ತುಳುನಾಡಲ್ಲಿ ಆಟಿ ಅಮವಾಸ್ಯೆಯ ಸೊಬಗು

ದೃತಿ.ಅಂಚನ್  ಪ ತ್ರಿಕೋದ್ಯಮ ವಿಭಾಗ ಎಸ್‌ಡಿಎಂ ಕಾಲೇಜು ಉಜಿರೆ

ಆಟಿ ತಿಂಗಳು ಎಂದಾಕ್ಷಣ ಯಾವುದೇ ಶುಭ ಸಮಾರಂಭಗಳು ನಡೆಯುವುದಿಲ್ಲ ಎಂಬ ವಾಡಿಕೆ ಇದೆ. ಮನೆ ಕಟ್ಟುವುದು, ವಾಹನ ಖರೀದಿ, ಮದುವೆ, ಆಸ್ತಿ ಖರೀದಿ ಇತ್ಯಾದಿಗಳನ್ನು ನಿಷೇಧಿಸುತ್ತಾರೆ. ಆಷಾಡ ಅಥವಾ ಆಟಿ ತಿಂಗಳು ತುಳುನಾಡಿನ ಜಡಿಮಳೆಯ ಕಾಲ. ಈ ಕಾಲದಲ್ಲಿ ಹೆಚ್ಚಿನವರು ಮನೆಯೊಳಗೆ ಬೆಚ್ಚಗೆ ಕೂರಲು ಇಷ್ಟ ಪಡುತ್ತಾರೆ. ಆಟಿ ತಿಂಗಳಿನಲ್ಲಿ ಹೊಸದಾಗಿ ಮದುವೆಯಾದ ಹೆಣ್ಣು ಮಗಳು ತವರು ಮನೆಗೆ ಹೋಗಿ ಕೂರುವ ಸಂಪ್ರದಾಯವಿದೆ. ತುಳುನಾಡಿನ ಜಾನಪದ ಸಾಂಸ್ಕೃತಿಕ ಆಚರಣೆಗಳಲ್ಲಿ ಆಟಿ(ಆಷಾಡ)ತಿಂಗಳಿಗೆ ವಿಶಿಷ್ಟ ಸ್ಥಾನ-ಮಾನ ಇದೆ.
ಆಟಿ ತಿಂಗಳಿನಲ್ಲಿ ರೋಗ ರುಜಿನಗಳು ಸಾಮಾನ್ಯ. ಇದನ್ನು ಹೋಗಲಾಡಿಸಲೆಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟಿ ಕಳೆಂಜನ ಪ್ರವೇಶ ಆಗುತ್ತದೆ. ಕಳೆ ಎಂದರೆ ತುಳುವಿನಲ್ಲಿ ಹೋಗಲಾಡಿಸುವುದು ಎಂದರ್ಥ. ಶಿವನು ಜನರ ರೋಗಗಳನ್ನು ನಿವಾರಿಸಲು ಕೈಲಾಸದಿಂದ ಕಳುಹಿಸಿದ ಈ ದೈವಿಕ ಶಕ್ತಿಯೇ ಆಟಿ ಕಳೆಂಜ ಎಂದು ಹೇಳುತ್ತಾರೆ. ಮನುಷ್ಯರಿಗೆ, ಜಾನುವಾರುಗಳಿಗೆ, ಫಸಲಿಗೆ ಬರುವ ರೋಗವನ್ನು ಈ ಆಟಿ ಕಳೆಂಜ ಹೋಗಲಾಡಿಸುತ್ತಾನೆ ಎಂಬ ಪ್ರತೀತಿ ಇದೆ. ಆಟಿ ಕಳೆಂಜನ ವೇಷ ಭೂಷಣ ಪುತ್ತೂರು, ಬಂಟ್ವಾಳ, ಪರಿಸರಗಳಲ್ಲಿ ಭಿನ್ನ ಭಿನ್ನವಾಗಿದ್ದರೂ ರೋಗ ರುಜಿನಗಳನ್ನು ಕಳೆದು ಸಮೃದ್ಧಿಯನ್ನುಂಟು ಮಾಡುವ ಕಲಿ ಪುರುಷನೆಂಬ ನಂಬಿಕೆ ಆಚರಣೆಯಿಂದ ಈ ಕಲೆ ಇಂದಿಗೂ ಜೀವಂತವಾಗಿದೆ.
ಆಟಿ ತಿಂಗಳಿನಲ್ಲಿ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಆಟಿ ಅಮವಾಸ್ಯೆಯ ದಿನ ಕಷಾಯಾ ಕುಡಿಯುವ ಪದ್ದತಿಯೂ ಇದೆ. ಈ ಕಷಾಯಾವೂ ಹಾಲೆ ಮರದ ತೊಗಟೆಯಿಂದ ಮಾಡುತ್ತಾರೆ. ಆಟಿ ಅಮವಾಸ್ಯೆಯ ದಿನದಂದು ಸೂರ್ಯೋದಯಕ್ಕೂ ಮುನ್ನ ಹಾಲೆ ಮರದ ತೊಗಟೆಯನ್ನು ಕಲ್ಲಿನಿಂದ ಜಜ್ಜಿ ತಂದು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಾರೆ. ಈ ಕಷಾಯಕ್ಕೆ ರೋಗಗಳನ್ನು ನಿವಾರಿಸುವ ಶಕ್ತಿ ಇದೆ. ಹಾಲೆ ಮರದ ಕಷಾಯವೂ ಜಾನಪದ ಔಷಧಿಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.
ಆಟಿ ತಿಂಗಳ ಇನ್ನೊಂದು ವಿಶೇಷವೆಂದರೆ ಹಳ್ಳಿ ಆಹಾರಗಳು. ಈ ತಿಂಗಳು ಮಳೆಗಾಲವಾದ್ದರಿಂದ ಹಳ್ಳಿಯ ಜನರು ಕೆಲಸದಿಂದ ಸ್ವಲ್ಪ ದಿನ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಾರೆ. ಹಾಗಾಗಿ ಆಟಿಯಲ್ಲಿ ವಿಶೇಷವಾಗಿ ಹಳ್ಳಿಯಲ್ಲೇ ಸಿಗುವ ಆಹಾರಗಳಾದ ಅರಳಿನ ಎಲೆಯ ಸೊಪ್ಪು, ಹಲಸಿನ ಬೀಜದ ಸುಕ್ಕ, ಮುಳ್ಳು ಸೌತೆ ಕಡುಬು, ಕೆಸುವಿನ ಎಲೆಯ ಪತ್ರೊಡೆ ಇತ್ಯಾದಿ ತಿನಸುಗಳನ್ನು ತಯಾರಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.