HomePage_Banner_
HomePage_Banner_
HomePage_Banner_

ಜಿಲ್ಲಾ ಪರಿಷತ್ತು ಮಾಜಿ ಸದಸ್ಯೆ ಗುಲಾಬಿ ಹೆಗ್ಗಡ್ತಿ ನಿಟ್ಟಡೆಗುತ್ತು ಇನ್ನಿಲ್ಲ


ಬೆಳ್ತಂಗಡಿ: ತಾಲೂಕಿನ ಕುಕ್ಕೇಡಿ ಗ್ರಾ.ಪಂ ವ್ಯಾಪ್ತಿಯ ನಿಟ್ಟಡೆ ಅತ್ತೂರು ಕೆಲ್ಲಬೆಟ್ಟು ಗುತ್ತು ಮನೆತನದ ನಿವೃತ ಶಿಕ್ಷಕ ದಿ. ಶೀನಪ್ಪ ಹೆಗ್ಡೆ ಅವರ ಧರ್ಮಪತ್ನಿ, ಜಿಲ್ಲಾ ಪರಿಷತ್ತು ಮತ್ತು ಬೆಳ್ತಂಗಡಿ ತಾ.ಪಂ ಮಾಜಿ ಸದಸ್ಯೆಯಾಗಿದ್ದ ತಾಲೂಕಿನ ಹಿರಿಯ ಸಾಮಾಜಿಕ ಮುಖಂಡೆ ಗುಲಾಬಿ ಹೆಗ್ಗಡ್ತಿ ಅವರು ಅ. 13 ರಂದು ಬೆಳಗ್ಗಿನ ಜಾವಾ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.
ವಯೋಸಹನ ಆನಾರೋಗ್ಯಗಳಿಂದಿದ್ದ ಅವರು ಒಂದೆರಡು ದಿನಗಳಿಂದ ಹೆಚ್ಚಿನ ಆಯಾಸಕ್ಕೊಳಗಾಗಿದ್ದರು. ಇಂದು ಬೆಳಿಗ್ಗೆ 3 ಗಂಟೆ ವೇಳೆಗೆ ಎಚ್ಚರಗೊಂಡಿದ್ದ ಅವರು ನೀರು ಸೇವಿಸಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ನಿಧನರಾಗಿದ್ದಾರೆ.

