150ನೇ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯಿಂದ ರಾಜ್ಯಾದ್ಯಂತ ವ್ಯಸನ ಜಾಗೃತಿ ಅಭಿಯಾನ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಮದ್ಯ ಮತ್ತು ಮಾದಕ ವ್ಯಸನದ ವಿರುದ್ದ ಕಳೆದ ಎರಡುವರೆ ದಶಕಗಳಿಂದ ಜಾಗೃತಿ ಮತ್ತು ಮನಪರಿವರ್ತನಾ ಕಾರ್ಯಕ್ರಮವನ್ನು ಏರ್ಪಡಿಸುತ್ತಿರುವ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಸ್ವಸ್ಥ ಸಮಾಜ ನಿರ್ಮಾಣದ ಆಶಯದೊಂದಿಗೆ ಹುಟ್ಟಿದ ಸಂಸ್ಥೆಯಾಗಿದೆ. ದ.ಕ. ಜಿಲ್ಲೆಯ ಬೆಳ್ತಂಗಡಿಯಲ್ಲಿ ಆರಂಭಗೊಂಡು ಇದೀಗ ರಾಜ್ಯಮಟ್ಟದಲ್ಲಿಯೇ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನದೇ ಆದ ಜಿಲ್ಲಾ ಶಾಖೆಗಳನ್ನು ಹೊಂದಿದ್ದು ಸಮಾಜದ ಗಣ್ಯರ ಮೇಲ್ವಿಚಾರಣೆಯಲ್ಲಿ ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ಕೆಲಸ ನಿರ್ವಹಿಸುತ್ತಿದೆ.
ಪ್ರತೀ ವರ್ಷ ಕನಿಷ್ಟ 150 ಮದ್ಯವರ್ಜನ ಶಿಬಿರಗಳನ್ನು ತಲಾ 5 ದಿನಗಳ ಕಾಲ ನಡೆಸಿ ಹತ್ತು ಸಾವಿರಕ್ಕೂ ಮಿಕ್ಕಿದ ವ್ಯಸನಿಗಳಿಗೆ ಚಟದಿಂದ ಮುಕ್ತಿಹೊಂದಲು ಪ್ರೇರಣೆ, ಚಿಕಿತ್ಸೆ, ಸಲಹೆ ನೀಡುತ್ತಾ ಬಂದಿದ್ದು, ಇದುವರೆಗೆ 1408 ಮದ್ಯವರ್ಜನ ಶಿಬಿರಗಳ ಮೂಲಕ 96,000ಕ್ಕೂ ಮಿಕ್ಕಿದ ವ್ಯಸನಿಗಳಿಗೆ ಮನಪರಿವರ್ತನೆ ಮಾಡಲಾಗಿದೆ. ಶಿಬಿರದಲ್ಲಿ ಪಾಲ್ಗೊಂಡ ಶೇ.80ಕ್ಕೂ ಮಿಕ್ಕಿದ ಜನರು ನವಜೀವನವನ್ನು ಪಡೆಯುತ್ತಿರುವುದು ವೇದಿಕೆಯ ಯಶಸ್ವಿಗೆ ಕಾರಣವಾಗಿದೆ. ಅಲ್ಲದೆ ಗ್ರಾಮ ಸಮೀಕ್ಷೆ, ಹಕ್ಕೊತ್ತಾಯ ಮಂಡನೆ, ಧಾರ್ಮಿಕ ಕಾರ್ಯಕ್ರಮಗಳು, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ಗ್ರಾಮ ಸ್ವಾಸ್ಥ್ಯ ಕಾರ್ಯಕ್ರಮ, ಜಾಗೃತಿ ಸಮಾವೇಶಗಳು, ಮಾದಕ ವಸ್ತು ವಿರೋಧಿ ದಿನಾಚರಣೆಗಳು, ಪಾನಮುಕ್ತರ ಅಭಿನಂದನಾ ಕಾರ್ಯಕ್ರಮಗಳು, ಬೀದಿ ನಾಟಕ, ಕಿರುಚಿತ್ರಗಳ ಪ್ರದರ್ಶನ, ಜನಪ್ರತಿನಿಧಿಗಳೊಂದಿಗೆ ಸಭೆ… ಹೀಗೆ ವಿಶೇಷ ವಿಭಿನ್ನ ಕಾರ್ಯಕ್ರಮಗಳ ಮೂಲಕ ಎಲ್ಲಾ ವರ್ಗದ ಜನರನ್ನು ವ್ಯಸನದಿಂದ ಮುಕ್ತಿಹೊಂದಲು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರಲಾಗುತ್ತಿದೆ. ಈ ಎಲ್ಲದರ ಪರಿಣಾಮವಾಗಿ ಪರೋಕ್ಷವಾಗಿ ಸ್ವಪ್ರೇರಣೆಯಿಂದ ಜನರು ದುಶ್ಚಟ ದುರಾಭ್ಯಾಸವನ್ನು ಬಿಟ್ಟು ನೆಮ್ಮದಿಯಿಂದ ಬದುಕುವಂತಾಗಿದೆ. ಮಹಿಳೆಯರಿಗೆ ಮಹಿಳಾ ಜಾಗೃತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ. ಪ್ರಸ್ತುತ ಮದ್ಯವರ್ಜನ ಶಿಬಿರಗಳಿಗೆ ಮಹಿಳೆಯರೇ ಸ್ವಯಂ ಸೇವಕರಾಗಿ ಮುಂದೆ ಬಂದು ವ್ಯಸನಿಗಳನ್ನು ಶಿಬಿರಕ್ಕೆ ಸೇರಿಸುತ್ತಿದ್ದಾರೆ. ವೇದಿಕೆಯ ಕಾರ್ಯಚಟುವಟಿಕೆಗಳನ್ನು ಗಮನಿಸಿದ ರಾಜ್ಯ ಸರಕಾರ, ಜಿಲ್ಲಾಡಳಿತ, ಪೋಲಿಸ್ ಇಲಾಖೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು ಇವರುಗಳು ವೇದಿಕೆಯೊಂದಿಗೆ ಸಹಕರಿಸುತ್ತಿದ್ದಾರೆ.
ಮಹಾತ್ಮಾ ಗಾಂಧೀಜಿಯವರ 18 ರಚನಾತ್ಮಕ ಅಂಶಗಳಲ್ಲಿ ಪಾನನಿಷೇಧವೂ ಒಂದಾಗಿದೆ. ಗಾಂಧಿ ಕಂಡ ಮದ್ಯಮುಕ್ತ ಭಾರತದ ಕನಸನ್ನು ಜನರಿಗೆ ನೆನಪು ಮಾಡಿಕೊಡುವ ಉದ್ದೇಶದಿಂದ ಅಕ್ಟೋಬರ್ 2 ಗಾಂಧಿ ಜಯಂತಿಯಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ರಾಜ್ಯಾದ್ಯ್ಯಂತ ಸಮಾವೇಶಗಳನ್ನು ಏರ್ಪಡಿಸುತ್ತಿದೆ. ಇದೇ ಸಂಧರ್ಭದಲ್ಲಿ ಮದ್ಯಪಾನದ ದುರಂತಗಳ ಕುರಿತು ಅರಿವು ಮೂಡಿಸುವಿಕೆ, ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳು, ವಿಚಾರ ಸಂಕಿರಣ, ಪಾನಮುಕ್ತರಿಗೆ ಅಭಿನಂದನೆ, ನವಜೀವನ ಸಾಧಕರಿಗೆ ಸನ್ಮಾನ, ಹೀಗೆ ಸಮಾಜದ ಗಣ್ಯರನ್ನು ಈ ಚಳುವಳಿಯತ್ತ ಗಮನ ಸೆಳೆಯುವುದು ಹಾಗೂ ಮದ್ಯಮುಕ್ತ ಭಾರತಕ್ಕಾಗಿ ಆಗ್ರಹಿಸುವುದಾಗಿದೆ.
