“ಜಿಲ್ಲೆಯ ಅಭಿವೃದ್ಧಿಯ ನೇತೃತ್ವ ನಾನೇ ವಹಿಸಿಕೊಳ್ಳುತ್ತೇನೆ” : ಸುದ್ದಿ ಸಂದರ್ಶನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ನಮ್ಮ ಜಿಲ್ಲೆಯಲ್ಲಿ 7  ಮಂದಿ ಬಿಜೆಪಿ ಶಾಸಕರಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ಕೇಂದ್ರದಲ್ಲೂ ಬಿಜೆಪಿ ಸರಕಾರವಿದೆ. ಜಿಲ್ಲೆಯ ಸಂಸದನಾಗಿರುವ ನಾನು ಇಂತಹ ಅತ್ಯಪೂರ್ವ ಸಂದರ್ಭದಲ್ಲಿ ಆಡಳಿತ ಪಕ್ಷದ ರಾಜ್ಯಾಧ್ಯಕ್ಷನಾಗಿದ್ದೆನೆ. ಹಿಂದೆ ಇಂತಹ ಸನ್ನಿವೇಶ ಸೃಷ್ಟಿಯಾಗಿರಲಿಲ್ಲ.ಮುಂದಕ್ಕೆ ಹೇಗಿರುತ್ತದೆ ಎಂದು ಗೊತ್ತಿಲ್ಲ.ಆದ್ದರಿಂದ ಜಿಲ್ಲೆಯ ಎಲ್ಲಾ ಶಾಸಕರ ಜತೆ ಸೇರಿ ಜಿಲ್ಲೆಯ ಅಭಿವೃದ್ಧಿ ಸಾಧಿಸುವ ಮಹತ್ಕಾರ್ಯದ ನೇತೃತ್ವವನ್ನು ನಾನೇ ವಹಿಸಿಕೊಳ್ಳುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ದ.ಕ.ಸಂಸದರೂ ಆಗಿರುವ ಪುತ್ತೂರಿನ ಕುವರ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆ.27ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪರಿಂದ ಅಧಿಕಾರ ಸ್ವೀಕರಿಸಿದ ನಳಿನ್ ಕುಮಾರ್ ಕಟೀಲ್ ಅವರನ್ನು ಆ.28 ರಂದು ಮುಂಜಾನೆ ಬೆಂಗಳೂರು ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಛೇರಿ ಜಗನ್ನಾಥ ಭವನದಲ್ಲಿ ಸುದ್ದಿ ಸಂದರ್ಶಿಸಿದಾಗ ಅವರಾಡಿದ ಆತ್ಮವಿಶ್ವಾಸದ ನುಡಿಗಳಿವು.
ನಳಿನ್ ಕುಮಾರ್ ಕಟೀಲ್ ಮಂಗಳೂರಿನಲ್ಲಿ ಪ್ರತೀದಿನ ಬೆಳಿಗ್ಗೆ 6.30 ಕ್ಕೆ
ಕಟೀಲು ದೇವಸ್ಥಾನಕ್ಕೆ ಹೋಗಿ ದುರ್ಗಾಪರಮೇಶ್ವರಿಗೆ ಕೈ ಮುಗಿದು 7.30 ರ ಒಳಗೆ ಮಂಗಳೂರಿನ ಸರ್ಕ್ಯೂಟ್ ಹೌಸ್‌ಗೆ ಬಂದು ಸಾರ್ವಜನಿಕರಿಗೆ ಲಭ್ಯರಾಗುತ್ತಿದ್ದರು.ಅದೇ ರೀತಿ ಆ.27 ರಂದು ಪಕ್ಷಾಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕೇಶವಕೃಪಾದಲ್ಲಿ ಸಂಘದ ಮಾರ್ಗದರ್ಶನ ಪಡೆದು, ಬಳಿಕ ರಾತ್ರಿ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಹೋಗಿ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರನ್ನು ಭೇಟಿಯಾಗಿ ಮಾತನಾಡಿ ಆಶೀರ್ವಾದ ಪಡೆದು ರಾತ್ರಿ ಬೆಂಗಳೂರಲ್ಲಿ ತಂಗಿ ಆ.28 ರಂದು ಬೆಳಿಗ್ಗೆ ಗಂಟೆ 7.30 ಕ್ಕೆ ಪಕ್ಷದ ಕಛೇರಿಯಲ್ಲಿ ಕಾರ್ಯಕರ್ತರ ಭೇಟಿಗೆ ಸಿದ್ಧರಾಗಿದ್ದರು.