ಬೆಳ್ತಂಗಡಿ: ಡೆಂಗ್ಯೂ ಜ್ವರ ವೇಗವಾಗಿ ಪಸರಿಸುತ್ತಿರುವುದರಿಂದ ಮುನ್ನೆಚ್ಚರಿಕೆ ವಹಿಸಬೇಕಿದೆ. ಸ್ವಚ್ಛತೆಯೆಡೆಗೆ ಸಂಕಲ್ಪ ತೊಟ್ಟಲ್ಲಿ ಮಾತ್ರ ಕಾಯಿಲೆಯ ಸಂಪೂರ್ಣ ನಿರ್ಮೂಲನೆ ಸಾಧ್ಯ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಮಾಧ್ಯಮ ದೊಂದಿಗೆ ಮಾತನಾಡಿ, ಡೆಂಗ್ಯೂ ಅನೇಕರ ಜೀವ ಹಾನಿಗೆ ಕಾರಣವಾಗಿದೆ. ತ್ಯಾಜ್ಯ, ಒಡೆದ ಪಾತ್ರೆ, ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಎಸೆಯುವುದರಿಂದ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ ಹರಡುತ್ತಿರುವುದು ದೃಢಪಟ್ಟಿದೆ. ರೋಗವನ್ನು ನಾವೇ ಆಹ್ವಾನಿಸಿಕೊಳ್ಳುವುದನ್ನು ದೂರವಾಗಿಸುವುದೇ ಸ್ವಚ್ಛ ಭಾರತ ಆಂದೋಲನದ ಉದ್ದೇಶ. ಅನಕ್ಷರಸ್ಥರಿಂದ ಹಿಡಿದು ವಿದ್ಯಾವಂತರವರೆಗೆ ಸಣ್ಣ ಮಕ್ಕಳಿಂದ ವಯೋವೃದ್ಧರವರೆಗೆ ಸ್ವಚ್ಛತೆ ಸಂಕಲ್ಪ ತೊಡಬೇಕಿದೆ ಎಂದರು.
ಡೆಂಗ್ಯೂ ನಿರ್ಮೂಲನೆ ಸಾಧ್ಯವಿದೆ. ಮನೆ ಸುತ್ತಮುತ್ತ ಪರಿಸರ ಸ್ವಚ್ಛವಾಗಿಡುತ್ತೇವೆ. ಎಲ್ಲೂ ನೀರು ನಿಲ್ಲದಂತೆ ಕ್ರಿಮಿಗಳು ಉತ್ಪತ್ತಿಯಾಗುವ ಸಂದರ್ಭ ತಪ್ಪಿಸುತ್ತೇವೆ ಎಂದು ನಾವು ಸಂಕಲ್ಪ ಮಾಡಿದರೆ ನೆರೆಕರೆ ಗ್ರಾಮವನ್ನು ಆರೋಗ್ಯವಾಗಿಡಲು ಸಾಧ್ಯವಿದೆ ಎಚ್ಚರಿಕೆಯ ಗಂಟೆ ಮೊಳಗಿದೆ, ನಿರ್ಲಕ್ಷಸದಿರಿ ಎಂದು ಕರೆ ನೀಡಿದ್ದಾರೆ.