿಯೇಷನ್ ಬೆಳ್ತಂಗಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಅ.24ರಿಂದ ಅ.28ರವರೆಗೆ ೪ನೇ ಅಂತಾರಾಷ್ಟ್ರೀಯ ಫಿಡೆ ರೇಟೆಡ್ ಮುಕ್ತ ಚದುರಂಗ ಪಂದ್ಯಾಟ ಎಸ್‌ಡಿಎಂ ರೋಟೋ ಲಾಯರ್ಸ್ ಕಪ್-2019 ಬೆಳ್ತಂಗಡಿ ಶ್ರೀ ಧ.ಮಂ ಕಲಾಭವನದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮ ಆಯೋಜನಾ ಸಮಿತಿ ಅಧ್ಯಕ್ಷ ನಿವೃತ್ತ ಮೇ|ಜ| ರೋ. ಎಂ.ವಿ ಭಟ್ ಹೇಳಿದರು.
ಅವರು ಅ.15ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕ್ರೀಡಾ ಕ್ಷೇತ್ರಕ್ಕೆ, ಅದರಲ್ಲೂ ಮನೋಬಲ ವೃದ್ಧಿಸುವ ಸಾಮರ್ಥ್ಯವಿರುವ ಚದುರಂಗ ಕ್ರೀಡೆಯ ಕುರಿತು ಯುವ ಸಮಾಜದಲ್ಲಿ ಒಲವು ಮೂಡಿಸುವ ಉದ್ದೇಶದಿಂದ ಬೆಳ್ತಂಗಡಿಯಲ್ಲಿ ಕೆಲವು ವರ್ಷಗಳಿಂದ ಆಯೋಜಿಸಲ್ಪಡುತ್ತಿರುವ ಪಂದ್ಯಾಟ ಸಂಘಟನೆ ಹಾಗೂ ಭಾಗವಹಿಸುವಿಕೆಯಲ್ಲಿ ಹೊಸ ಭಾಷ್ಯವನ್ನೇ ಬರೆದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ನಿರಂತರ ಸಹಾಯ ಮತ್ತು ಸಹಕಾರವನ್ನು ಗುರುತಿಸಿ ರೋಟೋ ಲಾಯರ್‍ಸ್ ಕಪ್ ಹೆಸರಿನಲ್ಲಿ ಆಯೋಜಿಸಲ್ಪಡುತ್ತಿದ್ದ ಈ ಪಂದ್ಯಾವಳಿಯನ್ನು ಈ ವರ್ಷದಿಂದ ಎಸ್.ಡಿ.ಎಂ ರೋಟೋ ಲಾಯರ್ಸ್ಸ್ ಕಪ್-2019 ಎಂದು ಮರು ನಾಮಕರಣ ಮಾಡಲಾಗಿದೆ. ಕಳೆದ ವರ್ಷ 310 ಕ್ರೀಡಾ ಸ್ಪರ್ಧಿಗಳು ಭಾಗವಹಿಸಿದ್ದು, ಈ ಬಾರಿ 250 ಮಂದಿ ಭಾಗವಹಿಸುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶವಾದ ಬೆಳ್ತಂಗಡಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಚೆಸ್ ಕ್ರೀಡಾಕೂಟವನ್ನು ಆಯೋಜಿಸುವ ಮೂಲಕ ಮಕ್ಕಳು ಹಾಗೂ ಹೆತ್ತವರಲ್ಲಿ ಈ ಆಟದ ಬಗ್ಗೆ ಆಸಕ್ತಿ ಮೂಡಿಸುವುದರೊಂದಿಗೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಖ್ಯಾತಿ ಆಟಗಾರರನ್ನು ಈ ಪರಿಸರಕ್ಕೆ ಪರಿಚಯಿಸುವ ಹಾಗೂ ಪ್ರೋತ್ಸಾಹಿಸುವ ಮೂಲಕ ಚೆಸ್ ಕ್ರೀಡಾ ಕ್ಷೇತ್ರದಲ್ಲಿ ಬೆಳ್ತಂಗಡಿ ಗುರುತಿಸಿಕೊಳ್ಳಲಿದೆ. ಪಂದ್ಯಾಟವನ್ನು ಬೆಳಗ್ಗೆ 10 ಗಂಟೆಗೆ ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಯಶೋವರ್ಮ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಜಯರಾಮ ಎಸ್ ಅವರು ಚೆಸ್ ಪಂದ್ಯಾಟ ಆಯೋಜನೆಯ ವಿವರ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಅಲೋಸಿಯಸ್ ಡಿಸೋಜ ಅವರು ಅ.16ರಂದು ತಾಲೂಕು ವಕೀಲರ ಸಂಘದ ಪದಗ್ರಹಣ ಸಮಾರಂಭದ ಕುರಿತು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ರೋ| ಪ್ರತಾಪಸಿಂಹ ನಾಯಕ್, ಮುಖ್ಯ ಸಂಚಾಲಕ ಎನ್.ಡಿ ರತ್ನವರ್ಮ ಬುಣ್ಣು, ವಕೀಲರ ಸಂಘದ ಕಾರ್ಯದರ್ಶಿ ಶ್ರೀಕೃಷ್ಣ, ಸಮಿತಿ ಸದಸ್ಯ ಸುಬ್ರಹ್ಮಣ್ಯ ಕುಮಾರ್ ಅಗರ್ತ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.