ಬೆಳ್ತಂಗಡಿ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಜು. 21 ರಂದು ಬೆಳ್ತಂಗಡಿ ಜೇಸಿ ಭವನದ ಸಭಾಂಗಣದಲ್ಲಿ 11 ನೇ ವರ್ಷದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ದಾನಗಳ ಪೈಕಿ ರಕ್ತದಾನ ಅತ್ಯಮೂಲ್ಯ ದಾನವಾಗಿದ್ದು ಕೃತಕವಾಗಿ ಸೃಷ್ಟಿ ಮಾಡಲಾಗದ ರಕ್ತವನ್ನು ಇನ್ನೊಂದು ಜೀವಕ್ಕೆ ಮರುಜನ್ಮ ಕೊಡುವ ರೀತಿಯಲ್ಲಿ ದಾನವಾಗಿ ಕೊಡುವ ಇದಕ್ಕಿಂತ ದೊಡ್ಡ ದಾನ ಬೇರೊಂದಿಲ್ಲ. ಆದ್ದರಿಂದ ಆಸಕ್ತ ರಕ್ತದಾನಿಗಳು, ಹಾಗೂ ಯುವ ಜನತೆ ಈ ಬಗ್ಗೆ ಭಯಮುಕ್ತರಾಗಿ ಅತ್ಯಂತ ಸಹಜ ಪ್ರಕ್ರಿಯೆಯಾಗಿರುವ ರಕ್ತದಾನ ಕಾರ್ಯದಲ್ಲಿ ತೊಡಗಿಸಿಕೊಂಡು ಶಿಬಿರ ಯಶಸ್ವಿಗೊಳಿಸಬೇಕಾಗಿ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷರೂ ಆಗಿರುವ ನ.ಪಂ ಸದಸ್ಯ ಜಗದೀಶ್ ಡಿ ಪತ್ರಿಕಾ ಗೋಷ್ಠಿಯಲ್ಲಿ ಕೇಳಿಕೊಂಡಿದ್ದಾರೆ.
ಪ್ರಾದೇಶಿಕ ರಕ್ತ ಪೂರಣ ಕೇಂದ್ರ ವೆನ್ಲಾಕ್ ಆಸ್ಪತ್ರೆ ಮಂಗಳೂರು, ಜೇಸಿಐ ಬೆಳ್ತಂಗಡಿ ಮಂಜುಶ್ರೀ, ಮತ್ತು ಜೇಸಿರೆಟ್ ಮಹಿಳಾ ವಿಭಾಗ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕ, ಬೆಳ್ತಂಗಡಿ ಆರಕ್ಷಕ ಠಾಣೆ ಸಂಸ್ಥೆಗಳು ಇದರಲ್ಲಿ ಕೈ ಜೋಡಿಸಿದ್ದು ೭೫ ಯುನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಿಸಲಾಗಿದೆ ಎಂದರು. ಗೋಷ್ಠಿಯಲ್ಲಿ ಔಷಧ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಕೇಶವ ಭಟ್ ಉಜಿರೆ, ಕೋಶಾಧಿಕಾರಿ ಗಣಪತಿ ಭಟ್ ಬೆಳ್ತಂಗಡಿ, ನಗರ ಕಾರ್ಯದರ್ಶಿ ಚಂದ್ರಶೇಖರ್, ಜೇಸಿಐ ಅಧ್ಯಕ್ಷ ಪ್ರಶಾಂತ್ ಲಾಯಿಲ ಉಪಸ್ಥಿತರಿದ್ದರು.