ಯು.ಜಿ.ಸಿ ವೃತ್ತಿ ಶಿಕ್ಷಣ ಅಧ್ಯಯನಕ್ಕೆ ಉಜಿರೆಯ ಎಸ್.ಡಿ.ಎಂ.ಕಾಲೇಜು ಆಯ್ಕೆ

ಕರ್ನಾಟಕದ 18 ಕಾಲೇಜುಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಕಾಲೇಜು

ಬೆಳ್ತಂಗಡಿ: ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯು.ಜಿ.ಸಿ.) ದ ಅನುದಾನದೊಂದಿಗೆ ಉಜಿರೆಯಲ್ಲಿರುವ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಮೂರು ವಿಷಯಗಳಲ್ಲಿ ವೃತ್ತಿ ಶಿಕ್ಷಣ ಪದವಿ ತರಗತಿ ಪ್ರಾರಂಭಿಸಲು ಅನುಮತಿ ದೊರಕಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಸತೀಶ್ಚಂದ್ರ ಎಸ್. ತಿಳಿಸಿದ್ದಾರೆ.
ಅವರು  ಉಜಿರೆ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ವೃತ್ತಿಪರ ಕೋರ್ಸ್ ಮೂಲಕ ಜೌದ್ಯೋಗಿಕ ಅವಕಾಶಗಳ ವ್ಯಾಪ್ತಿ ಹೆಚ್ಚಿಸುವ ಉದ್ದೇಶದೊಂದಿಗೆ ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗವು ಮಹತ್ವಕಾಂಕ್ಷಿ ಶ್ಯಕ್ಷಣಿಕ ಯೋಜನೆಯಡಿ ಈ ಯೋಜನೆ ಅನುಷ್ಠಾನ ಮಾಡುತ್ತಿದೆ. ವೃತ್ತಿ ಶಿಕ್ಷಣ ಅಧ್ಯಯನಕ್ಕೆ ಆಯ್ಕೆಯಾದ ದೇಶದ ೩೪೬ ಸಂಸ್ಥೆಗಳಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು( ಸ್ವಾಯತ್ತ) ಸ್ಥಾನ ಪಡೆದುಕೊಂಡಿದ್ದು, ಈ ವರ್ಷ ಆಯ್ಕೆಯಾದ ಕರ್ನಾಟಕ ರಾಜ್ಯದ ೧೮ ಕಾಲೇಜುಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಅನುದಾನಿತ ಕಾಲೇಜು ಉಜಿರೆಯ ಎಸ್.ಡಿ.ಎಂ. ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಜೌದ್ಯೋಗಿಕ ಅವಕಾಶ ಸದುಪಯೋಗಿಸಿಕೊಳ್ಳುವ ಸಾಮರ್ಥ್ಯ ರೂಢಿಸಿ, ಸ್ವಾವಲಂಬನೆಗೆ ಪೂರಕವಾದ ಸ್ನಾತಕ ಪದವಿ ತತ್ಸಮಾನ ವೃತಿಪರ ಕೋರ್ಸ್‌ಗಳ ನಿರ್ವಹಣೆಗಾಗಿ ಯುಜಿಸಿ ನೆರವು ನೀಡಲಿದೆ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಆಶ್ರಯದಲ್ಲಿ ಡಿಜಿಟಲ್ ಮೀಡಿಯಾ ಮತ್ತು ಫಿಲ್ಮ್ ಮೇಕಿಂಗ್, ವಾಣಿಜ್ಯ ವಿಭಾಗದ ಆಶ್ರಯದಲ್ಲಿ ರೀಟೆಲ್ ಆಂಡ್ ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ಆಶ್ರಯದಲ್ಲಿ ಸಾಫ್ಟ್‌ವೇರ್ ಆಂಡ್ ಆಪ್ ಡೆವಲಪ್‌ಮೆಂಟ್ ಕೋರ್ಸ್‌ಗಳನ್ನು ಈ ವರ್ಷವೇ ಆರಂಭಿಸಲು ಯುಜಿಸಿ ಅನುಮತಿ ನೀಡಿದೆ ಎಂದು ತಿಳಿಸಿದರು.
