ತಾಲೂಕಿನಲ್ಲಿ 23 ಮಂದಿಗೆ ಬಾಧಿಸಿದ್ದ ಡೆಂಗ್ಯೂ

ಅಲ್ಲಲ್ಲಿ ಶಂಕಿತ ಪ್ರಕರಣಗಳು ಮತ್ತೆ ಮತ್ತೆ ಪತ್ತೆ : ವಾಹಿನಿ ವರದಿಗಾರರಿಬ್ಬರು ಆಸ್ಪತ್ರೆಗೆ ದಾಖಲು

ಬೆಳ್ತಂಗಡಿ: ಮುಂಗಾರಿನ ಆಗಮನದೊಂದಿಗೆ ಕರಾವಳಿಗೆ ಕಾಲಿಡುವ ರೋಗವಾಗಿದೆ ಡೆಂಗ್ಯೂ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರ ತನಕ ಹರಡುವ ಈ ಡೆಂಗ್ಯೂ ಜ್ವರವು ಕರಾವಳಿಯಲ್ಲಿ ಓರ್ವ ಯುವ ಪತ್ರಕರ್ತ ಸಹಿತ ಒಟ್ಟು3 ಮಂದಿಯನ್ನು ಬಲಿ ಪಡೆದುಕೊಂಡಿದೆ. ಬೆಳ್ತಂಗಡಿ ತಾಲ್ಲೂಕಿನಲ್ಲೇ ಈಗಾಗಲೇ23 ಮಂದಿಯ ರಕ್ತದ ಮಾದರಿಯ ಎಲಿಜಾ ಪರೀಕ್ಷೆಯಲ್ಲಿ ರೋಗ ದೃಢಪಟ್ಟಿತ್ತಾದರೂ ಇದೀಗ ಅವರೆಲ್ಲರೂ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ.
ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಟಿ ಸೆಬಾಸ್ಟಿಯನ್ ಅವರು ತೀವ್ರ ಜ್ವರದ ಬಳಿಕ ರಕ್ತದಲ್ಲಿ ಪ್ಲೇಟ್‌ಲೆಟ್ ಕೌಂಟ್ ಗಣನೀಯ 29 ಸಾವಿರಕ್ಕೆ ಇಳಿಕೆಯಾದ ಪ್ರಕರಣದಲ್ಲಿ ಅವರು ಮಂಗಳೂರಿನಲ್ಲಿ ಚಿಕಿತ್ಸೆ ಪಡೆದು ಚೇತರಿಸಿ ಮರಳಿದ್ದಾರೆ. ಇದಾದ ಬೆನ್ನಿಗೆ ಪಡಂಗಡಿ ಗ್ರಾ.ಪಂ ಉಪಾಧ್ಯಕ್ಷ ಸಂತೋಷ್ ಕುಮಾರ್ ಜೈನ್ ಅವರ ಪತ್ನಿ ಸೇರಿದಂತೆ ಜಿಲ್ಲೆ ಹಾಗೂ ತಾಲೂಕಿನ ವಿವಿಧ ಆಸ್ಪತ್ರೆಗಳಲ್ಲಿ ತೀವ್ರ ಜ್ವರಕ್ಕೆ ಒಳರೋಗಿಗಳಾಗಿ ದಾಖಲಾದ ರೋಗಿಗಳ ರಕ್ತದ ಮಾದರಿಯನ್ನು ಎಲಿಜಾ ಪರೀಕ್ಷೆಗೊಳಪಡಿಸಿದಾಗ 23 ಮಂದಿಗೆ ಪಾಸಿಟಿವ್ ಬಂದಿದ್ದು ಅವರೆಲ್ಲರೂ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ತಿಳಿಸಿದ್ದಾರೆ.

ಶಂಕಿತ ಪ್ರಕರಣಗಳು ದಾಖಲು:
ತಾಲೂಕು ಆರೋಗ್ಯಾಧಿಕಾರಿ ಕಚೇರಿ ಮಾಹಿತಿ ಪ್ರಕಾರ ತಾಲೂಕಿನ ಪಟ್ರಮೆ, ವೇಣೂರು, ಕಣಿಯೂರು, ಪಡಂಗಡಿ, ನಾರಾವಿ ಮೊದಲಾದೆಡೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಶಂಕಿತ ಪ್ರಕರಣಗಳು ಕಂಡು ಬಂದಿವೆ. ಅವರ ರಕ್ತ ಪರೀಕ್ಷೆ ಮಾಡಲಾಗಿದ್ದು ಆರೋಗ್ಯದ ಬಗ್ಗೆ ನಿಗಾ ವಹಿಸಲಾಗಿದೆ.

ವಾಹಿನಿ ವರದಿಗಾರರಿಬ್ಬರನ್ನೂ ಮಂಗಳೂರು ಆಸ್ಪತ್ರೆಗೆ ರವಾನೆ: ಮಂಗಳೂರಿನಲ್ಲಿ ಖಾಸಗಿ ವಾಹಿನಿ ವರದಿಗಾರರೊಬ್ಬರು ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಮೃತಪಟ್ಟ ಬೆನ್ನಿಗೇ ಬೆಳ್ತಂಗಡಿಯಲ್ಲಿ ವಾಹಿನಿ ವರದಿಗಾರರಾದ ಕಿಶನ್ ಮತ್ತು ನಿಖಿಲ್ ಎಂಬಿಬ್ಬರು ಶಂಕಿತ ಜ್ವರಕ್ಕೆ ತುತ್ತಾಗಿ ಉಜಿರೆ ಎಸ್‌ಡಿಎಂ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಜು. 23 ರಂದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದರು. ಇಬ್ಬರ ಆರೋಗ್ಯವೂ ಸ್ಥಿರವಾಗಿದ್ದು ಹೆಚ್ಚಿನ ಜಾಗರೂಕತೆಗಾಗಿ ಅವರನ್ನು ಮಂಗಳೂರಿನ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಅವರ ಆರೋಗ್ಯದ ಬಗ್ಗೆ ಸ್ವತಃ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ವಿಚಾರಿಸಿದ್ದು ನಿಗಾ ವಹಿಸುವಂತೆ ವೈದ್ಯಾಧಿಕಾರಿ ಗಳಿಗೆ ನಿರ್ದೇಶನ ನೀಡಿದ್ದಾರೆ.