ಈ ಬಾರಿ ವಿಶೇಷವಾಗಿ ಪೂಜ್ಯ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ಜಯಂತಿಯಾಗಿದೆ. ಈ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಅರ್ಥಪೂರ್ಣವಾಗಿ ಆಚರಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಮುಖ್ಯವಾಗಿ 30 ಜಿಲ್ಲೆಗಳಲ್ಲಿ ‘ಗಾಂಧಿ ಸ್ಮೃತಿ’ ವಿಚಾರ ಸಂಕಿರಣ ಕಾರ್ಯಕ್ರಮಗಳನ್ನು ಆಯೋಜಿಸಿ ಮದ್ಯಮುಕ್ತ ಸಮಾಜ ನಿರ್ಮಾಣಕ್ಕೆ ಗಾಂಧಿ ವಿಚಾರ ಧಾರೆಗಳ ಕುರಿತಂತೆ ಕಾರ್ಯಾಗಾರ, ಜನಜಾಗೃತಿ ಜಾಥಾ, ಸ್ವಚ್ಛತಾ ಕಾರ್ಯಕ್ರಮ, ಪಾನಮುಕ್ತರ ಸಮಾವೇಶ, ಮಹಿಳಾ ಸಮಾವೇಶ, ವ್ಯಸನಮುಕ್ತರಿಗೆ ಅಭಿನಂದನೆ, ಶಾಲಾ ಮಕ್ಕಳಿಗೆ ತಾಲೂಕು/ಜಿಲ್ಲಾ ಮಟ್ಟದ ಚರ್ಚಾಗೋಷ್ಠಿ, ಸಾಧಕ ವ್ಯಸನ ಮುಕ್ತರಿಗೆ ‘ಜಾಗೃತಿ ಅಣ್ಣ’ ಮತ್ತು ‘ಜಾಗೃತಿ ಮಿತ್ರ’ ಪ್ರಶಸ್ತಿ, ಗ್ರಾಮ ಮಟ್ಟದಲ್ಲಿ ಪ್ರೇರಕರ ತರಬೇತಿ, ಹೀಗೆ ವಿವಿಧ ಕಾರ್ಯಕ್ರಮಗಳ ಮೂಲಕ ಲಕ್ಷಾಂತರ ಜನರಿಗೆ ಗಾಂಧೀಜಿಯ ವಿಚಾರ ಧಾರೆಗಳನ್ನು ಹಾಗೂ ವ್ಯಸನಮುಕ್ತ ಭಾರತದ ಕನಸು ಕಂಡಿರುವ ಮಹಾತ್ಮ ಗಾಂಧೀಜಿಯವರ ಕನಸಿನ ಭಾರತವನ್ನು ನಿರ್ಮಿಸುವ ದೃಷ್ಟಿಯಲ್ಲಿ ಪ್ರಯತ್ನಿಸಲಾಗುವುದು.
ಈ ನಿಟ್ಟಿನಲ್ಲಿ ರಾಜ್ಯಾದ್ಯಂತ 37 ಕಡೆಗಳಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಗಳ ಮೂಲಕ ಅಕ್ಟೋಬರ್ 2 ರಿಂದ ಅಕ್ಟೋಬರ್ 15ರವರೆಗೆ ಸಮಾವೇಶಗಳನ್ನು ಏರ್ಪಡಿಸಲಾಗುವುದು. ಈ ಕಾರ್ಯಕ್ರಮಗಳಲ್ಲಿ ಅಕ್ಟೋಬರ್ 2 ರಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಪದ್ಮಾವತಿ ಕಲಾಮಂದಿರದಲ್ಲಿ ನಡೆಯಲಿರುವ ‘ಬೃಹತ್ ಜನಜಾಗೃತಿ ಜಾಥಾ ಮತ್ತು ಸಮಾವೇಶ’ ದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಮಾನ್ಯ ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಕರ್ನಾಟಕ ಸರಕಾರ ಇವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಡಾ| ಎಂ. ಮೋಹನ್ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡಬಿದ್ರೆ ಇವರು ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. ಮುಲ್ಕಿ, ಮೂಡಬಿದ್ರೆ ಶಾಸಕರು ಮಾನ್ಯ ಉಮಾನಾಥ ಎ. ಕೋಟ್ಯಾನ್, ಮಾಜಿ ಸಚಿವರುಗಳಾದ ಶ್ರೀ ಕೆ. ಅಭಯಚಂದ್ರ ಜೈನ್ ಮತ್ತು ಶ್ರೀ ಕೆ. ಅಮರನಾಥ ಶೆಟ್ಟಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ವಿ. ರಾಮಸ್ವಾಮಿ ಬೆಂಗಳೂರು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜನಜಾಗೃತಿ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷರಾದ ನವೀನ್ ಅಮೀನ್ ಮತ್ತು ಮೂಡಬಿದ್ರಿಯ ಕುಲದೀಪ್ ಎಂ. ಉಪಸ್ಥಿತರಿರುತ್ತಾರೆ. ಈ ಕಾರ್ಯಕ್ರಮದಲ್ಲಿ ತಾಲೂಕಿನ 3000ಕ್ಕೂ ಮಿಕ್ಕಿದ ವ್ಯಸನಮುಕ್ತರು ಭಾಗವಹಿಸಲಿದ್ದು, ಜಿಲ್ಲೆಯ ವ್ಯಸನಮುಕ್ತ ಸಾಧಕರಿಗೆ ‘ಜಾಗೃತಿ ಮಿತ್ರ’, ಓರ್ವರಿಗೆ ‘ಜಾಗೃತಿ ಅಣ್ಣ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ವೇದಿಕೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.