ಕಳಿಯ: ಇಲ್ಲಿಯ ಬೊಳ್ಳುಕಲ್ಲು– ಎರುಕಡಪ್ಪು– ಕೊಯ್ಯೂರು ಜಿ.ಪಂ. ರಸ್ತೆಯು ತೀರಾ ಹದಗೆಟ್ಟಿದ್ದು, ಕೆಸರುಮಯವಾಗಿದೆ. ಈ ಭಾಗದ ಶಾಲಾ ಕಾಲೇಜು ಮಕ್ಕಳು, ನಾಗರಿಕರು ಹಾಗೂ ಕೃಷಿಕರು ಸಂಚಾರಕ್ಕೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಸದ್ರಿ ರಸ್ತೆಯು ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಸೇರಿದ ಕಾರಣ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ಶಾಸಕರು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ, ಯಾವುದೇ ರೀತಿಯಲ್ಲಿ ಸ್ಪಂದಿಸದೇ ಇರುವುದರಿಂದ ನಾಗರಿಕರು, ಕೃಷಿಕರು ಮತ್ತು ವಿದ್ಯಾರ್ಥಿಗಳು ಕಳಿಯ ಗ್ರಾ.ಪಂ.ಮೊರೆಹೋಗಿದ್ದಾರೆ.
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಕಳಿಯ ಗ್ರಾ.ಪಂ.ಅಧ್ಯಕ್ಷ ಶರತ್ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಬೊಳ್ಳುಕಲ್ಲು- ಎರುಕಡಪ್ಪು ಅರ್ಧ ಕೀ.ಮೀ.ರಸ್ತೆಗೆ ಶೀಘ್ರದಲ್ಲೇ ೩೦ ಸಾವಿರ ರೂ.ವೆಚ್ಚದಲ್ಲಿ ಜಲ್ಲಿಪುಡಿ ಹಾಕಿ, ಸಾರ್ವಜನಿಕರಿಗೆ ಸಂಚಾರಕ್ಕೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು ಹಾಗೂ ಜಿ.ಪಂ, ತಾ.ಪಂ. ಮತ್ತು ಶಾಸಕರ ಮೂಲಕ ರಸ್ತೆ ದುರಸ್ತಿಗೆ ಅನುದಾನ ಬಿಡುಗಡೆಗೆ ಒತ್ತಾಯಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಪ್ರದೀಪ್ ಕುಮಾರ್, ಕೆ.ಎಮ್.ಅಬ್ದುಲ್ ಕರೀಂ, ಸ್ಥಳೀಯರು ಉಪಸ್ಥಿತರಿದ್ದರು.