ಕೊಕ್ಕಡ ಎಂಡೋ ಪಾಲನಾ ಕೇಂದ್ರದಲ್ಲಿ ಅವ್ಯವಸ್ಥೆ ದೂರು: ಶಾಸಕರ ಭೇಟಿ

ಕೊಕ್ಕಡದಲ್ಲಿರುವ ಎಂಡೋಸಲ್ಫಾನ್ ಪಾಲನಾ ಕೇಂದ್ರದಲ್ಲಿ ಎಂಡೋಸಲ್ಫಾನ್ ಸಂತ್ರಸ್ಥ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ಎಂಡೋ ಸಂತ್ರಸ್ಥ ಪೋಷಕರು ಪಾಲನಾ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಇಂದು(ಆ.3) ನಡೆದಿದ್ದು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ಸ್ಥಳಕ್ಕೆ ಭೇಟಿ ನೀಡಿದರು.

ಎಂಡೋ ಪಾಲನಾ ಕೇಂದ್ರದಲ್ಲಿರುವ ಎಂಡೋ ಸಂತ್ರಸ್ಥ ಮಕ್ಕಳ ಕೈಯಿಂದ ಕಸಗುಡಿಸುವ, ನೆಲ ಒರೆಸುವ, ಶೌಚಾಲಯ ಕ್ಲೀನ್ ಮಾಡುವ ಎಲ್ಲಾ ಕಾರ್ಯಗಳನ್ನು ಮಾಡಿಸುತ್ತಿದ್ದಾರೆ ಎನ್ನುವ ಆರೋಪ ಎಂಡೋ ಸಂತ್ರಸ್ಥ ಪೋಷಕರದ್ದಾಗಿದ್ದು ಈ ಬಗ್ಗೆ ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯಿಂದ ಎಂಡೋಪಾಲನಾ ಕೇಂದ್ರವನ್ನು ಹಿಂದೆ ಪಡೆದುಕೊಳ್ಳಬೇಕು ಹಾಗೂ ಈ ಹಿಂದೆ ಇದ್ದ ಸಂಸ್ಥೆ ಅಥವಾ ಸರ್ಕಾರವೇ ನೇರವಾಗಿ ಈ ಎಂಡೋಪಾಲನಾ ಕೇಂದ್ರವನ್ನು ನಿರ್ಮಿಸಬೇಕೆಂದು ಪ್ರತಿಭಟನಾ ನಿರತ ಪೋಷಕರು ಸರಕಾರವನ್ನು ಒತ್ತಾಯಿಸಿದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಎಂಡೋ ಸಂತ್ರಸ್ಥ ಕೇಂದ್ರದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಸೇರಿದಂತೆ ಹಲವು ನ್ಯೂನತೆಗಳನ್ನು ಖುದ್ದು ಪರಿಶೀಲನೆ ನಡೆಸಿದ ಶಾಸಕರು ಅಧಿಕಾರಿಗಳಿಗೆ ಈ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದರು. ವರದಿಯನ್ನು ತಕ್ಷಣವೇ ಜಿಲ್ಲಾಧಿಕಾರಿಗೆ ಸಲ್ಲಿಸುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಹಾಗೂ ಈ ಬಗ್ಗೆ ಸರಕಾರದ ಗಮನಕ್ಕೆ ತಂದು ಎಂಡೋಸಲ್ಫಾನ್ ಪಾಲನಾ ಕೇಂದ್ರವನ್ನು ಸರಕಾರವೇ ವಹಿಸಿಕೊಳ್ಳುವಂತೆ ಒತ್ತಡ ಹೇರುವುದಾಗಿಯೂ ಭರವಸೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.