ಸುದ್ದಿಯ ಪ್ರಶ್ನೆಗಳಿಗೆ ಉತ್ತರಿಸತೊಡಗಿದ ಅವರು ನಾನು ನಿವೃತ್ತ ಪೂರ್ಣಾವಧಿ ಕಾರ್ಯಕರ್ತ ಬಿ.ಕೆ.ರಮೇಶ್‌ರವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಕಾರ್ಯಕರ್ತನಾಗಿ ಬೆಳೆದವನು. ಸಂಘ ನೀಡಿದ ಜವಾಬ್ದಾರಿಯನ್ನು ಕರ್ತವ್ಯವೆಂದು ಭಾವಿಸಿ ನಿರ್ವಹಿಸುತ್ತಾ ಬಂದ ಕಾರಣ ಪಕ್ಷದ ರಾಜ್ಯಾಧ್ಯಕ್ಷತೆಯ ಜವಾಬ್ದಾರಿಯನ್ನು ಸಂಘಟನೆ ಇಂದು ನೀಡಿದೆ. ಚುನಾವಣೆ ರಾಜಕೀಯಕ್ಕೆ ಬರುವ ಯಾವ ಆಸೆಯೂ ನನಗಿರಲಿಲ್ಲ.ಮೊದಲು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ನನ್ನನ್ನು ಸಂಘಟನೆ ಮಾಡಿತು.ನಂತರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬೇಕೆಂದು ಸೂಚನೆ ನೀಡಿತು.ಎಲ್ಲವನ್ನೂ ಒಪ್ಪಿಕೊಂಡು ಕೆಲಸ ಮಾಡಿದೆ. ಸತತ 3 ಬಾರಿ ಅಭೂತಪೂರ್ವ ಬೆಂಬಲವನ್ನು ಕ್ಷೇತ್ರದ ಮತದಾರರು ನೀಡಿ ನನ್ನನ್ನು ಲೋಕಸಭಾ ಸದಸ್ಯರನ್ನಾಗಿಸಿದರು.ಈಗ ಕೊಡಲ್ಪಟ್ಟಿರುವ ಜವಾಬ್ದಾರಿಯನ್ನು ಕೂಡಾ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.
ಪಕ್ಷ ನಿಷ್ಟವಾಗಿ ಪಕ್ಷವನ್ನು ಕಟ್ಟಬೇಕಾಗುತ್ತದೆ: ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿರುವಾಗ ಪಕ್ಷಾಧ್ಯಕ್ಷತೆ ದೊರೆತಿರುವುದರಿಂದ ಕಾರ್ಯನಿರ್ವಹಣೆ ಸುಲಭವಾಗುತ್ತದೆ ಎಂಬುದು ನಿಜ.ರಾಜ್ಯದಲ್ಲಿ ಪಕ್ಷ ಹೆಚ್ಚು ಸಂಖ್ಯೆಯ ಶಾಸಕರನ್ನು ಹೊಂದಿರುವುದು ನಿಜ.ಆದರೆ “ವೇವ್”  ಆಧಾರದಲ್ಲಿ ಪಕ್ಷ ಬೆಳೆದರೆ ಅದು ಶಾಶ್ವತವಾಗಿರುವುದಿಲ್ಲ.ಅದಕ್ಕಾಗಿ ಪಕ್ಷವನ್ನು ತತ್ವ ಮತ್ತು ಸಿದ್ಧಾಂತದ ಆಧಾರದಲ್ಲಿ ಕಟ್ಟಬೇಕಾಗುತ್ತದೆ. ಆ ಜವಾಬ್ದಾರಿ ನನ್ನ ಮೇಲಿದೆ.ಆದ್ದರಿಂದ ಈ ಜವಾಬ್ದಾರಿ ಹೆಚ್ಚಿನ ಸವಾಲು ಇರುವಂತದ್ದಾಗಿದೆ ಎಂದರು ಕಟೀಲ್.
