ಸೆ.3: ಬ್ರಹ್ಮಾನಂದ ಶ್ರೀಗಳ 11ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ

ಧರ್ಮಸ್ಥಳ: ದಕ್ಷಿಣದ ಅಯೋಧ್ಯೆ ಎಂಬ ಖ್ಯಾತಿಯನ್ನು ಹೊಂದಿದ ಧರ್ಮಸ್ಥಳದ ನಿತ್ಯಾನಂದ ನಗರ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದಲ್ಲಿ ಸೆ.3ರಂದು ಬೆಳಿಗ್ಗೆ 11.00ಗಂಟೆಗೆ ಶ್ರೀ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 11ನೇ ವರ್ಷದ ಸದ್ಗುರು ಪಟ್ಟಾಭಿಷೇಕದ ವರ್ಧಂತ್ಯುತ್ಸವ ನಡೆಯಲಿದೆ. ಬೆಂಗಳೂರಿನ ವೇದಮೂರ್ತಿ ಲಕ್ಷ್ಮೀಪತಿ ಗೋಪಾಲಾಚಾರ್ಯ ರವರು ವೈದಿಕ ವಿಧಿವಿಧಾನ ನೆರವೇರಿಸಲಿದ್ದಾರೆ.
ಈ ಪುಣ್ಯಕ್ಷೇತ್ರದ ನಿರ್ಮಾತೃ ಜಗದ್ಗುರು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರು ಕರ್ಮಯೋಗಿಗಳಾಗಿದ್ದು, ರಾಮೈಕ್ಯರಾಗಿ 11 ವರ್ಷಗಳೇ ಸಂದಿವೆ. ತದನಂತರ ಈ ಪುಣ್ಯ ಕ್ಷೇತ್ರದ ಗುರು ಪೀಠಕ್ಕೆ ಉತ್ತರಾಧಿಕಾರಿಗಳಾಗಿ ಬಂದವರು ಜ್ಞಾನ ಯೋಗಿಗಳೂ, ತಪಸ್ವಿಯೂ, ಶಿಕ್ಷಣ ತಜ್ಞರೂ ಆದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು, ಆಧ್ಯಾತ್ಮವನ್ನು ಮೈಗೂಡಿಸಿಕೊಂಡವರು.
ತನ್ನ ಗುರುಗಳ ಇಚ್ಛೆಯಂತೆ ಭಾರತದ 9 ಕಡೆ ಶಾಖಾಮಠಗಳನ್ನು ನಿರ್ಮಿಸಲು ಧೃಢಸಂಕಲ್ಪವನ್ನು ತೊಟ್ಟು ಭಾರತದ ಉದ್ದಗಲಕ್ಕೂ ಶಾಖಾ ಮಠಗಳನ್ನು ನಿರ್ಮಿಸಿ ಆ ಮುಖೇನ ಎಲ್ಲಾ ಜಾತಿ ಜನಾಂಗದ ಮಕ್ಕಳಿಗೆ ಅದರಲ್ಲೂ ಮುಖ್ಯವಾಗಿ ಹಿಂದುಳಿದ ಜನಾಂಗಕ್ಕೆ ಉನ್ನತವಾದ, ಮೌಲ್ಯಯುಕ್ತವಾದ, ಸಂಸ್ಕಾರ ಭರಿತವಾದ ಶಿಕ್ಷಣವನ್ನು ಕೊಟ್ಟು ಕರ್ಮಯೋಗದ ಮುಖೇನ ಶ್ರೀ ರಾಮಚಂದ್ರ ದೇವರ ತತ್ವಾದರ್ಶಗಳನ್ನು ಮನೆಮನೆಗೆ ತಲುಪಿಸುತ್ತಿದ್ದಾರೆ.
ಪ್ರಸಕ್ತ ಮಠದ ವತಿಯಿಂದ ನಡೆಸಲ್ಪಡುವ ಶ್ರೀ ಆತ್ಮಾನಂದ ಸರಸ್ವತಿ ವಿದ್ಯಾಲಯದಲ್ಲಿ ಸುಮಾರು ೩೫೦ರಷ್ಟು ಮಕ್ಕಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ.
ಈ ಪುಣ್ಯಕ್ಷೇತ್ರದಲ್ಲಿ ಕಳೆದ ವರ್ಷ ಶ್ರೀಗಳವರ ಪಟ್ಟಾಭಿಷೇಕದ ದಶಮಾನೋತ್ಸವದ ಅಂಗವಾಗಿ ರಾಷ್ಟ್ರೀಯ ಧರ್ಮ ಸಂಸದ್ ಎಂಬ ಬಹು ದೊಡ್ಡ ಧಾರ್ಮಿಕ ಕಾರ್‍ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್‍ಯಕ್ರಮಕ್ಕೆ ಇಡೀ ರಾಷ್ಟ್ರದಿಂದ ಸುಮಾರು ೩ಸಾವಿರದಷ್ಟು ತಪಸ್ವಿ ಸಂತರು ಹಾಗೂ ಅನೇಕ ಮಹಾಮಂಡಲೇಶ್ವರರು ಈ ಪವಿತ್ರವಾದ ಧರ್ಮ ಕಾರ್‍ಯದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.