ಮೂರು ವರ್ಷದ ಅವಧಿಯ ಈ ಕೋರ್ಸ್‌ಗಳು ಥಿಯರಿ ಮತ್ತು ಪ್ರಾಯೋಗಿಕ ಅಂಶಗಳನ್ನು ಕೇಂದ್ರೀಕರಿಸಿಕೊಂಡು ಅನುಷ್ಠಾನಗೊಳ್ಳಲಿದೆ. ಶೇ. ೨೫ ರಷ್ಟು ಪಠ್ಯವನ್ನು ತರಗತಿ ಕೋಣೆಗಳಲ್ಲಿ ಬೋಧನೆ ಮಾಡಿದರೆ ಶೇ. ೭೫ ರಷ್ಟು ಪಠ್ಯವನ್ನು ಪ್ರಾಯೋಗಿಕ ಜ್ಞಾನ, ತಾಂತ್ರಿಕ ಪರಿಣತಿ ಹಾಗೂ ಔದ್ಯಮಿಕ ಕ್ಷೇತ್ರಗಳಲ್ಲಿ ಕಲಿಯಬೇಕಾಗುತ್ತದೆ. ಈ ಬಗ್ಯೆ ಈಗಾಗಲೇ ಪ್ರತಿಷ್ಠಿತ ಕಂಪೆನಿಗಳೊಂದಿಗೆ ಕಾಲೇಜು ಒಡಂಬಡಿಕೆ ಮಾಡಿಕೊಂಡಿದೆ. ನಿಗದಿತ ಕೋರ್ಸು ಅವಧಿ ಪೂರ್ಣಗೊಳಿಸುವವರಿಗೆ ಪದವಿ ಪತ್ರ ನೀಡಲಾಗುತ್ತದೆ. ಕೋರ್ಸ್ ಅಧ್ಯಯನ ಪೂರೈಸಿ ಮುಂದುವರೆಸಲಿಚ್ಚಿಸದವರಿಗೆ ಡಿಪ್ಲೋಮಾ ಸರ್ಟಿಫಿಕೇಟ್, ಎರಡು ವರ್ಷದ ಕೋರ್ಸ್ ಅಧ್ಯಯನ ನಡೆಸಿ ಮುಂದುವರೆಸಲಿಚ್ಛಿಸದವರಿಗೆ ಅಡ್ವಾನ್ಸ್‌ಡ್ ಡಿಪ್ಲೋಮಾ ಪದವಿ ಪ್ರಮಾಣ ಪತ್ರ ನೀಡಲಾಗುತ್ತದೆ. ಅರ್ಧಕ್ಕೆ ನಿಲ್ಲಿಸದೇ ಮೂರು ವರ್ಷಗಳ ಕಾಲ ಕೋರ್ಸ್ ಅಧ್ಯಯನ ಮಾಡುವವರಿಗೆ ಸ್ನಾತಕ ಪದವಿ, ತತ್ಸಮಾನ ಪದವಿ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಪ್ರತಿ ಕೋರ್ಸ್‌ಗೆ ಯು.ಜಿ.ಸಿ. ರೂ. 1.87 ಕೋಟಿ ಅನುದಾನ ನೀಡುತ್ತದೆ. ಈಗಾಗಲೇ ಚಾಲ್ತಿಯಲ್ಲಿರುವ ವೃತ್ತಿಪರ ಕೋರ್ಸ್‌ಗಳ ತರಗತಿಗಳಿಗಿಂತ ಈ ಯೋಜನೆಯಡಿ ನಿರ್ವಹಿಸಲ್ಪಡುವ ತರಗತಿಗಳು ಭಿನ್ನವಾಗಿರುತ್ತವೆ. ತರಗತಿಗಳ ಚರ್ಚೆ ಆಯಾ ಜೌಧ್ಯಮಿಕ ವಲಯದ ಅಗತ್ಯಗಳನ್ನು ದೃಷ್ಟಿಯಲ್ಲಿರಿಸಿಕೊಂಡಿರುತ್ತದೆ. ಆ ಮೂಲಕ ಸಾರ್ವತ್ರಿಕ ಪ್ರಯೋಜನ ಸಾಧ್ಯವಾಗುವಂತೆ ತರಬೇತಿಯನ್ನು ವಿನ್ಯಾಸಗೊಳಿಸಲಾಗುವುದು. ಕಾರ್ಯಕ್ಷೇತ್ರದ ಪ್ರಯೋಗಳು ಮತ್ತು ಯಶಸ್ವಿ ಹೆಜ್ಜೆಗಳ ಆಧಾರದಲ್ಲಿ ಮಾರ್ಗದರ್ಶನ ಒದಗಿಸಲಾಗುವುದು ಈ ವೃತ್ತಿಪರ ಕೋರ್ಸ್‌ಗಳು ಸಮಗ್ರವಾಗಿ ಶೈಕ್ಷಣಿಕ ಉದ್ದೇಶ ಈಡೇರಿಸಿಕೊಳ್ಳುವುದಕ್ಕೆ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡಲಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿರುವ ಎಸ್.ಡಿ.ಎಂ. ಕಾಲೇಜಿಗೆ ಯು.ಜಿ.ಸಿ. ಹೊಸ ವೃತ್ತಿ ಶಿಕ್ಷಣ ಪದವಿ ತರಗತಿಗಳನ್ನು ಪ್ರಾರಂಭಿಸಲು ಅನುಮತಿ ನೀಡಿರುವ ಕುರಿತು ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆ, ಉಪಾಧ್ಯಕ್ಷರುಗಳಾದ ಪ್ರೊ. ಎಸ್. ಪ್ರಭಾಕರ್ ಮತ್ತು ಡಿ. ಸುರೇಂದ್ರ ಕುಮಾರ್ ಹಾಗೂ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್ ಮತ್ತು ಡಾ. ಬಿ. ಯಶೋವರ್ಮ ಸಂತಸ ವ್ಯಕ್ತಪಡಿಸಿದ್ದಾರೆ. ನೂತನ ಕೋರ್ಸ್‌ಗಳಿಗೆ ಈಗಾಗಲೇ ಪ್ರವೇಶ ಪ್ರಕ್ರಿಯೆ ಪ್ರಾರಂಭಗೊಂಡಿದ್ದು ಆಸಕ್ತ ವಿದ್ಯಾರ್ಥಿಗಳು ಕಾಲೇಜು ಕಾರ್ಯಾಲಯ ಹಾಗೂ ಹೆಚ್ಚಿನ ಮಾಹಿತಿಗಾಗಿ ಪ್ರೊ. ಸುವೀರ್ ಜೈನ್ ( 9880088705)ಇವರನ್ನು ಸಂಪರ್ಕಿಸಬಹುದು.
ಪತ್ರಿಕಾಗೋಷ್ಠಿಯಲ್ಲಿ ನೂತನ ವೃತ್ತಿ ಶಿಕ್ಷಣ ಕೋರ್ಸ್‌ಗಳ ಸಂಯೋಜಕ ಪ್ರೊ. ಸುವೀರ್ ಜೈನ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಭಾಸ್ಕರ ಹೆಗ್ಡೆ ಮತ್ತು ಉಪನ್ಯಾಸಕ ಹಂಪೇಶ್ ಉಪಸ್ಥತರಿದ್ದು ಪೂರಕ ಮಾಹಿತಿ ನೀಡಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.