ನಿಮ್ಮ ಪಕ್ಷದಲ್ಲಿ ಅಧಿಕಾರ ಹಂಚಿಕೆ ಮತ್ತು ಸ್ಥಾನಮಾನ ಹಂಚಿಕೆಯ ವಿಚಾರದಲ್ಲಿ ಸಾಕಷ್ಟು ಅಸಮಾಧಾನಗಳಿವೆ. ಪಕ್ಷದ ರಾಜ್ಯಾಧ್ಯಕ್ಷರಾಗಿ ಇದನ್ನೆಲ್ಲ ಹೇಗೆ ನಿಭಾಯಿಸುತ್ತೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಕಟೀಲ್,

ನಮ್ಮ ಪಕ್ಷದಲ್ಲಿ ಅಸಮಾಧಾನ ಇಲ್ಲ.ಅಭಿಪ್ರಾಯ ಭೇದ ಇದೆ.ಅದು ಅಸಮಾಧಾನವಲ್ಲ.ದೇಶದ ಹಿತ ಹಾಗೂ ಜನರ ಹಿತಕ್ಕಾಗಿ ನಮ್ಮ ಪಕ್ಷ ಕೆಲಸ ಮಾಡುವುದರಿಂದ ಅಭಿಪ್ರಾಯ ಭೇದಗಳನ್ನು ಪರಸ್ಪರ ಚರ್ಚೆಯ ಮೂಲಕ ಏಕಸೂತ್ರಕ್ಕೆ ತರುತ್ತೇವೆ.ಅದನ್ನು ಮಾಡಲು ಪಕ್ಷ ಸಮರ್ಥವಿದೆ ಎಂದರು.ದ.ಕ.ಜಿಲ್ಲೆಗೆ ಸಚಿವ ಸ್ಥಾನ ಸಿಗಬೇಕಿತ್ತು.ಆದರೆ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಅನಿವಾರ್ಯತೆಗಳ ಹಿನ್ನೆಲೆಯಲ್ಲಿ ಸಚಿವ ಸ್ಥಾನ ದೊರೆತಿಲ್ಲ.ನಮ್ಮ ಎಲ್ಲಾ ಶಾಸಕರು ಪರಿಸ್ಥಿಯನ್ನು ಅರಿತವರೇ ಆಗಿದ್ದಾರೆ. ಆದ್ದರಿಂದ ಯಾರಲ್ಲೂ ಅಸಮಾಧಾನಗಳಿಲ್ಲ.ಜಿಲ್ಲೆಯ ಅಭಿವೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡುತ್ತಾರೆ ಎಂದೂ ಕಟೀಲ್ ಹೇಳಿದರು.
