ಆನೆ ದಂತ ಆರೋಪಿಗಳಿಗೆ 15 ದಿನ ನ್ಯಾಯಾಂಗ ಬಂಧನ

ಬೆಳ್ತಂಗಡಿ: ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿದ್ದ 51 ಕೆ.ಜಿ ಗೂ ಅಧಿಕ ತೂಕದ 10 ಆನೆ ದಂತಗಳನ್ನು ಇರಿಸಿಕೊಂಡು ಅದನ್ನು ವ್ಯವಸ್ಥಿತವಾಗಿ ಮಾರಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣದಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿರುವ ಆರೋಪಿಗಳ ವಿರುದ್ಧ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಎಲ್ಲಾ ಆರೋಪಿಗಳನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯ ಮೂವರಿಗೂ ಮುಂದಿನ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸ್ ಅರಣ್ಯ ಸಂಚಾರಿ ದಳದ ಕೊಡಗು ಎಸ್.ಪಿ ಸುರೇಶಬಾಬು ತಿಳಿಸಿದರು.
18 ರಂದು  ಬೆಳ್ತಂಗಡಿ ತಾಲೂಕಿನ ಉಜಿರೆ ಪರಿಸರದಲ್ಲಿ ಪತ್ತೆಹಚ್ಚಿದ ಪ್ರಕರಣದ ಬಗ್ಗೆ ಸೆ.19 ಇಂದು ಬೆಳ್ತಂಗಡಿ ಸರಕಾರಿ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಅರಣ್ಯ ಸಂಚಾರಿ ದಳದಿಂದ ರಾಜ್ಯದಲ್ಲೇ ಮೊದಲ ಪ್ರಕರಣ:
ಪೊಲೀಸ್ ಅರಣ್ಯ ಸಂಚಾರಿ ದಳ ಪತ್ತೆಹಚ್ಚಿದ ರಾಜ್ಯದಲ್ಲೇ ಮೊಟ್ಟಮೊದಲ ಅತೀ ದೊಡ್ಡ ಪ್ರಕರಣವಾಗಿ ಈ ಪ್ರಕರಣ ದಾಖಲಾಗಿದೆ. ಇದರಲ್ಲಿ ಕಾರ್ಯನಿರ್ವಹಿಸಿದ ಸಬ್‌ಇನ್ಸ್‌ಪೆಕ್ಟರ್ ಪುರುಷೋತ್ತಮ ಎ ಹಾಗೂ ತಂಡದ ಎಲ್ಲಾ ಸಿಬ್ಬಂದಿಗಳಿಗೆ ನಗದು ಪುರಸ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ.
ಜಾಲ ಪತ್ತೆಗೆ ಕ್ರಮ:
ಈ ಪ್ರಕರಣದದಲ್ಲಿ ಈಗಾಗಲೇ ನಮ್ಮಿಂದ ಬಂಧನಕ್ಕೊಳಗಾಗಿರುವ ಉಜಿರೆ ಸುರ್ಯ ರಸ್ತೆಯ ಇಚ್ಚಿಲ ದೂಜಿರಿಗೆ ಮನೆ ನಿವಾಸಿ ಎಂ.ಎ ಅಬ್ರಾಹಾಂ (೫೬ವ.), ಕೇರಳ ರಾಜ್ಯದ ಕಣ್ಣೂರು ಜಿಲ್ಲೆ ತೆಳಪ್ಪಾರಂ ವೆಳ್ಳಾಡ್ ಪೊರಕ್ಕಾಡ್ ಮನೆ ನಿವಾಸಿ ಸುರೇಶ್‌ಬಾಬು (೪೯ವ.) ಮತ್ತು ಹಾಸನ ಜಿಲ್ಲೆಯ ಅಂಕಪುರ ಅಂಚೆ ವ್ಯಾಪ್ತಿಯ ಕಬ್ಬತ್ತಿಕ್ರಾಸ್ ನಿವಾಸಿ ರಮೇಶ್ ಕೆ.ಜಿ (೩೧ವ.) ಎಂಬವನ್ನು ಹೆಚ್ಚಿನ ವಿಚಾರಣೆ ನಡೆಸಿ ಮಹತ್ವದ ಮಾಹಿತಿ ಕಲೆಹಾಕಲಾಗಿದೆ. ತಲೆಮರೆಸಿಕೊಡಿರುವ ಆರೋಪಿ ಮಂಗಳೂರು ಪಡೀಲ್ ನಿವಾಸಿ ಎಂದು ಮಾಹಿತಿ ಇದ್ದು ಅವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳ ಪೈಕಿ ಅಬ್ರಾಹಾಂ ಅವರು ಕಳೆದ 3 ವರ್ಷಗಳಿಂದ ಒಟ್ಟು 8  ದಂತಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದು, ಕೇರಳದ ಸುರೇಶ್‌ಬಾಬು ಇನ್ನೆರಡು ದಂತಗಳನ್ನು ಸಂಗ್ರಹಿಸಿ ಹೀಗೆ ಒಟ್ಟು 10 ದಂತಗಳನ್ನು ಮಾರಾಟಕ್ಕೆ ಅಣಿಯಾಗಿದ್ದರು. ಇದರ ಹಿಂದೆ ವ್ಯವಸ್ಥಿತ ಜಾಲ ಇದೆ ಎಂದು ನಮಗೆ ಖಚಿತಗೊಂಡಿದ್ದು, ಆ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ. ಈ ಜಾಲದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಸೆದೆಬಡಿಯುವ ಕೆಲಸ ಮಾಡಲಾಗುವುದು ಎಂದರು.
