ಮಲವಂತಿಗೆ: ಇಲ್ಲಿಯ ಗ್ರಾ.ಪಂ ವ್ಯಾಪ್ತಿಯ ಕರಿಂದೂರು ಎಂಬಲ್ಲಿ ಕೃಷಿಕರೋರ್ವರ ಅಡಿಕೆ ತೋಟಕ್ಕೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಬಂದ ಕಾಡಾನೆಗಳ ಹಿಂಡು ದಾಳಿ ನಡೆಸಿ ಕೃಷಿ ನಾಶಮಾಡಿದ ಘಟನೆ ವರದಿಯಾಗಿದೆ.
ಕರಿಂದೂರು ನಿವಾಸಿ ಗೋಪಾಲ ಗೌಡ ಎಂಬವರಿಗೆ ಸೇರಿದ ಅಡಿಕೆ ತೋಟಕ್ಕೆ ಕಾಡಿನಿಂದ ಬಂದು ಕಾಡಾನೆಗಳ ಹಿಂಡು ದಾಳಿ ನಡೆಸಿ, ಇಳುವರಿ ಕೊಡುತ್ತಿರುವ ಸುಮಾರು 75 ಅಡಿಕೆ ಮರ ಹಾಗೂ ಒಂದು ತೆಂಗಿನ ಮರವನ್ನು ಧರೆಗುರುಳಿಸಿ ನಾಶಪಡಿಸಿವೆ. ಈ ಘಟನೆಯಿಂದ ಗೋಪಾಲ ಗೌಡರಿಗೆ ಸುಮಾರು ರೂ.3 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ.
ಈ ಪ್ರದೇಶದಲ್ಲಿ ಕಾಡಾನೆ, ಹುಲಿ, ಕಾಡುಕೋಣಗಳು ಓಡಾಡುತ್ತಿದ್ದು, ಆಗಾಗ ಇಲ್ಲಿಯ ರೈತರ ಅಡಿಕೆ, ತೆಂಗು, ಬಾಳೆ ಕೃಷಿ ತೋಟಗಳಿಗೆ ನುಗ್ಗಿ ಬೆಳೆಯನ್ನು ನಾಶ ಮಾಡುತ್ತಿದೆ. ಇದರಿಂದಾಗಿ ಕೃಷಿಕರು ಭಯಬೀತರಾಗುತ್ತಿದ್ದು, ಮಾಡಿದ ಕೃಷಿಯೂ ಕೈಗೆ ಸಿಗದೆ, ಜೀವನ ನಿರ್ವಹಣೆಗೂ ಸಮಸ್ಯೆಗಳು ಎದುರಾಗಿ ಚಿಂತಿತರಾಗಿದ್ದಾರೆ.
ಕಾಡಾನೆಗಳು ದಾಳಿ ಮಾಡಿದ ಕರಿಯಂದೂರು ಪ್ರದೇಶಕ್ಕೆ ಜು.16ರಂದು ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಬೆಳೆ ನಷ್ಟದ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.