ಅಶಿಸ್ತು ಸಹಿಸುವುದಿಲ್ಲ: ಬಿಜೆಪಿ ಅಶಿಸ್ತನ್ನು ಸಹಿಸುವುದಿಲ್ಲ.ಅಧಿಕಾರದಲ್ಲಿ ಲಾಬಿ ಮಾಡುವವರಿಗೆ ಸ್ಥಾನ ಮಾನವನ್ನೇ ಕೊಡುವುದಿಲ್ಲ.ಅದನ್ನು ನೀವು ಈಗಾಗಲೇ ಗಮನಿಸಿದ್ದೀರಿ ಎಂದು ನಾನು ಭಾವಿಸುತ್ತೇನೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ನಾನು ಡಮ್ಮಿ ಎನಿಸುವುದು ಸಾಧ್ಯವೇ ಇಲ್ಲ.ಪಕ್ಷದ ಸಿದ್ಧಾಂತಗಳನ್ನು ಅನುಷ್ಠಾನಕ್ಕೆ ತರುವ ಸರಕಾರದ ಕಾರ್ಯಕ್ರಮಗಳನ್ನು ಕಾರ್ಯಕರ್ತರ ಮೂಲಕ ಜನರಿಗೆ ತಲುಪಿಸುವ ಕಾರ್ಯವನ್ನು ಪಕ್ಷ ಮಾಡಬೇಕು.ಅದಕ್ಕಾಗಿ ನಾನು ಬೀದರ್‌ನಿಂದ ಮಂಗಳೂರು ತನಕ ನಿರಂತರ ಓಡಾಡುತ್ತೇನೆ.ಪಕ್ಷದ ಹಿರಿಯರ ಮತ್ತು ನಾಯಕರ ಸಲಹೆ ಮತ್ತು ಕಾರ್ಯಕರ್ತರ ಅಹವಾಲುಗಳನ್ನು ಸಮೀಕರಿಸುವ ಮಹತ್ವದ ಹೊಣೆಯನ್ನು ಹೊತ್ತು ಎಲ್ಲರೂ ಸೇರಿ ಕೆಲಸ ಮಾಡುತ್ತೇವೆ ಎಂದು ಕಟೀಲ್ ಹೇಳಿದರು.
ಪ್ರತಿ ಮಂಗಳವಾರ ಜಿಲ್ಲೆಯಲ್ಲಿ ಲಭ್ಯ
ದ.ಕ.ಕ್ಷೇತ್ರದ ಸಂಸದನೂ ಆಗಿರುವ ನಾನು ವಾರದ ಪ್ರತಿ ಮಂಗಳವಾರ ಮಂಗಳೂರಿನಲ್ಲಿ ಸಾರ್ವಜನಿಕರ ಭೇಟಿಗೆ ಲಭ್ಯ. ಉಳಿದಂತೆ ವಾರದಲ್ಲಿ ಒಂದು ದಿನ ಬೆಂಗಳೂರಿನಲ್ಲಿ ಪಕ್ಷದ ಕಚೇರಿಯಲ್ಲಿ ಲಭ್ಯವಿರುತ್ತೇನೆ. ಉಳಿದ ಐದು ದಿನಗಳಲ್ಲಿ ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಂಡು ಪಕ್ಷ ಸಂಘಟನೆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇನೆ.
ನಳಿನ್ ಕುಮಾರ್ ಕಟೀಲ್, ರಾಜ್ಯಾಧ್ಯಕ್ಷರು ಬಿಜೆಪಿ
ಅಂಗಾರರಿಗೆ   ಸೂಕ್ತ ಗೌರವ
ಸುಳ್ಯ ಶಾಸಕ ಅಂಗಾರರು ನನಗೂ ಮಾರ್ಗದರ್ಶಕ ಸ್ಥಾನದಲ್ಲಿರುವವರು.ಅವರ ಸರಳತೆ ಮತ್ತು ತತ್ವ ನಿಷ್ಠೆ ನಮ್ಮೆಲ್ಲರಿಗೆ ಮಾದರಿ.ಅವರಿಗೆ ಸೂಕ್ತ ಗೌರವ ಕೊಡುವ ಕಾರ್ಯವನ್ನು ಪಕ್ಷ ಖಂಡಿತವಾಗಿಯೂ ಮಾಡುತ್ತದೆ.ನೀವು ನಿರೀಕ್ಷೆ ಇರಿಸಿಕೊಳ್ಳಬಹುದು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.