ನಿರ್ಲಕ್ಷ್ಯ ತೋರಿದರೆ ಅಪಾಯ
1953-1954ರ ಅವಧಿಯಲ್ಲಿ ಫಿಲಿಪೈನ್‌ನಿಂದ ಈ ಸಾಂಕ್ರಾಮಿಕ ರೋಗವು ಭಾರತಕ್ಕೆ ಬಂದಿದೆಯೆಂದು ಹೇಳುವುದಾದರೂ,1970 ರಲ್ಲಿ ಭಾರತದಲ್ಲಿ ಡೆಂಗ್ಯೂ ಜ್ವರದ ಅಪಾಯವನ್ನು ಬೆಂಗಳೂರಿನಲ್ಲಿ ಮೊದಲ ಬಾರಿಗೆ ಗುರುತಿಸಲಾಯಿತು. ಹೆಮರಾಜಿಕ್ ಜ್ವರ, ಡೆಂಗೀ ಶಾಕ್ ಸಿಂಡ್ರೋಮ್ 1993 ರಲ್ಲಿ ಮೊದಲ ಬಾರಿಗೆ ವರದಿಯಾಯಿತು. ಡೆಂಗಿ ಈಡಿಸ್ ಎಂಬ ಸೊಳ್ಳೆಗಳಿಂದ ಹರಡುವ ಸೋಂಕು ಹೂವಿನ ಕುಂಡ, ಬಿಸಾಕಿದ ಟಯರ್, ಹಳೆಯ ಎಣ್ಣೆ ಡ್ರಮ್, ನೀರು ಸಂಗ್ರಹಿಸುವ ತೊಟ್ಟಿ ಇವುಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತದೆ. ಆದ್ದರಿಂದಲೇ ಮಳೆಗಾಲದಲ್ಲಿ ಸೋಂಕು ಹೆಚ್ಚಾಗಿ ಹರಡುತ್ತದೆ.ಆದ್ದರಿಂದ ಇಂತಹ ಜಾಗಗಳನ್ನು ಶುಚಿಗೊಳಿಸಿ,ಸೊಳ್ಳೆ ಮೊಟ್ಟೆ ಇಡದಂತೆ ಜಾಗೃತಿ ವಹಿಸಬೇಕು. ಸೊಳ್ಳೆಗಳನ್ನು ತಡೆಯಲು ಕಿಟಕಿ, ಬಾಗಿಲುಗಳಿಗೆ ನೆಟ್ ಅಳವಡಿಸುವ ಮೂಲಕ ಎಚ್ಚರ ವಹಿಸುವುದು ಅಥವಾ ಸೊಳ್ಳೆ ನಾಶಕ ಬಳಸುವುದು.

ಡೆಂಗ್ಯೂ ಜ್ವರ ಪೀಡಿತರು ಪಾಲಿಸಬೇಕಾದ ಎಚ್ಚರಿಕೆಗಳು
ಡೆಂಗ್ಯೂ ಲಕ್ಷಣಗಳು ಕಾಣಿಸಿಕೊಂಡಾಗ ದಿನಕ್ಕೆ2-3 ಎಳನೀರು ಸೇವನೆ ಇರಲಿ. ಇದು ದೇಹಕ್ಕೆ ಪುಷ್ಟಿ ನೀಡುತ್ತದೆ. ಪಪ್ಪಾಯಿ ಮರದ ಎಲೆಯನ್ನು ಅರೆದು ಅದರ ರಸವನ್ನು ಚಮಚದಷ್ಟು ಸೇವಿಸಿದರೆ ಪ್ಲೇಟ್‌ಲೆಟ್ ಅಧಿಕಗೊಳ್ಳುವುದು. ಪಪ್ಪಾಯಿ ಸೇರಿದಂತೆ ಹಣ್ಣುಗಳ ಸೇವನೆ, ಗಂಜಿ ಸೇವನೆ, ಸಾಮಾನ್ಯ ಟೀಯ ಬದಲು ಮಸಾಲ ಟೀ ತಯಾರಿಸಿ ಕುಡಿಯುವುದು, ನಿಂಬೆ ಜ್ಯೂಸ್ ಸೇವನೆ ಉತ್ತಮವಾಗಿದೆ.
ರೋಗ ಲಕ್ಷಣಗಳು: ತೀವ್ರ ತಲೆ ನೋವು, ಕಣ್ಣು ನೋವು, ಗಂಟು ಮತ್ತು ಸ್ನಾಯು ನೋವು, ಹಸಿವಾಗದಿರುವುದು, ಉದರ ಅಸ್ವಸ್ಥತೆ, ತುರಿಕೆ, ರೋಗಿಗಳಿಗೆ 103 ಡಿಗ್ರಿಗಿಂತ ಹೆಚ್ಚಿನ ಜ್ವರ, ಚಿಕ್ಕ ಮಕ್ಕಳಿಗೆ ಶೀತ, ಬೇಧಿ, ತುರಿಕೆ, ರೋಗಿಯ ದೇಹದ ರಕ್ತಕಣದಲ್ಲಿ ಪ್ಲೇಟ್ಲೆಟ್ ಇಳಿಕೆಯಾಗುವುದು

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.