ಮೃತರು ವೇಣೂರು ಸಹಕಾರಿ ಸಂಘದಲ್ಲಿ ಸುಮಾರು ಮೂವತ್ತು ವರ್ಷಗಳ ಕಾಲ ನಿರ್ದೇಶಕರಾಗಿದ್ದರು. ಕುಕ್ಕೇಡಿ ಗ್ರಾ.ಪಂ ನಲ್ಲಿ ಹನ್ನೊಂದು ವರ್ಷಗಳಲ್ಲಿ ಅಧ್ಯಕ್ಷರಾಗಿ, ದ.ಕ ಜಿಲ್ಲಾ ಪರಿಷತ್ತಿನಲ್ಲಿ ಒಂದು ಬಾರಿ ಸದಸ್ಯರಾಗಿ, ಬೆಳ್ತಂಗಡಿ ತಾ.ಪಂ ನ ಸದಸ್ಯೆಯಾಗಿ, ಆಕಾಶವಾಣಿ ಮಂಗಳೂರು ಇದರ ಎಕ್ಸ್‌ಕ್ಯೂಟಿವ್ ಕಮಿಟಿ ಸದಸ್ಯರಾಗಿ, ಹೆಗ್ಗಡೆ ಸಮಾಜ ಸಂಘ ಮೂಡಬಿದ್ರೆ ಇದರ ಆಧ್ಯಕ್ಷೆಯಾಗಿ, ನಿಟ್ಟಡೆ ಸರಕಾರಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ, ಬೆಳ್ತಂಗಡಿ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾಗಿ, ಮಹಿಳಾ ಮಂಡಲದ ಅಧ್ಯಕ್ಷರಾಗಿ ಸೇರಿದಂತೆ ಇನ್ನೂ ಅನೇಕ ಧಾರ್ಮಿಕ ಸಾಮಾಜಿಕ ರಾಜಕೀಯ ಸಹಕಾರಿ ಕ್ಷೇತ್ರಗಳಲ್ಲಿ ತನ್ನನ್ನು ಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋಜನೆಯ ಚಟುವಟಿಕೆಗಳಲ್ಲೂ ಸಕ್ರೀಯ ಭಾಗಿಯಾಗುತ್ತಿದ್ದರು.
ಇವರ ಸಾಮಾಜಿಕ ಸೇವೆಯನ್ನು ಗುರುತಿಸಿ ಸುದ್ದಿ ಬಿಡುಗಡೆ ಪತ್ರಿಕೆಯ ಬೆಳ್ಳಿಹಬ್ಬ ಸಂಭ್ರಮದ ಸಂದರ್ಭ ಸಾಮಾಜಿಕ ಕ್ಷೇತ್ರದ ಗಣ್ಯರ ಸಾಲಿನಲ್ಲಿ ಇವರನ್ನೂ ಗುರುತಿಸಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿತ್ತು. ಅಲ್ಲದೆ ಜಿಲ್ಲಾ ಕಾಂಗ್ರೆಸ್, ಹೆಗ್ಗಡೆ ಸಮಾಜ ಸೇವಾ ಸಂಘ ಸೇರಿದಂತೆ ನಾಡಿನ ಅನೇಕ ಕಡೆ ಅವರಿಗೆ ಸನ್ಮಾನ ಪುರಸ್ಕಾರಗಳು ಲಭಿಸಿದ್ದವು.

ಮೃತರ ಒಂಬತ್ತು ಮಂದಿ ಮಕ್ಕಳ ಪೈಕಿ ಸುಧಾಕರ ಹೆಗ್ಡೆ, ಶೇಖರ ಹೆಗ್ಡೆ, ಭಾಸ್ಕರ ಹೆಗ್ಡೆ ಮತ್ತು ರತ್ನಾಕರ ಹೆಗ್ಡೆ ಅವರು ಈಗಾಗಲೇ ನಿಧನರಾಗಿದ್ದು, ಪ್ರಸ್ತುತ ಮಕ್ಕಳಾದ ಪ್ರಭಾಕರ ಹೆಗ್ಡೆ, ದಿವಾಕರ ಹೆಗ್ಡೆ ಮತ್ತು ಶಶಿಕರ ಹೆಗ್ಡೆ, ಇಬ್ಬರು ಹೆಣ್ಣು ಮಕ್ಕಳಾದ, ಜಿಲ್ಲಾ ಮಹಿಳಾ ಜೆಡಿಎಸ್ ಅಧ್ಯಕ್ಷೆಯಾಗಿರುವ ಸುಮತಿ ಎಸ್ ಹೆಗ್ಡೆ ಮತ್ತು ಸುನಂದ ಹೆಗ್ಡೆ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ಮೃತರ ಮನೆಗೆ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ತು ಶಾಸಕ ಹರೀಶ್ ಕುಮಾರ್, ಮಾಜಿ ಶಾಸಕ ವಸಂತ ಬಂಗೇರ, ತಾ. ಜೆಡಿಎಸ್ ಕಾರ್ಯದರ್ಶಿ ರಾಮ ಆಚಾರಿ, ಮಹಿಳಾ ಜೆಡಿಎಸ್ ಅಧ್ಯಕ್ಷೆ ಸಿಂಧೂದೇವಿ, ಜಿ.ಪಂ ಸದಸ್ಯ ಪಿ ಧರಣೇಂದ್ರ ಕುಮಾರ್ ಸಹಿತ ಅನೇಕ ಗಣ್ಯರು ಭೇಟಿ ನೀಡಿ ಅಂತಿಮದರ್ಶನ ಪಡೆದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.