ಆರೋಪಿಗಳು ಒಂದೋ ಸತ್ತ ಆನೆ, ಅಥವಾ ಬೇಟೆಯಾಡಿಯೋ ಈ ದಂತಗಳನ್ನು ಸಂಗ್ರಹಿಸಿಟ್ಟುಕೊಂಡಿರಬಹುದು. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಎಲ್ಲ ಮಾಹಿತಿ ಸಂಗ್ರಹಿಸಲಿದ್ದೇವೆ ಎಂದರು.
ಮೌಲ್ಯಕ್ಕಿಂತ ಅಪರಾಧದಿಂದ ಶಿಕ್ಷೆಯಾಗಲಿದೆ ಎಂಬುದೇ ಮುಖ್ಯ:
ದಂತಗಳ ಅಂತಾರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಎಷ್ಟು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಸುಪ್ರಿಂ ಕೋರ್ಟ್ ನಿರ್ದೇಶನದಂತೆ ಅರಣ್ಯ ಸೊತ್ತುಗಳಿಗೆ ನಿಖರ ಮೌಲ್ಯ ಹೇಳುವುದು ಕಷ್ಟಸಾಧ್ಯ. ಇಲ್ಲಿ ಅದರ ಮೌಲ್ಯಕ್ಕಿಂತ ಈ ರೀತಿ ಪ್ರಕರಣಗಳನ್ನು ಕೈಗೊಳ್ಳುವುದು ತೀವ್ರ  ರೀತಿಯ ಅಪರಾಧ ಚಟುವಟಿಕೆ ಎಂಬುದನ್ನು ಜನರು ತಿಳಿದುಕೊಳ್ಳಬೇಕು. ಅದಕ್ಕಾಗಿ ಇಲಾಖೆ ಈ ರೀತಿಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂದರು.
ಆರೋಪಿಗಳು ಮತ್ತು ಸೊತ್ತುಗಳು ಅರಣ್ಯ ಇಲಾಖೆಗೆ ಹಸ್ತಾಂತರ:
ಪ್ರಸ್ತುತ ಪ್ರಕರಣವನ್ನು ಮುಂದಿನ ತನಿಖೆಗಾಗಿ ಮುಂದಿನ ತನಿಖೆಗಾಗಿ ಆರೋಪಿಗಳು ಮತ್ತು ಸೊತ್ತುಗಳನ್ನು ಬೆಳ್ತಂಗಡಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಮುಂದಿನ ತನಿಖೆಯನ್ನು ಡಿಎಫ್‌ಒ ಕರಿಕಲನ್, ಎಸಿಎಫ್ ಶಂಕರೇಗೌಡ ಅವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವಲಯ ಅರಣ್ಯ ಅಧಿಕಾರಿ ಸುಬ್ಬಯ್ಯ ನಾಯ್ಕ ತಂಡದವರು ನಡೆಸಲಿದ್ದಾರೆ.
ಆರೋಪಿಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದರೂ ಅದರ ಮೂಲದ ಪತ್ತೆ ಕಾರ್ಯದಲ್ಲಿ ಪೊಲೀಸ್ ಅರಣ್ಯ ತನಿಖಾ ದಳದ ನಮ್ಮ ತಂಡದವರು ಮುಂದುವರಿಸಲಿದ್ದಾರೆ ಎಂದು ಎಸ್.ಪಿ ಸುರೇಶಬಾಬು ಹೇಳಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.