ಎಸ್.ಡಿ.ಎಂ. ಕಾಲೇಜು: ಪದವಿ ಪ್ರದಾನ ಸಮಾರಂಭ, ಯು.ಜಿ.ಸಿ. ಪ್ರಾಯೋಜಿತ ವೃತ್ತಿ ಶಿಕ್ಷಣ ಪದವಿ ತರಗತಿ ಉದ್ಘಾಟನೆ

ಉಜಿರೆ : ಪ್ರತಿಯೊಬ್ಬರಲ್ಲಿಯೂ ಸುಪ್ತ ಪ್ರತಿಭೆ ಇದ್ದು ಪ್ರತಿಭೆಯ ಅನಾವರಣವೇ ಶಿಕ್ಷಣದ ಮುಖ್ಯ ಗುರಿಯಾಗಿದೆ. ತರಗತಿ ಕೋಣೆಯೊಳಗೆ ಕಲಿಯುವುದಕ್ಕಿಂತ ಹೆಚ್ಚು ತರಗತಿಯ ಹೊರಗೆ ಜ್ಞಾನ ಸಂಗ್ರಹ ಮಾಡಬೇಕು. ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣ ನೀಡಬೇಕು. ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರಿಂದ ಸಾಮಾಜಿಕ ಪರಿವರ್ತನೆಯೊಂದಿಗೆ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪಿ. ಸುಬ್ರಹ್ಮಣ್ಯ ಯಡಪಾಡಿತ್ತಾಯ ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ಇಂದು (ಅ.4) ಪದವಿ ಪ್ರದಾನ ಮಾಡಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣದೊಂದಿಗೆ ನೈತಿಕ ಶಿಕ್ಷಣವನ್ನೂ ನೀಡಿ ಯುವ ಜನತೆಯನ್ನು ಸಮಾಜ ಸೇವೆಗೆ ಅರ್ಪಿಸಲಾಗಿದೆ. ಶಿಕ್ಷಿತ ಯುವ ಜನತೆ ದೇಶದ ಅಮೂಲ್ಯ ಮಾನ ಸಂಪನ್ಮೂಲವಾಗಿದ್ದು ಉತ್ತಮ ಕೌಶಲದೊಂದಿಗೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಣೆ ಮಾಡಬೇಕು. ಮನೆಯಲ್ಲಿ ಹಾಗೂ ತಮ್ಮ ಕಾರ್ಯಕ್ಷೇತ್ರದಲ್ಲಿ ನೈತಿಕತೆ ಮತ್ತು ಮಾನವೀಯ ಮೌಲ್ಯ ಅಳವಡಿಸಿಕೊಂಡಾಗ ಮಾತ್ರ ಪಡೆದ ಶಿಕ್ಷಣ ಮತ್ತು ವ್ಯಕ್ತಿತ್ವಕ್ಕೆ ಘನತೆ, ಗೌರವ ಬರುತ್ತದೆ ಎಂದು ಹೇಳಿದರು. ಪದವಿ ಪಡೆದ ಕೂಡಲೆ ಓದುವುದನ್ನು ನಿಲ್ಲಿಸಬಾರದು. ಸಮೂಹ ಮಾಧ್ಯಮಗಳಿಂದ ನಿರಂತರ ಜ್ಞಾನ ಸಂಗ್ರಹ ಮಾಡಬೇಕು. ಸಮಯವನ್ನು ಕೊಲ್ಲಬಾರದು, ಸದುಪಯೋಗ ಮಾಡಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಯು.ಜಿ.ಸಿ. ಪ್ರಾಯೋಜಿತ ವೃತ್ತಿ ಶಿಕ್ಷಣ ಕೋರ್ಸ್‌ಗಳ ಬಗ್ಯೆ ಮಾಹಿತಿ ನೀಡಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್ ನೂತನ ಪದವೀಧರರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್. ಸತೀಶ್ಚಂದ್ರ ಸ್ವಾಗತಿಸಿ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಪ್ರೊ. ಗಣಪಯ್ಯ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.